ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನಿರಂತರವಾಗಿ ಭೇಟಿ ನೀಡುತ್ತಾ ಬರುತ್ತಿದ್ದು, ಸೋಮವಾರ (ಫೆ. ೨೭) ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ಅಲ್ಲಿಂದ ಬೆಳಗಾವಿ ಆಗಮಿಸಿ 10.7 ಕಿ.ಮೀ. ವರೆಗೆ ಬೃಹತ್ ರೋಡ್ ಶೋದಲ್ಲಿ (Road show) ಪಾಲ್ಗೊಳ್ಳುತ್ತಿದ್ದಾರೆ. ಈ ವೇಳೆ ಐವರು ಜನಸಾಮಾನ್ಯರಾದ ಆಟೋ ಚಾಲಕ, ಪೌರ ಕಾರ್ಮಿಕ ಮಹಿಳೆ, ನೇಕಾರ, ರೈತ ಮಹಿಳೆ ಹಾಗೂ ಕಟ್ಟಡ ಕಾರ್ಮಿಕರು ಸ್ವಾಗತ ಕೋರಲಿದ್ದಾರೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಐವರು ಕಾಯಕಯೋಗಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರೆಲ್ಲರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಸೋಮವಾರ ಮಧ್ಯಾಹ್ನ ೨.೩೦ಕ್ಕೆ ಪ್ರಧಾನಿ ರೋಡ್ ಶೋ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಆಟೋ ಚಾಲಕ ಮಯೂರ ಚವಾಣ್, ಪೌರ ಕಾರ್ಮಿಕ ಮಹಿಳೆ ಮೀನಾಕ್ಷಿ ತಳವಾರ, ಕಟ್ಟಡ ಕಾರ್ಮಿಕ ಮಂಗೇಶ ಬಸ್ತವಾಡಕರ್, ರೈತ ಮಹಿಳೆ ಶೀಲಾ ಬಾಬಾರುವಾಕ್ ಖನ್ನುಕರ್, ನೇಕಾರ ಕಲ್ಲಪ್ಪ ಟೋಪಗಿ ಅವರು ಸ್ವಾಗತ ಕೋರಲಿದ್ದಾರೆ.
ಮೋದಿ ಸ್ವಾಗತಕ್ಕೆ ಸಜ್ಜಾಗಿರುವ ಆಟೋ ಚಾಲಕ ಸೇರಿ ಐವರು ಶ್ರಮಿಕರ ಏನು ಹೇಳಿದ್ದಾರೆಂಬ ವಿಡಿಯೊ ಇಲ್ಲಿದೆ
10.7 ಕಿ.ಮೀ. ರೋಡ್ ಶೋ
ಬೆಳಗಾವಿಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು 10.7ಕಿಮೀ ರೋಡ್ ಶೋ ನಡೆಸಲಿದ್ದು, ಎಪಿಎಂಸಿ ಬಳಿಯ ಕೆಎಸ್‌ಆರ್‌ಪಿ ಮೈದಾನದಿಂದ ಚಾಲನೆ ಸಿಗಲಿದೆ. ಕೆಎಸ್‌ಆರ್‌ಪಿ ಮೈದಾನದಿಂದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಬೀದಿ, ಕಪಿಲೇಶ್ವರ ಮಂದಿರ ಬಳಿ ಮೇಲ್ಸೇತುವೆ, ಶಹಾಪುರ ರಸ್ತೆ, ಶಿವಚರಿತ್ರೆ ಮುಂಭಾಗದ ರಸ್ತೆ, ಹಳೆಯ ಪಿಬಿ ರಸ್ತೆ, ಬಿ.ಎಸ್.ಯಡಿಯೂರಪ್ಪ ಮಾರ್ಗವಾಗಿ ಮಾಲಿನಿ ಸಿಟಿ ಮೈದಾನವರೆಗೆ ರೋಡ್ ಶೋ ನಡೆಯಲಿದೆ.
