Site icon Vistara News

ಸಿದ್ದು ಸೋಲಿಸಲು ಡಿಕೆಶಿ, ಪರಮೇಶ್ವರ್‌ ಕುತಂತ್ರ; ಬಿಜೆಪಿ ಸೇರ್ಪಡೆ ಬಳಿಕ ಪರಂ ಬಲಗೈ ಬಂಟ ಆರೋಪ

PN Krishnamurthy

PN Krishnamurthy

ತುಮಕೂರು: ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿರುವ ಡಾ.ಜಿ.ಪರಮೇಶ್ವರ್‌ ಅವರಿಗೆ ಬಿಜೆಪಿ ತಪರಾಕಿ ಕೊಟ್ಟಿದೆ. ಡಾ.ಜಿ.ಪರಮೇಶ್ವರ್‌ ಅವರ ಆಪ್ತ ಬಿ.ಎನ್‌.ಕೃಷ್ಣಮೂರ್ತಿ ಅವರನ್ನೇ ಬಿಜೆಪಿಯು ಸೆಳೆದಿದ್ದು, ಅವರು ಶುಕ್ರವಾರ ಕಮಲ ಪಾಳಯ ಸೇರಿದ್ದಾರೆ. ಕೊರಟಗೆರೆ ಬಿಜೆಪಿ ಅಭ್ಯರ್ಥಿ ಅನಿಲ್‌ ಕುಮಾರ್‌ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಲೇ ಪಿ.ಎನ್‌.ಕೃಷ್ಣಮೂರ್ತಿ ಅವರು ಡಾ.ಜಿ.ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಹರಿಹಾಯ್ದಿದ್ದಾರೆ. “ಸಿದ್ದರಾಮಯ್ಯ ಅವರನ್ನು ಸೋಲಿಸಲು ಡಾ.ಜಿ.ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ಕುತಂತ್ರ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಕಾಂಗ್ರೆಸ್ ಪಕ್ಷ ನನ್ನನ್ನು ಉಪಯೋಗಿಸಿಕೊಂಡು ಕೈ ಬಿಟ್ಟಿದೆ. ಇದರಿಂದ ನನಗೆ ನೋವಾಗಿದ್ದು, ಹಾಗಾಗಿ ಬಿಜೆಪಿ ಸೇರಿದ್ದೇನೆ. ಜಿ.ಪರಮೇಶ್ವರ್‌ ಅವರು ಎರಡೂವರೆ ಸಾವಿರ ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಾರೆ. ತಂದ ಅನುದಾನ ಎಲ್ಲಿ ಹೋಯಿತು? ಎತ್ತಿನಹೊಳೆ ಭೂಮಿ ಕಳೆದುಕೊಂಡವರಿಗೆ ನ್ಯಾಯ ಒದಗಿಸಲು ಇವರಿಂದ ಆಗಿಲ್ಲ. ಇವರೇ ಜನರಿಗೆ ಮೋಸ ಮಾಡಿ, ಸರ್ಕಾರದ ಮೇಲೆ ಹಾಕುತ್ತಿದ್ದಾರೆ” ಎಂದು ದೂರಿದರು.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಪಿ.ಎನ್.ಕೃಷ್ಣಮೂರ್ತಿ

“ಪರಮೇಶ್ವರ್‌ ಅವರು 20 ವರ್ಷ ನಮ್ಮನ್ನು ಉಪಯೋಗಿಸಿಕೊಂಡು ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ಎರಡು ಲಕ್ಷ ರೂಪಾಯಿ ಪಡೆದು ಅರ್ಜಿ ಹಾಕಿಸಿಕೊಂಡರು. ಕೊನೆಗೆ ನಮಗೆ ಟಿಕೆಟ್‌ ಕೊಡಲಿಲ್ಲ. ಬೆಂಗಳೂರಿನಲ್ಲಿ 18 ಕಾಂಗ್ರೆಸ್ ಅಭ್ಯರ್ಥಿಗಳು ಸೋಲುತ್ತಾರೆ. ಡಾ.ಜಿ.ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯರ ವಿರುದ್ದ ಪಿತೂರಿ ಮಾಡುತಿದ್ದಾರೆ. ರಾತ್ರಿ ಆರು ಗಂಟೆ ಆದ ಮೇಲೆ, “ಸಿದ್ದರಾಮಯ್ಯರನ್ನು ಸೋಲಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಾರೆ. ಅವಕಾಶ ಸಿಕ್ಕರೆ ನಾನೂ ಸಿಎಂ ಆಗುತ್ತೇನೆ ಎಂದು ಪರಮೇಶ್ವರ್‌ ಹೇಳುತ್ತಾರೆ. ಆದರೆ, ಕಾಂಗ್ರೆಸ್‌ ಸೋಲುವುದು ನಿಶ್ಚಿತ” ಎಂಬುದಾಗಿ ಹೇಳಿದರು.

ಪರಮೇಶ್ವರ್‌ರನ್ನು ಸೋಲಿಸುವುದೇ ಗುರಿ

“ಡಾ.ಜಿ.ಪರಮೇಶ್ವರ್‌ ಅವರನ್ನು ನಂಬಿ ನಾವೆಲ್ಲ ಕೆಲಸ ಮಾಡಿದೆವು. ಆದರೆ, ಅವರು ನಮ್ಮನ್ನು ನಡುನೀರಿನಲ್ಲಿಯೇ ಕೈ ಬಿಟ್ಟರು. ಹಾಗಾಗಿ, ಡಾ.ಜಿ.ಪರಮೇಶ್ವರ್‌ ಅವರನ್ನು ಸೋಲಿಸುವುದೇ ನಮ್ಮ ಗುರಿ” ಎಂದು ಪಿ.ಎನ್‌.ಕೃಷ್ಣಮೂರ್ತಿ ಹೇಳಿದರು. ಪಿ.ಎನ್‌.ಕೃಷ್ಣಮೂರ್ತಿ ಅವರು ಇದಕ್ಕೂ ಮೊದಲು ದಾಸರಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಆದರೆ, ಈ ಬಾರಿಯೂ ಅವರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಇವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರಲಿಲ್ಲ.

ಇದನ್ನೂ ಓದಿ: Karnataka Election 2023: ಕೊರಟಗೆರೆಯಲ್ಲಿ ಪರಮೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಕಲ್ಲೆಸೆತ; ಕುಸಿದು ಬಿದ್ದ ಮಹಿಳಾ ಪೇದೆ

Exit mobile version