ಮಡಿಕೇರಿ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಸರಬರಾಜಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ (Platic rice) ಮಿಶ್ರವಾಗಿರುವ ಸಂಶಯ ವ್ಯಕ್ತವಾಗಿದ್ದು, ಈ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಡಶಾಲಾ ವಿಭಾಗಕ್ಕೆ ಸರಬರಾಜು ಮಾಡಲಾದ ಬಿಸಿಯೂಟದ ಅಕ್ಕಿಯಲ್ಲಿ ಕಲಬೆರಕೆ ಪತ್ತೆಯಾಗಿದೆ. ಅಕ್ಕಿಯ ನಡುವೆ ಅಲ್ಲಲ್ಲಿ ಪ್ಲಾಸ್ಟಿಕ್ ಮಣಿಯಂಥ ವಸ್ತುಗಳು ಸಿಕ್ಕಿವೆ. ಇದು ಜಿಲ್ಲೆಯಲ್ಲಿನ ಶಾಲೆಗಳ ಆಡಳಿತ ಮಂಡಳಿಗಳಿಗೆ ಹೊಸ ತಲೆನೋವು ಜೊತೆ ಆತಂಕ ಮನೆಮಾಡಿದೆ.
ಸೋಮವಾರ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿ ಮಾಡಲು ಮುಂದಾದ ಅಡುಗೆ ಸಿಬ್ಬಂದಿ ಅಕ್ಕಿಯನ್ನು ತೊಳೆಯುವ ಸಂದರ್ಭದಲ್ಲಿ ಪ್ಲಾಸ್ಟಿಕ್‌ನಂಥ ಮಣಿಗಳು ನೀರಿನಲ್ಲಿ ತೇಲುತ್ತಿರುವುದನ್ನು ಕಂಡಿದ್ದಾರೆ. ತಕ್ಷಣವೇ ಎಚ್ಚೆತ್ತ ಆಡುಗೆ ಸಿಬ್ಬಂದಿ ಶಾಲೆಯ ಪ್ರಮುಖರ ಗಮನಕ್ಕೆ ತಂದಿದ್ದಾರೆ.
ಬಿಸಿಯೂಟಕ್ಕೆ ಸರಬರಾಜಾದ ಅಕ್ಕಿಯನ್ನು ಶಿಕ್ಷಕರು ಪರಿಶೀಲಿಸಿದಾಗ ಶಾಲೆಗೆ ರವಾನೆಯಾದ ಒಂದು ಮೂಟೆಯಲ್ಲಿ ಈ ರೀತಿಯ ಅಕ್ಕಿಯ ರೂಪದಲ್ಲಿರುವ ಮಣಿಗಳು ಪತ್ತೆಯಾಗಿದೆ. ಒಂದು ವೇಳೆ ಅಡುಗೆ ಸಿಬ್ಬಂದಿಗಳು ಸರಿಯಾಗಿ ಗಮನಿಸದೆ ಅಡುಗೆ ಮಾಡಿದಲ್ಲಿ ದೊಡ್ಡದೊಂದು ಅನಾಹುತ ನಡೆಯುತಿತ್ತು ಎಂದು ಪೋಷಕರು ಹೇಳಿದ್ದಾರೆ
ಮಡಿಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಎಲ್ಲರೂ ಬಡ ಕುಟುಂಬಕ್ಕೆ ಸೇರಿದವರು. ಈ ಬಡ ಮಕ್ಕಳ ಬಿಸಿಯೂಟದ ಅಕ್ಕಿಯನ್ನೂ ಕೂಡ ಕಲಬೆರಕೆ ಮಾಡಿ ಪೂರೈಸುತ್ತಿರುವುದು ದುರಂತವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ವಾರದ ಹಿಂದೆಯಷ್ಟೇ ಬಂದ ಅಕ್ಕಿಯ ಒಂದು ಚೀಲದಲ್ಲಿ ಈ ರೀತಿಯ ಮಣಿಗಳು ಪತ್ತೆಯಾಗಿದ್ದರ ಬಗ್ಗೆ ಶಾಲಾ ಆಡಳಿತ ಮಂಡಳಿ ಹಾಗೂ ಎಸ್‌ಡಿಎಂಸಿ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೂ ತಂದಿದ್ದು ಸರಬರಾಜಾದ ಅಕ್ಕಿಯನ್ನ ಹಿಂದಿರುಗಿಸಲಾಗಿದೆ.
ಇದು ಕೇವಲ ಮಕ್ಕಳಿಗೆ ಮಾತ್ರ ಸರಬರಾಜಾಗುವ ಪಡಿತರವಲ್ಲ. ನ್ಯಾಯಬೆಲೆ ಅಂಗಡಿಗಳಿಗೂ ಈ ಅಕ್ಕಿ ಸರಬರಾಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲೆಗೆ ಬರುವ ಅಕ್ಕಿ ಬಹುತೇಕ ಹರಿಯಾಣದಿಂದ ಬರುತ್ತಿದೆ ಎನ್ನಲಾಗಿದೆ. ಹರಿಯಾಣದ ಭಾಗದಿಂದ ಅಕ್ಕಿಯನ್ನು ಮಡಿಕೇರಿಯ ಆಹಾರ ಪೂರೈಕೆ ಗೋದಾಮಿ ನಲ್ಲಿ ಶೇಖರಿಸಿಟ್ಟು ಅಲ್ಲಿಂದ ಎಲ್ಲ ಕಡೆಗಳಿಗೂ ಪೂರೈಸಲಾಗುತ್ತಿದೆ.
ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದನ್ನು ಶಾಲೆಯ ಎಸ್.ಡಿ.ಎಂ.ಸಿ ಪ್ರಮುಖರು ಕೊಡಗು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಅಕ್ಕಿ ಎಲ್ಲಿಂದ ಪೂರೈಕೆ ಆಗಿದೆಯೋ ಆ ಕಂಪನಿಯ ಪರವಾನಗಿ ರದ್ದುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್.ಡಿ.ಎಂ.ಸಿ ಆಡಳಿತ ಮಂಡಳಿಯ ಪ್ರಮುಖರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Motivational story | ನಿಮ್ಮಂಥ ಮಗು ಬೇಕು ಎಂದು ಬಂದವಳಿಗೆ ನಾನೇ ನಿಮಗೆ ಮಗುವಾಗುವೆ ಎಂದಿದ್ದರು ವಿವೇಕಾನಂದರು!