ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮೈಸೂರಿಗೆ ಆಗಮಿಸಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ನಗರಿಗೆ ಅವರ 7ನೇ ಭೇಟಿ ಇದಾಗಿದೆ. ಇದುವರೆಗೆ ಮೂರು ಬಾರಿ ಮಾತ್ರ ಅವರು ಇಲ್ಲಿ ಉಳಿದುಕೊಂಡಿದ್ದು, ಸೋಮವಾರ ಉಳಿದುಕೊಂಡರೆ ನಾಲ್ಕನೇ ಬಾರಿ ನಗರಲ್ಲಿ ಅವರು ವಾಸ್ತವ್ಯ ಹೂಡಿದಂತಾಗಲಿದೆ.
ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ಅವರನ್ನು ಸ್ವಾಗತಿಸಲು ಮೈಸೂರು ಮತ್ತು ಬೆಂಗಳೂರಿನಲ್ಲಿ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಸೋಮವಾರ ಸಂಜೆ ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಹೊರಟು 4.50ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 6 ಗಂಟೆಗೆ ಆಯೋಜಿಸಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಗಳ ಸಮಾವೇಶದಲ್ಲಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಇದೇ ವೇದಿಕೆ ಮೂಲಕ ರೈಲ್ವೆ ನಿಲ್ದಾಣ ವಿಸ್ತರಣೆ ಕಾಮಗಾರಿಗೆ ಶಿಲಾನ್ಯಾಸ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ನಿರ್ಮಿಸಲಾಗಿರುವ ಶ್ರೇಷ್ಠತಾ ಕೇಂದ್ರದ ಉದ್ಘಾಟನೆ ನೆರವೇರಿಸಲಿದ್ದಾರೆ.
ರಸ್ತೆ ಮೂಲಕ ಸುತ್ತೂರು ಶಾಖಾ ಮಠಕ್ಕೆ ತೆರಳಿ ವಿದ್ಯಾರ್ಥಿನಿಲಯ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಿದ್ದಾರೆ. ಚಾಮುಂಡಿಬೆಟ್ಟಕ್ಕೆ ರಾತ್ರಿ 8.30ಕ್ಕೆ ಭೇಟಿ ನೀಡಲಿದ್ದು, ತಾಯಿ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಲಿದ್ದಾರೆ. ರಾತ್ರಿ ರ್ಯಾಡಿಷನ್ ಬ್ಲ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜೂ.21 ರಂದು ಬೆಳಗ್ಗೆ 6.30ಕ್ಕೆ ಅರಮನೆ ಮೈದಾನದಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಭದ್ರತಾ ಪರಿಶೀಲನೆ
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಅಂತಿಮ ಸುತ್ತಿನ ಭದ್ರತಾ ಪರಿಶೀಲನೆ ನಡೆಸಲಾಯಿತು. ಮಂಡಕಳ್ಳಿ ವಿಮಾನ ನಿಲ್ದಾಣ, ಮೈಸೂರು- ನಂಜನಗೂಡು ಹೆದ್ದಾರಿ, ಚಾಮರಾಜ ಜೋಡಿ ರಸ್ತೆ- ಮಹಾರಾಜ ಕಾಲೇಜು ಮೈದಾನ, ಚಾಮುಂಡಿಬೆಟ್ಟ ತಪ್ಪಲಿನ ಸುತ್ತೂರು ಮಠ, ಚಾಮುಂಡಿಬೆಟ್ಟದ ರಸ್ತೆಗಳಲ್ಲಿ ವಿಶೇಷ ಭದ್ರತಾ ಪಡೆ ಹಾಗೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಿದರು.
ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳಗಳೊಂದಿಗೆ ಭದ್ರತಾ ತಪಾಸಣೆ ನಡೆಸಲಾಯಿತು. ಮೋದಿ ಸಂಚರಿಸುವ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ರಸ್ತೆ ಬದಿ ವ್ಯಾಪಾರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಲಾಗಿದೆ.
