ಬೆಂಗಳೂರು: ಚಂದ್ರಯಾನ-3ರ (Chndrayaan 3) ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ವೈಭವದ ಸ್ವಾಗತ ಕೋರಲಾಯಿತು.
ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರು ಬಂದಿಳಿದಿದ್ದು, ಈ ಸಂದರ್ಭದಲ್ಲಿ ರಾಜ್ಯದ ಪ್ರಮುಖ ನಾಯಕರು ಹಾಜರಿದ್ದು ಸ್ವಾಗತ ಕೋರಿದರು. ದಕ್ಷಿಣ ಆಫ್ರಿಕದ ಬ್ರಿಕ್ಸ್ ಶೃಂಗ ಸಭೆಯಿಂದ ಅವರು ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ.
ಪ್ರಧಾನಿ ಮೋದಿ ಸ್ವಾಗತಕ್ಕೆ ಜನ ಕಾತರಗೊಂಡಿದ್ದು, ಎಚ್‌ಎಎಲ್ ಬಳಿ ಹಾಗೂ ಜಾಲಹಳ್ಳಿ ಕ್ರಾಸ್‌ನ ಮುಖ್ಯ ರಸ್ತೆಯಲ್ಲಿ ಜನ ಜಮಾವಣೆಗೊಂಡರು. ಬ್ಯಾರಿಕೇಡ್‌ನ ಒಂದು ಭಾಗದಲ್ಲಿ ನಿಂತು ಭಾರತದ ತ್ರಿವರ್ಣ ಧ್ವಜ ಹಿಡಿದು ಸ್ವಾಗತ ಕೋರಿದರು. ಡೊಳ್ಳು ಕುಣಿತ, ವೀರಗಾಸೆ ಮತ್ತಿತರ ಜನಪದ ನೃತ್ಯಗಳ ಮೂಲಕ ಸ್ವಾಗತ ಕೋರಲಾಯಿತು.
ಪ್ರಧಾನಿಗಳ ಆಗಮನಕ್ಕೆ ಭರ್ಜರಿ ತಯಾರಿ ನಡೆದಿದ್ದು, ಹೆಚ್. ಎ.ಎಲ್ ಮುಂಭಾಗದಲ್ಲಿ ವೇದಿಕೆ ನಿರ್ಮಾಣ ಆಗಿದೆ. ವೇದಿಕೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ನಿಲ್ಲಲು ವ್ಯವಸ್ಥೆಯಾಗಿದ್ದು, ಈ ವೇಳೆ ಕಾರ್ಯಕರ್ತರ ನಡುವೆ ಸಂಸದ ತೇಜಸ್ವಿ ಸೂರ್ಯ ನಿಂತಿದ್ದುದು ಕಂಡುಬಂತು.
ಜಾಲಹಳ್ಳಿ ಕ್ರಾಸ್‌ನಲ್ಲಿ ಮೋದಿ ಅವರಿಗೆ ಸ್ವಾಗತ ಕೋರಲು ಯಲಹಂಕ ಶಾಸಕ ವಿಶ್ವನಾಥ್ ಹಾಜರಿದ್ದರು. ʼʼಇಸ್ರೋ ಸಾಧನೆಯನ್ನ ಮೆಚ್ಚಿ ಪ್ರಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದರಲ್ಲೂ ರಾಜಕಾರಣ ಮಾಡ್ತಿರೋದು ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕೋ ಕೆಲ್ಸ ಮಾಡ್ತಿರೋದು ಸರಿಯಲ್ಲ. ಇಂಥದ್ರಲ್ಲಿ ರಾಜಕಾರಣ ಮಾಡೋರ ಬಗ್ಗೆ ಏನೂ ಮಾತನಾಡೋಲ್ಲ. ನಮ್ಮವರೇ ನಮಗೆ ಬೆನ್ನಿಗೆ ಚೂರಿ ಹಾಕೋ ಕೆಲ್ಸ ಮಾಡ್ತಿದ್ದಾರೆʼʼ ಎಂದು ಅವರು ಹೇಳಿಕೆ ನೀಡಿದರು.
ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರು, ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಲಾ ಅಂಡ್ ಆರ್ಡರ್ ಎಂಟು ಮಂದಿ ಡಿಸಿಪಿಗಳು ಸೇರಿದಂತೆ ಸಂಚಾರಿ ವಿಭಾಗದ ನಾಲ್ಕು ಮಂದಿ ಡಿಸಿಪಿಗಳು ಭದ್ರತೆಗೆ ನಿಯೋಜಿಸಲಾಗಿದೆ. ಬರೋಬ್ಬರಿ ಎರಡು ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಬೆಳಗ್ಗೆ 4.30 ರಿಂದ 9.30 ರವರೆಗೆ ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಪೊಲೀಸರ ಮನವಿ ಮಾಡಿದ್ದಾರೆ.