ಚಾಮರಾಜನಗರ: ಗುಂಡ್ಲುಪೇಟೆ ತಾಲೂಕು ಬರಗಿ ಸಮೀಪ ಬಂಡೀಪುರ ಓಂಕಾರ ಅರಣ್ಯ ವಲಯದ ವ್ಯಾಪ್ತಿಯ ಜಮೀನೊಂದರಲ್ಲಿ ಅಕ್ರಮವಾಗಿ ಎಳೆಯಲಾಗಿದ್ದ ವಿದ್ಯುತ್ ತಂತಿ ಬೇಲಿಗೆ ತಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾಡಾನೆಯೊಂದನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದ ಬಂಡೀಪುರ ಅರಣ್ಯ ಸಿಬ್ಬಂದಿ ಹಾಗೂ ವೈದ್ಯರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಡಾನೆಗೆ ನೀಡಲಾಗುತ್ತಿದ್ದ ಚಿಕಿತ್ಸೆಯ ದೃಶ್ಯಗಳುಳ್ಳ ಫೋಟೊಗಳ ಸಹಿತ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಇದನ್ನು ನೋಡಿ ನನಗೆ ಸಂತೋಷವಾಯಿತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗೆ ನನ್ನ ಅಭಿನಂದನೆಗಳು. ನಮ್ಮ ಜನರಲ್ಲಿ ಇಂತಹ ಸಹಾನುಭೂತಿ ಇರುವುದು ನಿಜಕ್ಕೂ ಶ್ಲಾಘನೀಯ” ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ: Flower Politics : ಕಾಂಗ್ರೆಸ್ ನಾಯಕರ ಕಿವಿಗೆ ಹೂವಿಟ್ಟು ಕಳುಹಿಸಿದ್ದು ಯಾರು? ಇದರ ಹಿಂದಿನ ಕಾಣದ ಕೈ ಯಾವುದು?
ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಭೂಪೇಂದ್ರ ಯಾದವ್ ಅವರು ಈ ಇಡೀ ಸಂಗತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿ ಶ್ಲಾಘನೆ ವ್ಯಕ್ತಪಡಿಸಿದ್ದರು. “ಬಂಡೀಪುರ ಹುಲಿ ರಕ್ಷಿತಾರಣ್ಯದ ಸಿಬ್ಬಂದಿಯ ಸಕಾಲಿಕ ಕ್ರಮದಿಂದಾಗಿ ವಿದ್ಯುತ್ ಸ್ಪರ್ಶದಿಂದ ಪ್ರಾಣಾಪಾಯದಿಂದ ನರಳುತ್ತಿದ್ದ ಆನೆಯನ್ನು ರಕ್ಷಿಸಲಾಗಿದೆ ಎಂಬ ವಿಷಯ ತಿಳಿದು ನನಗೆ ತುಂಬಾ ಸಂತೋಷವಾಗಿದೆ. ಹೆಣ್ಣು ಆನೆಯನ್ನು ಮತ್ತೆ ಮೀಸಲು ಪ್ರದೇಶಕ್ಕೆ ಬಿಡಲಾಗಿದೆ. ಜತೆಗೆ ಅದರ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ ಎಂದು ಭೂಪೇಂದ್ರ ಯಾದವ್ ಬರೆದುಕೊಂಡಿದ್ದರು.
ಸಚಿವ ಭೂಪೇಂದ್ರ ಯಾದವ್ ಮಾಡಿರುವ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಪ್ರಧಾನಿ, ಖುಷಿಯೊಂದಿಗೆ ಒಂದೆರೆಡು ಸಾಲುಗಳನ್ನು ಬರೆದುಕೊಂಡಿದ್ದಾರೆ.
ಏನಿದು ಪ್ರಕರಣ?
ಗುಂಡ್ಲುಪೇಟೆ ತಾಲೂಕು ಬರಗಿ ಸಮೀಪ ಬಂಡೀಪುರ ಓಂಕಾರ ಅರಣ್ಯ ವಲಯದ ವ್ಯಾಪ್ತಿಯ ಜಮೀನೊಂದರಲ್ಲಿ ಅಕ್ರಮವಾಗಿ ಎಳೆಯಲಾಗಿದ್ದ ವಿದ್ಯುತ್ ತಂತಿ ಬೇಲಿಗೆ ತಾಗಿ ಕಾಡಾನೆಯೊಂದು ಕುಸಿದುಬಿದ್ದಿತ್ತು. ಅದಕ್ಕೆ ತೀವ್ರವಾಗಿ ವಿದ್ಯುತ್ ಆಘಾತವಾಗಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾಡಾನೆಯನ್ನು ಬದುಕಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯಕೀಯ ತಂಡವು ಹರಸಾಹಸವನ್ನೇ ಪಟ್ಟಿದ್ದವು. ಸತತ ನಾಲ್ಕು ಗಂಟೆಗಳ ಚಿಕಿತ್ಸೆಯ ತರುವಾಯ ಕಾಡಾನೆಯು ಜೀವ ಉಳಿಸಿಕೊಂಡಿತ್ತು.
ಇದನ್ನೂ ಓದಿ: Hasana Politics : ರೇವಣ್ಣರನ್ನು ರಾವಣನಿಗೆ ಹೋಲಿಸಿದ ಬಂಡಾಯ ನಾಯಕ ಎ.ಟಿ.ರಾಮಸ್ವಾಮಿ, ಇನ್ನೂ ಏನೇನೋ ಹೇಳಿದ್ದಾರೆ!
ವಿದ್ಯುತ್ ಶಾಕ್ ತಗುಲಿ ಕುಸಿದುಬಿದ್ದಿದ್ದ ಆನೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿಯನ್ನು ನೀಡಿದ್ದರು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಕೂಡಲೇ ಅಲ್ಲಿಗೆ ಪಶುವೈದ್ಯರನ್ನು ಕರೆಸಿಕೊಂಡಿದ್ದರು. ಪಶುವೈದ್ಯರ ತಂಡವು ಅಸ್ವಸ್ಥಗೊಂಡ ಕಾಡಾನೆಗೆ ಸತತವಾಗಿ ಚಿಕಿತ್ಸೆ ನೀಡಿದ್ದರಿಂದ ಅದು ಚೇತರಿಕೆ ಕಂಡಿತ್ತು. ಈ ಇಡೀ ಪ್ರಕ್ರಿಯೆ ಸಾರ್ವಜನಿಕರೂ ಸಾಥ್ ನೀಡಿದ್ದರು.