ಮಾಲ್ ಆಫ್ ಮೈಸೂರು ಬಂದ್
ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯದ ಹಿನ್ನೆಲೆಯಲ್ಲಿ ರಾಡಿಷನ್ ಬ್ಲ್ಯೂ ಹೋಟೆಲ್ ಅನ್ನು ಒಂದು ದಿನ ಮುಂಚಿತವಾಗಿಯೇ ಎಸ್‌ಪಿಜಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸಮೀಪದ ಮಾಲ್ ಆಫ್ ಮೈಸೂರು ವಹಿವಾಟನ್ನೂ ಸ್ಥಗಿತಗೊಳಿಸಲಾಗಿದೆ. ಮಾಲ್‌ಗೆ ಬೀಗ ಹಾಕಿಸಲಾಗಿದ್ದು, ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಎರಡು ದಿನಗಳವರೆಗೆ ಚಲನಚಿತ್ರ ಪ್ರದರ್ಶನವನ್ನೂ ರದ್ದುಪಡಿಸಲಾಗಿದೆ.
ಸ್ವರ್ಣಲೇಪಿತ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೈಸೂರಿನ ಚಿನ್ನಾಭರಣ ವ್ಯಾಪಾರಿಯೊಬ್ಬರು ಸ್ವರ್ಣ ಲೇಪನವುಳ್ಳ ಉಡುಗೊರೆ ಸಿದ್ಧಪಡಿಸಿದ್ದಾರೆ. ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೋದಿ ಅವರಿಗೆ ನೆನಪಿನ ಕಾಣಿಕೆ ನೀಡುವ ಸಲುವಾಗಿ ವ್ಯಾಪಾರಿಗಳು ಸ್ಮರಣಿಕೆ ಸಿದ್ಧಪಡಿಸಿದ್ದಾರೆ. ಮೈಸೂರು ಅರಮನೆ, ಮೋದಿ ಅವರ ಯೋಗದ ಭಂಗಿ ಹಾಗೂ ಭಾವಚಿತ್ರ ಒಳಗೊಂಡ ಬಂಗಾರ ಲೇಪಿತ ಕೆತ್ತನೆ ಮಾಡಲಾಗಿದೆ.
ಚಿತ್ರಪಟದಲ್ಲಿ ಯೋಗಕ್ಕೆ ಸಂಬಂಧಪಟ್ಟ ಶ್ಲೋಕಗಳನ್ನೂ ಅಳವಡಿಸಲಾಗಿದೆ. ನವರತ್ನ ಜ್ಯುವೆಲ್ಲರ್ ವತಿಯಿಂದ ನೆನಪಿನ ಕಾಣಿಕೆ ಸಿದ್ಧಪಡಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ ಅವರ ಮೂಲಕ ಪ್ರಧಾನಿಗೆ ನೀಡಲು ಮುಂದಾಗಿದ್ದಾರೆ.
ಲಕ್ಷ ಜನರ ಸಮಾವೇಶ
ಜೂ.20ರಂದು ಸಂಜೆ 6 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಮಾರು ಒಂದು ಲಕ್ಷ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಆಯಾ ತಹಸೀಲ್ದಾರ್‌ಗಳ ನೇತೃತ್ವದಲ್ಲಿ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರದ ವತಿಯಿಂದಲೇ ಜನರನ್ನು ಸೇರಿಸಲಾಗುವುದು. ಆಯ್ದ 20 ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಇದಕ್ಕಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.
ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ವಾಟರ್ ಪ್ರೂಫ್ ವೇದಿಕೆ ಮಾಡಲಾಗಿದ್ದು, ಆಸನ ಮತ್ತು ಎಲ್‌ಇಡಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮುಕ್ತ ಅವಕಾಶವಿದ್ದು, ನೋಂದಣಿ ಅಗತ್ಯವಿಲ್ಲ. ಆದರೆ ಕಾರ್ಯಕ್ರಮ ಆರಂಭಕ್ಕೂ ಒಂದು ಗಂಟೆ ಮುಂಚಿತವಾಗಿ ಬಂದು ಆಸೀನರಾಗಬೇಕು. ಭದ್ರತಾ ತಪಾಸಣೆ ವೇಳೆ ಪೊಲೀಸರೊಂದಿಗೆ ಸಹಕಾರ ನೀಡುವಂತೆ ಕೋರಲಾಗಿದೆ.
ಇದನ್ನೂ ಓದಿ | ಬೆಂಗಳೂರಿಗೆ ಪ್ರಧಾನಿ ಮೋದಿ; ರಸ್ತೆಗಳ ಸಂಚಾರ ಬದಲು