Site icon Vistara News

Modi programme| ಚೆನ್ನೈ- ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ನ. 11ರಂದು ಬೆಂಗಳೂರಿಂದ ಚಾಲನೆ

Vande Bharath

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 11ರಂದು ಬೆಂಗಳೂರಿಗೆ ಆಗಮಿಸಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ಸಿದ್ಧತೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿದರು. ಚೆನ್ನೈ-ಮೈಸೂರು ನಡುವೆ ಓಡಾಡಲಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಅಂದೇ ಮೋದಿ ಚಾಲನೆ ನೀಡುತ್ತಿರುವುದು ವಿಶೇಷ.

ವಿಡಿಯೊ ಕಾನ್ಫರೆನ್ಸ್‌ ವೇಳೆ ಪ್ರಧಾನ ಮಂತ್ರಿಯವರು ತಮ್ಮ ಭೇಟಿಯ ಸಂದರ್ಭದಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ಸವಿವರ ಮಾಹಿತಿಯನ್ನು ಪಡೆದರು. ತಮ್ಮ ಭೇಟಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅಡಚಣೆಯಾಗದಂತೆ ಸಿದ್ಧತೆ ಕೈಗೊಳ್ಳಲು ಸೂಚಿಸಿದರು.

ಸಭೆಯಲ್ಲಿ ರಾಜ್ಯ ಸರ್ಕಾರದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಐಟಿ, ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ರೈಲ್ವೆ ಮಂಡಳಿಯ ಅಧಿಕಾರಿಗಳು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಏನೇನು ಕಾರ್ಯಕ್ರಮ?
೧. ಚೆನ್ನೈ-ಮೈಸೂರು ನಡುವೆ, ದಕ್ಷಿಣ ಭಾರತದ ಮೊದಲ ಹಾಗೂ ಭಾರತದ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ನವೆಂಬರ್‌ ೧೦ರಂದು ಚೆನ್ನೈನಿಂದ ಈ ರೈಲಿಗೆ ಚಾಲನೆ ನೀಡುವ ಚರ್ಚೆಗಳು ನಡೆದಿದ್ದವು. ಈಗ ಅದು ಬೆಂಗಳೂರಿಗೆ ಶಿಫ್ಟ್‌ ಆಗಿದೆ. ಚೆನ್ನೈನಿಂದ ಹೊರಡುವ ರೈಲಿಗೆ ಇಲ್ಲಿಂದಲೇ ಅವರು ಚಾಲನೆ ನೀಡುವರು. ಚೆನ್ನೈನಿಂದ ಮೈಸೂರಿಗೆ ಈಗ ಇರುವ ಶತಾಬ್ದಿ ಎಕ್ಸ್‌ಪ್ರೆಸ್‌ ೭ ಗಂಟೆಯಲ್ಲಿ ಪ್ರಯಾಣ ಪೂರ್ತಿಗೊಳಿಸಿದರೆ ವಂದೇ ಭಾರತ್‌ ರೈಲು ಕೇವಲ ಆರು ಗಂಟೆಯಲ್ಲಿ ಕ್ರಮಿಸಲಿದೆ.

೨. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಉದ್ಘಾಟನೆ ನಡೆಯಲಿದೆ. ಇನ್ನು 5000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ವರ್ಷಕ್ಕೆ 2.5 ಕೋಟಿ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹೊಂದಿದೆ. ಉದ್ಯಾನವನದಲ್ಲಿ ರಾಮಾಯಣ, ಮಹಾಭಾರತದ ಕಾಲದ ಸಸ್ಯಗಳನ್ನು ಗುರುತಿಸಿ, ನೆಡಲಾಗಿದೆ. ನೀರಿನ ಮರುಬಳಕೆ, ವಿದ್ಯುತ್ ಬಳಕೆಯಲ್ಲಿ ಸುಸ್ಥಿರತೆಯನ್ನು ಹೊಂದಿರುವ ಟರ್ಮಿನಲ್ ಇದಾಗಿದೆ

೩. ವಿಮಾನ ನಿಲ್ದಾಣದ ಆವರಣದಲ್ಲಿರುವ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ.

೪. ೧೦೮ ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣದ ಬಳಿಕ ಸಾರ್ವಜನಿಕ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ | Statue of Prosperity | ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಸಲುವಾಗಿ ನ.8ಕ್ಕೆ ಎಲ್ಲೆಡೆಯಿಂದ ಬರಲಿದೆ ಪವಿತ್ರ ಮೃತ್ತಿಕೆ

Exit mobile version