ಬೆಂಗಳೂರು: ವಿಧಾನಸಭಾ ಚುನಾವಣೆ (Modi in Karnataka) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ರೋಡ್ ಶೋ, ಬೃಹತ್ ಸಮಾವೇಶಗಳನ್ನು ನಡೆಸಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಮೇ 6 ಮತ್ತು 7 ರಂದು ಎರಡು ದಿನ ರಾಜಧಾನಿಯಲ್ಲಿ ನಿಗದಿಯಾಗಿದ್ದ ರೋಡ್ ಶೋಗಳ ಬದಲಿಗೆ ಒಂದೇ ದಿನ ಅಂದರೆ ಮೇ 6ರಂದು ಮೆಗಾ ಶೋ ನಡೆಸಲು ಬಿಜೆಪಿ ನಿರ್ಧರಿಸಿದೆ. ಒಟ್ಟು 23 ವಿಧಾನಸಭಾ ಕ್ಷೇತ್ರ ರೀಚ್ ಆಗುವಂತೆ ರೋಡ್ ಶೋ ಪ್ಲ್ಯಾನ್ ರೂಪಿಸಲಾಗಿದೆ.
ನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ ಸಂಬಂಧ ಮಂಗಳವಾರ ಏರ್ಪಡಿಸಿದ್ದ ಬೆಂಗಳೂರು ಬಿಜೆಪಿ ಶಾಸಕರ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಮೇ 6ರಂದು ಬೆಳಗ್ಗೆ ಬೆಂಗಳೂರು ಕೇಂದ್ರದಲ್ಲಿ ನಮೋ ರೋಡ್ ಶೋ ಆರಂಭವಾಗಲಿದೆ. ಸಿ.ವಿ ರಾಮನ್ ನಗರದಿಂದ ಆರಂಭವಾಗಿ ಬ್ರಿಗೇಡ್ ರೋಡ್‌ವರೆಗೆ 8 ಕಿ.ಮೀ ರೋಡ್ ಶೋ ನಡೆಯಲಿದೆ.
ಹಾಗೆಯೇ ಸಂಜೆ 30 ಕಿ.ಮೀ ರೋಡ್ ಶೋ ನಡೆಯಲಿದೆ. ಕೋಣನಕುಂಟೆಯಿಂದ ಆರಂಭವಾಗಲಿರುವ ರೋಡ್ ಶೋ ಜಯನಗರ, ಗಾಂಧಿ ಬಜಾರ್, ಶಾಂತಿನಗರ, ಬಿನ್ನಿಮಿಲ್, ಮಾಗಡಿರಸ್ತೆ, ಟೋಲ್‌ಗೇಟ್, ದಾಸರಹಳ್ಳಿ, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ನವರಂಗ್, ಮಲ್ಲೇಶ್ವರ, ಸಂಪಿಗೆ ರಸ್ತೆ, ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಅಂತ್ಯವಾಗಲಿದೆ.
ಹಲವು ಕಾರಣಗಳಿಂದಾಗಿ ನಿರ್ಧಾರ ಬದಲು
ಈಗಾಗಾಲೇ ಬಿಡುಗಡೆಯಾಗಿರುವ ವೇಳಾಪಟ್ಟಿಯಲ್ಲಿ ಮೇ 6 ರಂದು ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಹಾಗೂ ಮೇ 7ರಂದು ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಿಗದಿಯಾಗಿತ್ತು. ಆದರೆ, ಮೋದಿ ಅವರು, ಈ ಎರಡೂ ದಿನಗಳ ಆರಂಭದಲ್ಲಿ ಬೇರೆ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿ ಸಂಜೆ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಬೇಕಾಗಿದೆ. ಆದರೆ ಸಂಚಾರ ದಟ್ಟಣೆ, ಭದ್ರತೆ ವ್ಯವಸ್ಥೆ ಸೇರಿ ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ರೋಡ್ ಶೋ ಒಂದೇ ದಿನದಲ್ಲಿ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ | Karnataka Election 2023: ಪ್ರಭು ರಾಮ ಆಯ್ತು, ಈಗ ಹನುಮನನ್ನು ಬಂಧಿಸಿಡಲು ಹೊರಟಿದೆ ಕಾಂಗ್ರೆಸ್: ಪಿಎಂ ಮೋದಿ
ಮೋದಿ ರೋಡ್ ಶೋ ಸಂಬಂಧ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರದಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಸಭೆಯಲ್ಲಿ ರೋಡ್ ಶೋಗೆ ಮಾಡಿಕೊಳ್ಳಬೇಕಾದ ತಯಾರಿ ಬಗ್ಗೆ ಚರ್ಚೆ ನಡೆಸಲಾಯಿತು. ಸಚಿವರಾದ ಅಶ್ವತ್ಥನಾರಾಯಣ್, ಮುನಿರತ್ನ, ಗೋಪಾಲಯ್ಯ, ಎಸ್.ಟಿ ಸೋಮಶೇಖರ್ ಸೇರಿ ಹಲವು ಅಭ್ಯರ್ಥಿಗಳು ಭಾಗಿಯಾಗಿದ್ದರು.
ಏ.29ರಂದು ಬೆಂಗಳೂರಿನಲ್ಲಿ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಅವರ ರೋಡ್ ಶೋ ನಡೆಸಿದ್ದರು. ಅಂದು ಪ್ರಧಾನಿ ರೋಡ್ ಶೋ ಹಿನ್ನೆಲೆಯಲ್ಲಿ ಮಾಗಡಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಅದೇ ರೀತಿ ಮೈಸೂರು-ತುಮಕೂರು ಸಂಪರ್ಕಿಸುವ ಪ್ರಮುಖ ಮಾರ್ಗವಾದ ನೈಸ್ ರಸ್ತೆಯಲ್ಲಿ ರೋಡ್ ನಡೆದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ, ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ರಾತ್ರಿ ರಾಜಭವನದ ಬಳಿಯೂ ಸಂಚಾರ ದಟ್ಟಣೆ ಉಂಟಾಯಿತು. ಇದರಿಂದ ಸಾರ್ವಜನಿಕರು, ವಾಹನ ಸವಾರರು ಕೆಲಸ ಕಾರ್ಯಗಳಿಗೆ ತೆರಳುವುದು ಹೇಗೆ ಎಂದು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ನಗರದಲ್ಲಿ ಎರಡು ದಿನಗಳ ಬದಲಿಗೆ ಒಂದೇ ದಿನ ಪ್ರಧಾನಿ ರೋಡ್ ಶೋ ನಡೆಸಲು ಬಿಜೆಪಿ ಶಾಸಕರು ತೀರ್ಮಾನಿಸಿದ್ದಾರೆ.