ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದು (PM Modi US Visit), ಭಾರತಕ್ಕೆ ನೆರವಾಗುವ ದಿಸೆಯಲ್ಲಿ ಹಲವು ರೀತಿ ನೆರವಾಗುತ್ತಿದೆ. ಈಗಾಗಲೇ, ಭಾರತೀಯರಿಗೆ ಎಚ್-1B ವೀಸಾ ನೀಡುವುದು, ವೀಸಾ ನಿಯಮ ಸಡಿಲಿಸುವುದು, ಸ್ಟ್ರೈಕರ್ ಶಸ್ತ್ರಸಜ್ಜಿತ ವಾಹನಗಳು, ಹೌವಿಟ್ಜರ್ ಗನ್‌ಗಳನ್ನು ನೀಡುವ ಕುರಿತು ಒಪ್ಪಂದಗಳಿಗೆ ಮೋದಿ ಸಹಿ ಹಾಕಲಿದ್ದಾರೆ. ಇದರ ಬೆನ್ನಲ್ಲೇ, ಕರ್ನಾಟಕದ ಬೆಂಗಳೂರು ಹಾಗೂ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಕಾನ್ಸುಲೇಟ್ ಕಚೇರಿಗಳನ್ನು ತೆರೆಯಲು ನಿರ್ಧರಿಸಿದೆ.
“ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯ ವೃದ್ಧಿ, ಜನರಿಗೆ ನೇರವಾಗಿ ಸೇವೆಗಳನ್ನು ಒದಗಿಸುವ ದಿಸೆಯಲ್ಲಿ ಬೆಂಗಳೂರು ಹಾಗೂ ಅಹ್ಮದಾಬಾದ್‌ನಲ್ಲಿ ಹೊಸ ಕಾನ್ಸುಲೇಟ್ ಕಚೇರಿಗಳನ್ನು ಸ್ಥಾಪಿಸಲು ಅಮೆರಿಕ ಸರ್ಕಾರ ಉದ್ದೇಶಿಸಿದೆ. ಸೀಟಲ್‌ನಲ್ಲಿ ಈಗಾಗಲೇ ಭಾರತವು ಕಾನ್ಸುಲೇಟ್ ಕಚೇರಿ ನಿರ್ಮಿಸುತ್ತಿದೆ. ಈಗ ಅಮೆರಿಕ ಕೂಡ ಭಾರತದ ಎರಡು ನಗರಗಳಲ್ಲಿ ರಾಯಭಾರ ಕಚೇರಿಗಳನ್ನು ಸ್ಥಾಪಿಸಲಿದೆ” ಎಂದು ಶ್ವೇತ ಭವನ ಪ್ರಕಟಣೆ ತಿಳಿಸಿದೆ.
ಕಳೆದ ವರ್ಷ ಭಾರತದ ವಿದ್ಯಾರ್ಥಿಗಳಿಗೆ 1.25 ಲಕ್ಷ ವೀಸಾ ನೀಡಲಾಗಿದೆ. ಕಳೆದ ವರ್ಷವೇ ಭಾರತೀಯರಿಗೆ ನೀಡುವ ವೀಸಾ ಶೇ.20ರಷ್ಟು ಏರಿಕೆಯಾಗಿದ್ದು, ಅಮೆರಿಕ ನೀಡುವ ವಿದ್ಯಾರ್ಥಿ ವೀಸಾ ಪಡೆಯುವ ಹೆಚ್ಚು ವಿದ್ಯಾರ್ಥಿಗಳು ಭಾರತದವರೇ ಆಗಿದ್ದಾರೆ. ಇದರ ಬೆನ್ನಲ್ಲೇ, ಇನ್ನಷ್ಟು ಎಚ್-1ಬಿ ವೀಸಾ ನಿಯಮಗಳನ್ನು ಸಡಿಲಗೊಳಿಸಿ, ಹೆಚ್ಚಿನ ಜನರಿಗೆ ವೀಸಾ ನೀಡಲು ಅಮೆರಿಕ ನಿಯಮ ರೂಪಿಸುತ್ತಿದೆ ಎಂದು ಕೂಡ ತಿಳಿದುಬಂದಿದೆ.
ಇದನ್ನೂ ಓದಿ: PM Modi US Visit: ಜನಗಣಮನ ಮೊಳಗುವಾಗ ಮಳೆಯಲ್ಲೇ ನಿಂತು ಗೌರವ ಸಲ್ಲಿಸಿದ ಮೋದಿ; ನಮೋ ಎಂದ ಜನ
ಭಾರತದ ರಕ್ಷಣಾ ಕ್ಷೇತ್ರದ ಏಳಿಗೆಗೆ ಮಹತ್ವದ ಒಪ್ಪಂದ ನಡೆಯಲಿದೆ. ಭಾರತ ಹಾಗೂ ಅಮೆರಿಕದ ರಕ್ಷಣಾ ಸಹಕಾರ ಒಪ್ಪಂದ ಅಡಿಯಲ್ಲಿ ಭಾರತಕ್ಕೆ ಎಂಟು ಚಕ್ರಗಳ ಶಸ್ತ್ರಸಜ್ಜಿತ ವಾಹನಗಳಾದ ಸ್ಟ್ರೈಕರ್, ಎಂ777 ಹೌವಿಟ್ಜರ್ ಗನ್‌ಗಳ ನವೀಕರಣ (Upgradation), ಎಂಕ್ಯೂ-9 ರೀಪರ್ ಡ್ರೋನ್‌ಗಳ ಹಾಗೂ ಭಾರತದಲ್ಲಿಯೇ ಜಿಇ-ಎಫ್414 ಯುದ್ಧವಿಮಾನಗಳ ಎಂಜಿನ್‌ಗಳನ್ನು ಉತ್ಪಾದನೆ ಮಾಡಲು ಶೇ.100ರಷ್ಟು ತಂತ್ರಜ್ಞಾನದ ವರ್ಗಾವಣೆಗೆ ಅಮೆರಿಕ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಹಕಾರ ಸಂಬಂಧವು ಇನ್ನಷ್ಟು ವೃದ್ಧಿಯಾಗಲಿದೆ ಎಂದು ತಿಳಿದುಬಂದಿದೆ.