ಬೆಂಗಳೂರು: ಬ್ರಿಕ್ಸ್ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಜೊಹಾನ್ಸ್‌ಬರ್ಗ್‌ನಿಂದ ನೇರವಾಗಿ ಶನಿವಾರ (ಆ.26) ಬೆಳಗ್ಗೆ ಬೆಂಗಳೂರಿಗೆ (Modi in Bangalore) ಆಗಮಿಸಲಿದ್ದಾರೆ. ಚಂದ್ರಯಾನ- 3 (Chandrayaan 3) ಮಿಷನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿ ಇಸ್ರೋ (ISRO) ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಪ್ರಧಾನಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಬುಧವಾರ ಸಂಜೆ 6.04ರ ಹೊತ್ತಿಗೆ ಚಂದ್ರಯಾನ 3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆಗಿತ್ತು. ಬ್ರಿಕ್ಸ್ ಶೃಂಗಸಭೆ ನಿಮಿತ್ತ ದಕ್ಷಿಣ ಆಫ್ರಿಕದ ಜೊಹಾನ್ಸ್‌ಬರ್ಗ್‌ನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಂದಲೇ ಚಂದ್ರಯಾನದ ಇಸ್ರೋ ಲೈವ್ ವೀಕ್ಷಿಸಿದ್ದರಲ್ಲದೆ, ಸಾಫ್ಟ್ ಲ್ಯಾಂಡಿಂಗ್ ಆದ ಬಳಿಕ ತೆರೆಯ ಮೇಲೆ ಬಂದು ವಿಜ್ಞಾನಿಗಳ ತಂಡಕ್ಕೆ ಶುಭಾಶಯ ತಿಳಿಸಿದ್ದರು. ಇದೀಗ ಇಸ್ರೋ ವಿಜ್ಞಾನಿಗಳನ್ನು ನೇರವಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಲು ಅವರು ಶನಿವಾರ (ಆ.26) ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.
ಮೋದಿ ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ
ಬೆಳಗ್ಗೆ 5.55: ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ.
6 ರಿಂದ 6.30: ಸ್ವಾಗತ ಕಾರ್ಯಕ್ರಮ, ಎಚ್‌ಎಎಲ್‌ನಲ್ಲಿ ಸಭೆ
6.35: ರಸ್ತೆ ಮಾರ್ಗವಾಗಿ ಇಸ್ರೋ ಕಚೇರಿ ಕಡೆಗೆ
7 ಗಂಟೆ: ವಿಜ್ಞಾನಿಗಳ ಭೇಟಿ ಬಳಿಕ ಪ್ರಧಾನಿ ಮೋದಿ ಮಾತುಕತೆ ಆರಂಭ
7-8: ಇಸ್ರೋ ಕಚೇರಿಯಲ್ಲಿ ವಿಜ್ಞಾನಿಗಳಿಗೆ ಅಭಿನಂದನೆ
8.05ಕ್ಕೆ: ಇಸ್ರೋ ಕಚೇರಿಯಿಂದ ಹೊರಟು 8.35ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣ
ಬೆ. 8.35ಕ್ಕೆ: ಎಚ್‌ಎಎಲ್‌ನಿಂದ ಹೊರಟು 11.35ಕ್ಕೆ ನವದೆಹಲಿಗೆ ತಲುಪಲಿದ್ದಾರೆ.
ಇದನ್ನೂ ಓದಿ | Chandrayaan 3: ಸರ್ವ ಸನ್ನದ್ಧವಾಗಿರುವ ಪ್ರಜ್ಞಾನ್ ರೋವರ್! ಲ್ಯಾಂಡರ್‌ನಿಂದ ಹೊರ ಬಂದ ಕ್ಷಣಗಳೇ ಅತ್ಯುದ್ಭುತ!
ಮೋದಿ ರೋಡ್ ಶೋ ಕ್ಯಾನ್ಸಲ್; ಬಿಜೆಪಿ ಧ್ವಜಕ್ಕಿಲ್ಲ ಅವಕಾಶ!
ಚಂದ್ರಯಾನ – 3ರ (Chandrayaan 3) ಯಶಸ್ಸನ್ನು ಇಸ್ರೋ (ISRO) ವಿಜ್ಞಾನಿಗಳ ಜತೆಗೆ ಸಂಭ್ರಮಿಸುವ ಸಲುವಾಗಿ ದಕ್ಷಿಣ ಆಫ್ರಿಕಾದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ (ಆಗಸ್ಟ್ 26) ನೇರವಾಗಿ ಬೆಂಗಳೂರಿಗೆ (Modi in Bangalore) ಆಗಮಿಸಲಿದ್ದು, ಈ ವೇಳೆ ರೋಡ್ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಈಗ ಮೋದಿ ರೋಡ್ ಶೋ ರದ್ದಾಗಿದೆ ಎಂದು ತಿಳಿದು ಬಂದಿದೆ. ಹಾಗಂತ ಮೋದಿ ಅವರು ಈ ಮಾರ್ಗವಾಗಿಯೇ ಬರಲಿದ್ದಾರೆ. ಈ ವೇಳೆ ಎಲ್ಲಿಯೂ ಬಿಜೆಪಿ ಧ್ವಜ ಕಾಣುವಂತಿಲ್ಲ. ತ್ರಿವರ್ಣ ಧ್ವಜ ಮಾತ್ರವೇ ಕಾಣಬೇಕು. ಹೀಗಂತ ಖಡಕ್ ಆದೇಶ ಬಂದಿದೆ.
