ಹುಬ್ಬಳ್ಳಿ: ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿರುವ (Hubli) ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು (Hubli Airport) ವಿಶ್ವದರ್ಜೆಗೇರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರ ಪ್ರಯತ್ನದ ಫಲವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣಕ್ಕೆ ನಾಂದಿ ಹಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾರ್ಚ್ 10ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣಕ್ಕೆ ವರ್ಚ್ಯುವಲ್ ವೇದಿಕೆ ಮೂಲಕ ಶಂಕುಸ್ತಾಪನೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಉತ್ತರ ಪ್ರದೇಶದ ಅಜಂಗಢದಿಂದ ಪ್ರಧಾನಿ ಮೋದಿ ಅವರು ವರ್ಚ್ಯುವಲ್ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಯನ್ನು ಕೈಗೊಂಡಿದ್ದು, ವಿಶ್ವ ದರ್ಜೆಯ ವಿಮಾನ ನಿಲ್ದಾಣವನ್ನಾಗಿ ರೂಪಿಸಲು ಈ ಮೂಲಕ ಕ್ರಮ ಕೈಗೊಂಡಿದೆ ಎಂದು ವಿಮಾನ ನಿಲ್ದಾಣದ ಕಾರ್ಯ ನಿರ್ವಾಹಕ ನಿರ್ದೇಶಕ ಮನೋಜ್ ಶೇಖರನ್ ತಿಳಿಸಿದ್ದಾರೆ.
ಸಚಿವ ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ವಿಶ್ವದರ್ಜೆ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸುವಂತೆ ಕೇಂದ್ರ ನಾಗರೀಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸಿದ್ದು, ಈಗ ಕಾಲ ಸನ್ನಿಹಿತವಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ನಿಲ್ದಾಣದ ಅಭಿವೃದ್ಧಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ವಿಮಾನ ನಿಲ್ದಾಣ ಪ್ರಾಧಿಕಾರವು ಸಚಿವ ಜೋಶಿ ಅವರನ್ನು ಆಹ್ವಾನಿಸಿದೆ.
ಇದನ್ನೂ ಓದಿ: Raw Jute: ರೈತರಿಗೂ ಮೋದಿ ಸಿಹಿ ಸುದ್ದಿ; ಸೆಣಬು ಬೆಂಬಲ ಬೆಲೆ 285 ರೂ. ಹೆಚ್ಚಳ
350 ಕೋಟಿ ರೂ. ವೆಚ್ಚ
ಹುಬ್ಬಳ್ಳಿ ಈಗ ಉತ್ತರ ಕರ್ನಾಟಕದ ಹೆಬ್ಬಾಗಿಲು ಮಾತ್ರವಲ್ಲ. ಪ್ರಮುಖ ವಾಣಿಜ್ಯ ಕೇಂದ್ರ ಬಿಂದುವಾಗಿದೆ. ಹಾಗಾಗಿ ಮಾ.10ರಂದು 350 ಕೋಟಿ ರು. ವೆಚ್ಚದಲ್ಲಿ ಮತ್ತೊಂದು ಟರ್ಮಿನಲ್ ಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ಸಚಿವ ಜೋಶಿ ಅವರು ಧಾರವಾಡ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಪಕ್ಷಿ ನೋಟ ಬುಕ್ ಬಿಡುಗಡೆ ವೇಳೆ ಘೋಷಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