Site icon Vistara News

Pocso case : ನಿವೃತ್ತಿ ಹೊತ್ತಲ್ಲಿ ಪ್ರಿನ್ಸಿಪಾಲ್‌ ಕಾಮ ಪುರಾಣ, 10ನೇ ಕ್ಲಾಸ್‌ ವಿದ್ಯಾರ್ಥಿನಿಗೆ ಮೆಸೇಜ್‌, ವಿಡಿಯೊ ಕಾಲ್‌ ಕಿರುಕುಳ!

sex message

#image_title

ರಾಯಚೂರು: ವಿದ್ಯಾರ್ಥಿನಿಯರನ್ನು ತನ್ನ ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಬೇಕಾದ ಪ್ರಿನ್ಸಿಪಾಲ್‌ ಒಬ್ಬ ತಾನೇ ಕಾಮಪಿಶಾಚಿಯಂತೇ ವರ್ತಿಸುತ್ತಾ ಬಾಳನ್ನು ಹಾಳು ಮಾಡಲು ಯತ್ನಿಸಿದ ಹೇಯ ವಿದ್ಯಮಾನಕ್ಕೆ (Pocso case) ಸಾಕ್ಷಿಯಾಗಿದೆ ರಾಯಚೂರಿನ ಶಕ್ತಿನಗರದ ಒಂದು ಕಾಲೇಜು.

ಇಲ್ಲಿನ ಪ್ರಿನ್ಸಿಪಾಲ್‌ ವಿಜಯಕುಮಾರ್‌ ಅಂಗಡಿಗೆ ಇನ್ನೇನು ನಿವೃತ್ತಿ ವಯಸ್ಸು ಹತ್ತಿರ ಬಂದಿದೆ. ಆದರೆ, ಆತನ ಮನಸಿನೊಳಗೆ ಕಾಮ ಪಿಶಾಚಿ ಮಾತ್ರ ಇನ್ನೂ ನರ್ತಿಸುತ್ತಲೇ ಇದ್ದಾಳೆ. ಅವನೀಗ ವಿದ್ಯಾರ್ಥಿನಿಯ ಜತೆ ಅನುಚಿತವಾಗಿ ವರ್ತಿಸಿ ಸಿಕ್ಕಿಬಿದ್ದಿದ್ದಾನೆ. ಬಾಲಕಿಗೆ ಮೆಸೇಜ್‌ ಮಾಡುತ್ತಾ, ಫೋನ್‌ ಮಾಡುತ್ತಾ ಅತ್ಯಂತ ಕೀಳು ಪದ ಬಳಸಿ ಕೆರಳಿಸಲು ಯತ್ನಿಸುತ್ತಿದ್ದ ಆತನಿಗೆ ಈಗ ಸ್ಥಳೀಯರೇ ಸೇರಿ ಧರ್ಮದೇಟು ನೀಡಲು ಮುಂದಾಗಿದ್ದರು. ಆದರೆ, ಲಾಸ್ಟ್‌ ಸೀನ್‌ನಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಿ ಅವನನ್ನು ಏಟಿನಿಂದ ಬಚಾವ್‌ ಮಾಡಿದ್ದಾರೆ..

ವಾಟ್ಸ್ ಆ್ಯಪ್‌ನಲ್ಲಿ ಚಾಟಿಂಗ್‌ ಚೀಟಿಂಗ್‌

10ನೇ ತರಗತಿಯ ವಿದ್ಯಾರ್ಥಿನಿಯ ಮೊಬೈಲ್‌ ನಂಬರ್‌ನ ಶಾಲೆಯ ದಾಖಲೆಗಳಿಂದ ಪಡೆದ ಪ್ರಿನ್ಸಿಪಾಲ್‌ ಆಕೆಗೆ ವಾಟ್ಸ್ ಆ್ಯಪ್ ಮೆಸೇಜ್‌ ಮಾಡಲು ಶುರು ಮಾಡಿದ್ದ. ಆರಂಭದಲ್ಲಿ ಒಳ್ಳೆಯ ಮಾತುಗಳಿಂದಲೇ ಆರಂಭವಾದ ಚಾಟಿಂಗ್‌ ಬಳಿಕ ನಿಧಾನಕ್ಕೆ ಹೊರಳುಗಳನ್ನು ಪಡೆದುಕೊಂಡಿದೆ. ಮೊದಲು ಮೆಸೇಜ್‌ ಮಾಡುತ್ತಿದ್ದ ಆತ ನಂತರ ಫೋನೇ ಮಾಡಲು ಶುರು ಮಾಡಿದ್ದ. ಬಳಿಕ ವಿಡಿಯೊ ಕಾಲ್‌ ಆಸೆ ವ್ಯಕ್ತಪಡಿಸಿದ್ದ. ಮನೆಗೆ ಬರುವಂತೆಯೂ ಒತ್ತಡ ಹೇರುತ್ತಿದ್ದ!

