ಬೆಂಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಉದ್ಘಾಟನೆ, ಬೆಂಗಳೂರಿನ ವೈಟ್‌ಫೀಲ್ಡ್-ಕೆ.ಆರ್.ಪುರ ಮೆಟ್ರೋ ಮಾರ್ಗ ಉದ್ಘಾಟನೆ ಹಾಗೂ ದಾವಣಗೆರೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು, ಪ್ರಧಾನಿ (Modi In Karnataka) ಕಾರ್ಯಕ್ರಮಗಳ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಪ್ರಧಾನಿ ಕಾರ್ಯಕ್ರಮಗಳ ವೇಳಾಪಟ್ಟಿ
- ಬೆ. 10.25ಕ್ಕೆ ಬೆಂಗಳೂರಿನ ಎಚ್ಎಎಲ್ ಏರ್ಪೋರ್ಟ್ಗೆ ಆಗಮಿಸಿ, ಹೆಲಿಕಾಪ್ಟರ್ನಲ್ಲಿ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ
- ಬೆ. 10.50ಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಗೆ ಆಗಮನ, ಬೆ. 11.15ಕ್ಕೆ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ, ಸಂಶೋಧನಾ ಸಂಸ್ಥೆ ಉದ್ಘಾಟನೆ
- ಮಧ್ಯಾಹ್ನ 1.45ಕ್ಕೆ ವೈಟ್ಫೀಲ್ಡ್ಗೆ ಆಗಮನ, ಮಧ್ಯಾಹ್ನ 1.50ಕ್ಕೆ ವೈಟ್‌ಫೀಲ್ಡ್-ಕೆ.ಆರ್.ಪುರಂ ಮೆಟ್ರೋ ಮಾರ್ಗ ಉದ್ಘಾಟನೆ ಬಳಿಕ ದಾವಣಗೆರೆಗೆ ನಿರ್ಗಮನ
- ಸಂಜೆ 3.30ಕ್ಕೆ ದಾವಣಗೆರೆಯ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ
- ಸಂಜೆ 5.15ಕ್ಕೆ ದಾವಣಗೆರೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ನವ ದೆಹಲಿಗೆ ಪ್ರಯಾಣ
ಶುಕ್ರವಾರದಿಂದಲೇ ನಂದಿ ಗಿರಿಧಾಮದಲ್ಲಿ ಸಾರ್ವಜನಿಕರಿಗೆ ನಿರ್ಬಂಧ
ಚಿಕ್ಕಬಳ್ಳಾಪುರ: ಮಾರ್ಚ್ 25ರಂದು ಬೆಳಗ್ಗೆ ಮುದ್ದೇನಹಳ್ಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿ ಗಿರಿಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಮಾರ್ಚ್ 24ರಂದು ಬೆಳಗ್ಗೆ 10 ಗಂಟೆಯಿಂದ ಮಾರ್ಚ್ 25ರ ಮಧ್ಯಾಹ್ನ 2 ಗಂಟೆವರೆಗೂ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಆದೇಶ ಹೊರಡಿಸಿದ್ದಾರೆ. ನಂದಿಗಿರಿಧಾಮದ ಅತಿಥಿ ಗೃಹದಲ್ಲಿ ಪೊಲೀಸ್ ಅಧಿಕಾರಿಗಳು, ಎಸ್ಪಿಜಿ ಅಧಿಕಾರಿಗಳು ಹಾಗೂ ಪ್ರಧಾನಿಯವರ ಭದ್ರತಾ ಸಿಬ್ಬಂದಿ ತಂಗಿದ್ದಾರೆ. ಅಧಿಕಾರಿಗಳ ತುರ್ತು ಸಂಚಾರಕ್ಕೆ ಅನುಕೂಲ ಕಲ್ಪಿಸಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
13.71 ಕಿ.ಮೀ ಉದ್ದದ ವೈಟ್‌ಫೀಲ್ಡ್-ಕೆ.ಆರ್.ಪುರ ವಿಸ್ತರಿತ ಮಾರ್ಗ ಉದ್ಘಾಟನೆ
ನಮ್ಮ ಮೆಟ್ರೋ 2ನೇ ಹಂತದ ರೀಚ್-1 ವಿಸ್ತರಣಾ ಯೋಜನೆಯ 13.71 ಕಿ.ಮೀ ಉದ್ದದ ವೈಟ್‌ಫೀಲ್ಡ್-ಕೆ.ಆರ್.ಪುರ ವಿಸ್ತರಿತ ನೇರಳೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾ.25ರಂದು ಉದ್ಘಾಟನೆ ಮಾಡಲಿದ್ದಾರೆ. ಈ ಕಾಮಗಾರಿಗೆ 4800 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ಮಾರ್ಗದಲ್ಲಿ 12 ಮೆಟ್ರೋ ನಿಲ್ದಾಣಗಳಿವೆ. ವೈಟ್‌ಫೀಲ್ಡ್‌ನಿಂದ ಕೆ.ಆರ್.ಪುರಕ್ಕೆ ಮೆಟ್ರೋ ರೈಲು 24 ನಿಮಿಷಗಳಲ್ಲಿ ತಲುಪಲಿದ್ದು, 10 ರಿಂದ 12 ನಿಮಿಷಗಳಿಗೆ ಒಂದರಂತೆ 7 ರೈಲುಗಳು ಸಂಚಾರ ಮಾಡಲಿವೆ. ಉದ್ಘಾಟನೆಯಾದ ಮರುದಿನದಿಂದಲೇ ವಾಣಿಜ್ಯ ಸಂಚಾರ ಆರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲ್ವೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
ಇನ್ನು ಇದೇ ಮಾರ್ಗದ ಬೈಯಪ್ಪನಹಳ್ಳಿ-ಕೆ.ಆರ್.ಪುರ ನಿಲ್ದಾಣಗಳ ನಡುವೆ 2 ಕಿ.ಮೀ. ಉದ್ದದ ಮೆಟ್ರೋ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಇದು ಜೂನ್ ಅಂತ್ಯಕ್ಕೆ ಮುಕ್ತಾಯವಾಗುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿನ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ ಕಾಮಗಾರಿ ಪೂರ್ಣವಾದ ಬಳಿಕ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಏರ್ಪಡಲಿದೆ.