ಇದನ್ನೂ ಓದಿ: Mann Ki Baat: ‘ಮಲಗು ಕಂದ, ಮಲಗು ಕೂಸೆ‘; ಕರ್ನಾಟಕದ ಕವಿ ಮಂಜುನಾಥ್ ಬರೆದ ಲಾಲಿಹಾಡನ್ನು ಪ್ರಶಂಸಿಸಿದ ಪ್ರಧಾನಿ ಮೋದಿ
ಇರಲಿದೆ ಲೈವ್ ಶೋ
ಪ್ರಧಾನಿ ನರೇಂದ್ರ ಮೋದಿ ಅವರ ಈ ರೋಡ್ ಶೋವನ್ನು ಐತಿಹಾಸಿಕವಾಗಿ ದಾಖಲೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ರೋಡ್ ಶೋ ಮಾರ್ಗದಲ್ಲಿ ಲೈವ್ ಶೋಗಳನ್ನು ನಡೆಸಲು ತೀರ್ಮಾನ ಮಾಡಲಾಗಿದೆ. 10.7 ಕಿಮೀ ಮಾರ್ಗದ ರಸ್ತೆಯ ಎರಡು ಬದಿಗಳಲ್ಲಿ 90 ಪಾಯಿಂಟ್‌ಗಳನ್ನು ಗುರುತಿಸಲಾಗಿದೆ.
ಮೋದಿ ಕೊಡುಗೆ ಸಾರಲಿರುವ ನಾನಾ ರಾಜ್ಯಗಳ ಜನ
ದೇಶದ 29 ರಾಜ್ಯ 8 ಕೇಂದ್ರಾಡಳಿತ ಪ್ರದೇಶಗಳ ಜನರು ಅಲ್ಲಿನ ಸ್ಥಳೀಯ ವೇಷಭೂಷಣ ಧರಿಸಿ ಪ್ರಧಾನಿ ಮೋದಿ ನೀಡಿದ ಕೊಡುಗೆಗಳ ಬಗ್ಗೆ ರೋಡ್ ಶೋದಲ್ಲಿ ಪ್ರದರ್ಶಿಸಲಿದ್ದಾರೆ. ಇದಕ್ಕಾಗಿ 29 ರಾಜ್ಯದ 8 ಕೇಂದ್ರಾಡಳಿತ ಪ್ರದೇಶದ ತಲಾ 12 ಜನರನ್ನು ಕರೆಸಿಕೊಳ್ಳಲಾಗಿದೆ. ಸುಮಾರು 400 ಕಲಾವಿದರು ಭಾಗಿಯಾಗಲಿದ್ದಾರೆ.
10 ಸಾವಿರ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ
ರೋಡ್ ಶೋ ಬೆಳಗಾವಿ ದಕ್ಷಿಣ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಪೂರ್ಣಕುಂಭ ಹೊತ್ತ 10 ಸಾವಿರ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಲಿದ್ದಾರೆ. ಕೇಸರಿ ಪೇಟ ತೊಟ್ಟು, ಪೂರ್ಣಕುಂಭ ಹೊತ್ತು ಸ್ವಾಗತಿಸಲಿದ್ದಾರೆ. ಅಲ್ಲದೆ, ಈ ರೋಡ್ ಶೋದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ದೇಶದಲ್ಲಿ ಏನೇನಾಗಿತ್ತು. ನಂತರ ಬಂದ ಮೋದಿ ಯುಗದಲ್ಲಿ ಏನೇನಾಗಿದೆ ಎಂಬುದನ್ನು ಪ್ರದರ್ಶನ ಮಾಡಲಿದ್ದಾರೆಂದು ತಿಳಿದುಬಂದಿದೆ.