ಮೆಸೇಜ್‌ನಲ್ಲಿ ಲೈಂಗಿಕ ವಿಚಾರಗಳನ್ನು ಮಾತನಾಡಲು ಶುರು ಮಾಡಿದ್ದ ಪ್ರಿನ್ಸಿಪಾಲ್‌ ಬಗ್ಗೆ ಏನು ಮಾಡಬೇಕು ಎಂದು ತಿಳಿಯದೆ ಬಾಲಕಿ ನಿತ್ಯ ನರಕವನ್ನೆ ಅನುಭವಿಸುತ್ತಿದ್ದಳು. ಹೇಳಿ ಕೇಳಿ ಪ್ರಿನ್ಸಿಪಾಲ್‌. ಸಭ್ಯತೆಯ ಮುಖವಾಡ ಬೇರೆ.

ವಿದ್ಯಾರ್ಥಿನಿಯನ್ನು ಆರಂಭದಲ್ಲಿ ಪಾಠದ ವಿಚಾರ ಮಾತನಾಡಿ ಸ್ವಲ್ಪ ವಿಶ್ವಾಸಕ್ಕೆ ತೆಗೆದುಕೊಂಡ ಆತ ಬಳಿಕ ಸೆಕ್ಸುವಲ್‌ ಕ್ಲಾಸ್‌ ಶುರು ಮಾಡಿದ್ದ. ಕೆಲವೊಂದು ಮುಜುಗರ ತರುವ ವಿಚಾರಗಳನ್ನು ಕೂಡಾ ಖುಲ್ಲಂಖುಲ್ಲಾ ವಿವರಣೆ ಕೊಡುತ್ತಿದ್ದ ಎನ್ನಲಾಗಿದೆ.

ಆಕೆ ಸರ್‌ ಸರ್‌ ಅಂದರೆ, ಅವನು ಸರ್‌ ಅನ್ಬೇಡ ಪ್ಲೀಸ್‌.. ಬಾಯ್‌ ಫ್ರೆಂಡ್‌ ಅಂತ ಹೇಳು ಅಂತ ಪೀಡಿಸುತ್ತಿದ್ದ. ಆತ ಬಳಸುತ್ತಿದ್ದ ಅತ್ಯಂತ ಕೀಳು ಶಬ್ದಗಳೆಲ್ಲ ರೆಕಾರ್ಡ್‌ ಆಗಿವೆ. ಮಾದಕ ಧ್ವನಿಯಲ್ಲಿ ಆ ಎಳೆ ಹೆಣ್ಮಗಳನ್ನು ಕೆರಳಿಸುತ್ತಿದ್ದ ಆತ್ನ ವಾಯ್ಸ್‌ ಮೆಸೇಜ್‌ ಮತ್ತು ಬರಹಗಳು ವಿಸ್ತಾರ ನ್ಯೂಸ್‌ಗೆ ಸಿಕ್ಕಿವೆ.

ಮನೆಗೆ ಬರುವಂತೆ ಪೀಡಿಸುತ್ತಿದ್ದ ಪ್ರಿನ್ಸಿ

ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಆಕೆಗೆ, “ಐ ಲವ್ ಯು ಸೋ ಮಚ್ʼ ಎಂದೆಲ್ಲ ಮೆಸೇಜ್‌ ಕಳುಹಿಸುತ್ತಿದ್ದ ಆತ ಆಮೇಲಾಮೇಲೆ ʻಸ್ಪೆಂಡ್ ಒನ್ ಹವರ್ ಇನ್ ಮೈ ಹೋಮ್..”(ಒಂದು ಗಂಟೆ ಹೊತ್ತು ನನ್ನ ಮನೆಯಲ್ಲಿ ಕಳೀತೀಯಾʼʼ ಎಂದು ಗೋಗರೆಯುತ್ತಿದ್ದ. ಮನೆ ವಿಳಾಸವನ್ನೇ ಕಳುಹಿಸಿಕೊಟ್ಟು ಬಾ ಎಂದು ಹಿಂಸೆ ಕೊಡುತ್ತಿದ್ದ.

ಸಹಕರಿಸಿದರೆ ಒಳ್ಳೆಯದಾಗುತ್ತದೆ!