ದಕ್ಷಿಣ ಆಫ್ರಿಕಾದಿಂದ ನವ ದೆಹಲಿಗೆ ಬರಬೇಕಿದ್ದ ಅವರು ನೇರವಾಗಿ ಬೆಂಗಳೂರಿಗೆ ಧಾವಿಸುತ್ತಿದ್ದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಈ ಮಧ್ಯೆ ದಾರಿಯಲ್ಲಿ ರೋಡ್ ಶೋ ನಡೆಸಲು ತೀರ್ಮಾನ ಮಾಡಲಾಗಿತ್ತು. ಮುಂದಿನ ಲೋಕಸಭಾ ಚುನಾವಣೆಯ ತಯಾರಿಯ ಭಾಗವಾಗಿ ರಾಜ್ಯ ಬಿಜೆಪಿ ಈ ತೀರ್ಮಾನವನ್ನು ಕೈಗೊಂಡಿತ್ತು. ಆದರೆ, ಪ್ರಧಾನಿ ಕಚೇರಿಯಿಂದ ಇನ್ನೂ ಈ ಬಗ್ಗೆ ಅನುಮತಿ ಸಿಕ್ಕಿಲ್ಲ ಎಂದೇ ಹೇಳಲಾಗುತ್ತಿದೆ. ಹಾಗಾಗಿ ಸದ್ಯಕ್ಕೆ ಮೋದಿ ರೋಡ್ ಶೋ ಇಲ್ಲ ಎನ್ನಲಾಗುತ್ತಿದೆ. ಹಾಗಂತ ಮೋದಿ ಈಗ ಹೇಳಲಾದ ಮಾರ್ಗದ ಮೂಲಕವೇ ತೆರಳಲಿದ್ದಾರೆ. ಆದರೆ, ಈ ವೇಳೆ ಎಲ್ಲಿಯೂ ಸಹ ಬಿಜೆಪಿಯ ಧ್ವಜವನ್ನು ಕಟ್ಟಬಾರದು ಎಂಬ ಆದೇಶ ಬಂದಿದೆ.
ಇದನ್ನೂ ಓದಿ | PM Narendra Modi : ಸೆ.1ರಿಂದ ಬಿಜೆಪಿ ಮತದಾರ ಚೇತನ ಅಭಿಯಾನ; 58 ಸಾವಿರ ಬೂತ್‌ಗಳಲ್ಲಿ ಬಿಎಲ್‌ಎ ನೇಮಕ
ಇಂಥದ್ದೊಂದು ಆದೇಶ ಬಂದಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಲ್ಲ. ಸ್ವತಃ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಎಂಬುದು ವಿಶೇಷ. ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬರಲಿರುವ ನರೇಂದ್ರ ಮೋದಿ, ನೇರವಾಗಿ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ತೆರಳಿ ಅಲ್ಲಿ ವಿಜ್ಞಾನಿಗಳ ಜತೆ ಚಂದ್ರಯಾನ- 3ರ (Chandrayaan 3) ಯಶಸ್ಸನ್ನು ಸಂಭ್ರಮಿಸಲಿದ್ದಾರೆ.
ಎಚ್‌ಎಎಲ್ ವಿಮಾನ ನಿಲ್ದಾಣ ಬಳಿ ಹಾಗೂ ಜಾಲಹಳ್ಳಿ ಬಳಿ ಪ್ರಧಾನಿ ನರೇಂದ್ರ ಮೋದಿ ಅವರು ತೆರಳುವ ಮಾರ್ಗದಲ್ಲಿ ಅವರನ್ನು ವೀಕ್ಷಿಸಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಮಾರ್ಗದುದ್ದಕ್ಕೂ ಜನರು ವೀಕ್ಷಣೆ ಮಾಡಬಹುದು. ಆದರೆ, ಎಲ್ಲಿಯೂ ಸಹ ಬಿಜೆಪಿ ಧ್ವಜವನ್ನು ಬಳಕೆ ಮಾಡುವಂತಿಲ್ಲ. ಎಲ್ಲರೂ ತ್ರಿವರ್ಣ ಧ್ವಜವನ್ನಷ್ಟೇ ಹಿಡಿಯಬೇಕು. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಸ್ಪಷ್ಟ ಸೂಚನೆ ಬಂದಿದೆ.