ಬೀದರ್: ಬೀದರ್ ಜಿಲ್ಲೆಯ ಹುಲಸೂರು ಪಟ್ಟಣದಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡುವ, ಮಿಲೆಟ್ ಪ್ರೊಡ್ಯೂಸರ್ ಕಂಪನಿ (Hulsoor Millet Producer Company) ಬಗ್ಗೆ ತಮ್ಮ 79ನೇ ಮನ್ ಕಿ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಕ್ಕೆ ಎಲ್ಲಿಲ್ಲದ ಬೇಡಿಕೆ. (Mann Ki Baat) ಆರೋಗ್ಯ ವೃದ್ಧಿಗೆ ಹೆಚ್ಚು ಒತ್ತು ನೀಡುವ ಈ ಧಾನ್ಯಗಳ ಬಳಕೆಯನ್ನು ಜನರು ನಿಧಾನವಾಗಿ ಸೇವಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡ ಸಿರಿಧಾನ್ಯ ಬಿತ್ತನೆಗೆ ರೈತರಿಗೆ ಪ್ರೋತ್ಸಾಹಿಸುತ್ತಿದೆ. ಇದೇ ಸಿರಿಧಾನ್ಯ ಮೂಲದ ಉತ್ಪನ್ನಗಳ ಮಾರಾಟದಲ್ಲಿ ಮಹಿಳಾ ಕಿಸಾನ್ ಮಿಲೆಟ್ ಪ್ರೊಡ್ಯೂಸರ್ ಕಂಪನಿ ಯಶಸ್ವಿಯಾಗಿದೆ. ಇದರಿಂದಾಗಿ ರೈತರ ಆದಾಯ ವೃದ್ಧಿಸಿದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದರು.
ಹುಲಸೂರಿನ ಮಿಲೆಟ್ ಪ್ರೊಡ್ಯೂಸರ್ ಕಂಪನಿಯಲ್ಲಿ 308 ಮಹಿಳಾ ಷೇರುದಾರರಿದ್ದಾರೆ. ಈ ಷೇರುದಾರರಲ್ಲಿ 63 ಮಂದಿ ಸಣ್ಣ ರೈತರು, 30 ಮಂದಿ ಮಹಿಳಾ ರೈತರಿದ್ದಾರೆ. ರೈತರು ಬೆಳೆದ ಸಿರಿಧಾನ್ಯವನ್ನು ಖರೀದಿಸಿ, ಅದನ್ನು ಹಿಟ್ಟುಗಳನ್ನಾಗಿಸಿ ಸಂಸ್ಕರಿಸಿ ಮಾರಾಟ ಮಾಡುತ್ತಿದ್ದಾರೆ. ಬೀದರ್ ಜಿಲ್ಲೆಯ ಗಡಿ ತಾಲೂಕು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಹುಲಸೂರು ಪಟ್ಟಣದಲ್ಲಿ 2 ನೇ ಮಾರ್ಚ್ 2021 ರಂದು ಈ ಕಂಪನಿಯನ್ನು ಆರಂಭಿಸಲಾಯಿತು. 9 ಬಗೆಯ ಸಿರಿಧಾನ್ಯಗಳ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ನವಣಿ, ರಾಗಿ, ಸಾವೆ, ಬರಗ, ಸಜ್ಜೆಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ರಾಗಿ ಹಿಟ್ಟು, ಜೋಳದ ಹಿಟ್ಟು, ಸಜ್ಜೆ ಹಿಟ್ಟು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕುಸಬಿ ಎಣ್ಣೆಯನ್ನೂ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಈ ಸಿರಿ ಧಾನ್ಯ ಪದಾರ್ಥಗಳನ್ನು ದೆಹಲಿ, ಬೆಂಗಳೂರು, ಹೈದರಾಬಾದ್, ಬಸವಕಲ್ಯಾಣಕ್ಕೆ ರವಾನಿಸಿ ಮಾರುತ್ತಾರೆ. ಎರಡು ವರ್ಷ ಹಿಂದೆ ಆರಂಭವಾದ ಈ ಕಂಪನಿ, ವಾರ್ಷಿಕ ಲಕ್ಷಾಂತರ ರೂಪಾಯಿ ವಹಿವಾಟು ಮಾಡುತ್ತಿದೆ.
50 ರಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿ ಸಂಸ್ಕರಣ ಘಟಕವನ್ನು ಸ್ಥಾಪಿಸಿದ್ದು, ಉತ್ತಮ ಆದಾಯ ಲಭಿಸುತ್ತಿದೆ.
ಸಿರಿಧಾನ್ಯಗಳಾದ ರಾಗಿ, ಜೋಳ, ಆರ್ಕಾ, ಸಾಮೆ, ಸಜ್ಜೆ, ನವಣೆ, ಕೊರ್ಲೆ, ಉರುಲು, ಬರ್ಗು ಹೀಗೆ ಒಟ್ಟು 9 ಬಗೆಯ ಸಿರಿಧಾನ್ಯಗಳಿಂದ 22 ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಬಹುದಾಗಿದೆ. ಮುಖ್ಯವಾಗಿ ರಾಗಿ ಮಿಲೆಟ್, ಗೋಧಿ ಪೌಡರ್, ಆರ್ಕಾ ಉಪ್ಪಿಟ್ಟು ಸೇರಿದಂತೆ ಹಲವು ಬಗೆಯ ಪೌಡರ್‌ಗಳನ್ನ ತಯಾರು ಮಾಡಿ ನಮ್ಮದೇ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಕಂಪನಿಯ ಸಂಯೋಜಕ ಅಶೋಕ್ ಸಜ್ಜನ ವಿವರಿಸಿದ್ದಾರೆ.