ರೋಡ್ ಶೋ ಬಗ್ಗೆ ಶಾಸಕ ಅಭಯ್ ಪಾಟೀಲ್ ಹೇಳಿಕೆ ಇಲ್ಲಿದೆ
ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ
ಶಿವಾಜಿ, ರಾಯಣ್ಣ, ಅಂಬೇಡ್ಕರ್, ಮದಕರಿ ನಾಯಕ, ಚೆನ್ನಮ್ಮ ಹೀಗೆ ಮಹಾಪುರುಷರ ಜೀವನ ಚರಿತ್ರೆ ಲೈವ್ ಶೋ ಸಹ ನಡೆಯಲಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ರೋಡ್ ಶೋಗೆ ಸಾಕ್ಷಿಯಾಗಲಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಧನೆಗಳುಳ್ಳ ಬ್ಯಾನರ್‌ಗಳನ್ನೂ ಹಾಕಲಾಗಿದೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: HD Kumaraswamy: ಮೊದಲು ನಿಮ್ಮ ಕುಟುಂಬವನ್ನು ನೆಟ್ಟಗೆ ಇಟ್ಟುಕೊಳ್ಳಿ; ಜೋಶಿಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು
ಮೋದಿ ಕಾರ್ಯಕ್ರಮವೇನು?
ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಮಾಲಿನಿ ಸಿಟಿ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಾಲಿನಿ ಸಿಟಿ ಮೈದಾನದಲ್ಲಿ ಹತ್ತು ಎಕರೆ ಜಾಗದಲ್ಲಿ ಬೃಹದಾಕಾರದ ಟೆಂಟ್ ನಿರ್ಮಾಣ ಮಾಡಲಾಗಿದ್ದು, 60 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತನ್ನು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. 8 ಕೋಟಿಗೂ ಹೆಚ್ಚು ರೈತರ ಖಾತೆಗೆ ತಲಾ 2000 ರೂಪಾಯಿಯಂತೆ 16 ಸಾವಿರ ಕೋಟಿ ರೂಪಾಯಿ ಜಮೆಯಾಗಲಿದೆ.
ಬಳಿಕ ನವೀಕೃತ ಬೆಳಗಾವಿ ರೇಲ್ವೆ ನಿಲ್ದಾಣ ಉದ್ಘಾಟನೆ, ಬೆಳಗಾವಿ ಕಿತ್ತೂರು ಧಾರವಾಡ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಮೋದಿ, ಬೆಳಗಾವಿ ಲೋಂಡಾ ರೈಲು ಮಾರ್ಗ ಡಬ್ಲಿಂಗ್ ಕಾಮಗಾರಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಲೋಕಾರ್ಪಣೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಫಲಾನುಭವಿಗಳ ಕರೆ ತರಲು ಸಾವಿರಕ್ಕೂ ಹೆಚ್ಚು ಬಸ್
ಮಾಲಿನಿ ಸಿಟಿ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಆಗಮಿಸುವ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಕರೆ ತರಲು ಬೆಳಗಾವಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾವಿರಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಮಾಲಿನಿ ಸಿಟಿ ಮೈದಾನದ ಅರ್ಧ ಕಿ.ಮೀ. ಅಂತರದಲ್ಲಿ ಮೂರು ಸ್ಥಳ ಗುರುತಿಸಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್‌ಗೆ ಮೂರು ಸ್ಥಳಗಳಲ್ಲಿ 50 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಪಾರ್ಕಿಂಗ್ ಸ್ಥಳದಲ್ಲಿಯೇ ಜನರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪಿಯು ಪರೀಕ್ಷೆ ಮುಂದೂಡಿಕೆ
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಪ್ರಥಮ ಪಿಯು ಪರೀಕ್ಷೆಯನ್ನು ಮುಂದೂಡಲಾಗಿದೆ. ಫೆ. 27ಕ್ಕೆ ಜಿಲ್ಲೆಯಲ್ಲಿ ನಡೆಯಬೇಕಿದ್ದ ಪ್ರಥಮ ಪಿಯು ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಜಿಲ್ಲೆಯ 19 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬೇಕಿತ್ತು. ಮುಂದೂಡಿದ ಪರೀಕ್ಷೆಗಳನ್ನು ಮಾರ್ಚ್ 6ರಂದು ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಮೋದಿ ಆಗಮನ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಹಾಗೂ ಖಾಸಗಿ
ವಾಹನಗಳ ಓಡಾಟಕ್ಕೆ ಕೆಲವೆಡೆ ನಿರ್ಬಂಧ ಹೇರಲಾಗಿದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅನನುಕೂಲ ಆಗಬಹುದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.