ಆರಂಭದಲ್ಲಿ ಮೆಸೇಜು, ನಂತರ ಫೋನ್‌ ಮಾಡಲು ಶುರು ಮಾಡಿದ್ದ. ಅಷ್ಟಕ್ಕೂ ತೃಪ್ತನಾಗದೆ ವಿಡಿಯೋ ಕಾಲ್‌ಗೆ ಮೊರೆ ಹೋದ ಈ ಪ್ರಿನ್ಸಿಪಾಲ್‌. ವಿಡಿಯೊ ಕಾಲ್‌ ಮಾಡುವಂತೆ ಬಾಲಕಿಗೆ ಕಿರುಕುಳ ಕೊಡುತ್ತಿದ್ದ. ʻʻಡಾರ್ಲಿಂಗ್‌ ಡಾರ್ಲಿಂಗ್‌ʼ ಎನ್ನುತ್ತಾ ಆ ಎಳೆ ಹುಡುಗಿಯನ್ನು ಕಾಮದಾಟಕ್ಕೆ ಕರೆಯುತ್ತಿದ್ದ.

ʻʻನೀನು 10 ನೇ ಕ್ಲಾಸ್ ಇದ್ದಿಯಾ. ನನ್ನ ಜೊತೆ ಸಹಕರಿಸಿದರೆ ಪರೀಕ್ಷೆಯಲ್ಲಿ ಒಳ್ಳೆ ರೀತಿ ನೋಡಿಕೊಳ್ಳುತ್ತೇನೆʼ ಅಂತ ಪುಸಲಾಯಿಸಿ ಒಪ್ಪಿಕೊಳ್ಳಲು ಒತ್ತಡ ಹೇರುತ್ತಿದ್ದ. ʻʻಹೇಳಿದ ಹಾಗೆ ಮಾಡದೇ ಇದ್ದರೆ ಪರೀಕ್ಷೆಯಲ್ಲಿ ನೋಡಿಕೊಳ್ಳುತ್ತೇನೆʼ ಎನ್ನುವ ಬೆದರಿಕೆಯನ್ನು ಒಡ್ಡಿದ್ದ.

ಶಾಲೆಗೇ ನುಗ್ಗಿದರು ಸ್ಥಳೀಯರು

ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ಈ ಪ್ರಿನ್ಸಿ ಕಾಮ ಕೀಟಲೆ ಹೇಗೋ ಮನೆಯಲ್ಲಿ ತಿಳಿದಾಗ ಇಡೀ ಮನೆ ಕೆರಳಿ ಕೆಂಡವಾಗಿದೆ. ಅದು ಊರಿನವರಿಗೆ ಗೊತ್ತಾಗಿ ಎಲ್ಲರೂ ಸೇರಿ ಶಾಲೆ ಕಡೆಗೆ ಧಾವಿಸಿದ್ದಾರೆ. ಶಿಕ್ಷಕನ ಕಾಮಪಿತ್ತ ಇಳಿಸಬೇಕು ಎಂದೇ ನಿರ್ಧರಿಸಿ ಬಂದಿದ್ದರು. ಆದರೆ, ಅಷ್ಟು ಹೊತ್ತಿಗೆ ವಿಷಯ ಶಕ್ತಿನಗರ ಪೊಲೀಸರಿಗೆ ತಿಳಿದುಹೋಗಿತ್ತು. ಜನರು ಬರುವ ಮೊದಲೇ ಪೊಲೀಸರು ಬಂದು ಆರೋಪಿ ವಿಜಯ ಕುಮಾರ್‌ ಅಂಗಡಿಯನ್ನು ವಶಕ್ಕೆ ಪಡೆದರು. ಅಷ್ಟರ ನಡುವೆಯೂ ಕೆಲವರು ಅವನಿಗೆ ಎಗರಿ ಎಗರಿ ಹೊಡೆತ ನೀಡಿದ್ದಾರೆ.

ಇದೀಗ ಮುಖ್ಯಶಿಕ್ಷಕನ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣವಿದೆ. ಪೋಕ್ಸೋ, ಲೈಂಗಿಕ ಕಿರುಕುಳ, ಜಾತಿ ನಿಂದನೆ ಸೇರಿ ಹಲವು ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಅವನಿಗೆ ಚೆನ್ನಾಗಿ ಪಾಠ ಕಲಿಸಬೇಕು ಎನ್ನುವುದು ಊರಿನವರ ಆಗ್ರಹ.

ಇದನ್ನೂ ಓದಿ : Harrassment : ಕಾಫಿ ತೋಟದೊಳಗೆ ಎಳೆದೊಯ್ದು ಯುವತಿಯ ಅತ್ಯಾಚಾರ ಯತ್ನ; ಒಬ್ಬ ಆರೋಪಿ ಸೆರೆ, ಇನ್ನಿಬ್ಬರು ಪರಾರಿ

Exit mobile version