ತುಮಕೂರು: ಪೋಕ್ಸೊ ಪ್ರಕರಣದಲ್ಲಿ (POCSO Case) ಸೆರೆಯಾಗಿರುವ ಬಾಲಮಂಜುನಾಥ ಸ್ವಾಮೀಜಿಯ ಮತ್ತೊಬ್ಬ ಶಿಷ್ಯನನ್ನು ಪೊಲೀಸರು ಬಂಧಿಸಿದ್ದಾರೆ. ದೂರು ನೀಡಿದ್ದ ಸಂತ್ರಸ್ತೆಗೆ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ ಆರೋಪದಲ್ಲಿ ಶಿಷ್ಯನನ್ನು ಬಂಧಿಸಲಾಗಿದೆ.
ಮನೋಜ್ ಕುಮಾರ್ (26) ಬಂಧಿತ ಆರೋಪಿ. ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷ ಬಾಲಮಂಜುನಾಥ ಸ್ವಾಮೀಜಿ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಹೀಗಾಗಿ ಬಾಲಮಂಜುನಾಥ ಸ್ವಾಮೀಜಿ ಹಾಗೂ ಸ್ವಾಮೀಜಿಯ ಆಪ್ತ ಸಹಾಯಕ ಅಭಿಲಾಷ್‌ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ | ಕುಡಿತದ ಚಟ ಸಹಿಸದೆ ಬೆಂಗಳೂರಿನಲ್ಲಿ ಮಗನನ್ನೇ ಕೊಂದ ತಂದೆ; ಇಲ್ಲಿದೆ ಒಂದು ಟ್ವಿಸ್ಟ್
ಇದರ ಬೆನ್ನಲ್ಲೇ ಸಂತ್ರಸ್ತ ಬಾಲಕಿ ಹಾಗೂ ಸಂಬಂಧಿಕರಿಗೆ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಬೆದರಿಕೆ ಹಾಗೂ ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಮುಂದಾಗಿದ್ದ ಮನೋಜ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕುಣಿಗಲ್ ಪಟ್ಟಣದಲ್ಲಿ ಮೊಬೈಲ್ ಶಾಪ್ ನಡೆಸುತ್ತಿದ್ದು, ಸ್ವಾಮೀಜಿ ಪಟ್ಟ ಶಿಷ್ಯನಾಗಿ ಕೆಲಸ ಮಾಡುತ್ತಿದ್ದ. ಪ್ರಕರಣ ಸಂಬಂಧ ಹುಲಿಯೂರುದುರ್ಗ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಏನಿದು ಪ್ರಕರಣ?
ಅಪ್ರಾಪ್ತ ವಯಸ್ಸಿನ ಹುಡುಗಿಗೆ ಲೈಂಗಿಕ ಕಿರುಕುಳ (physical abuse) ನೀಡಿದ ಆರೋಪದಲ್ಲಿ ಕುಣಿಗಲ್ ತಾಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷ ಬಾಲಮಂಜುನಾಥ ಸ್ವಾಮೀಜಿ (Balamanjunatha Swamiji) ಗುರುವಾರ ತಡರಾತ್ರಿ ಬಂಧಿಸಲಾಗಿತ್ತು. ಮೊದಲಿಗೆ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ಸ್ವಾಮೀಜಿ ಕಡೆಯಿಂದಲೇ ಕೆಲವರ ವಿರುದ್ಧ ದೂರು ದಾಖಲಾಗಿತ್ತು. ಆದರೆ, ಪ್ರಕರಣದ ತನಿಖೆ ವೇಳೆ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಸ್ವಾಮೀಜಿಯ ಬಂಧನವಾಗಿತ್ತು.
ಕಳೆದ ಫೆಬ್ರುವರಿ 10ರಂದು ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಸ್ವತಃ ಸ್ವಾಮೀಜಿಯೇ ಒಂದು ದೂರು ದಾಖಲಿಸಿದ್ದ. ಇದರಲ್ಲಿ, ಚರ್ಮ ರೋಗಕ್ಕೆ ಚಿಕಿತ್ಸೆ ಕೊಡುವ ನೆಪದಲ್ಲಿ ನನ್ನ ಬೆತ್ತಲೆ ವಿಡಿಯೋ ಮಾಡಿಕೊಂಡು, ನನ್ನನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದ. ಸ್ವಾಮೀಜಿಯ ಸೇವಕನಾಗಿದ್ದ ಅಭಿಷೇಕ್ ಮತ್ತು ಟೀಂನಿಂದ ಬೆದರಿಕೆ ಹಾಕಿ ಹಣಕ್ಕೆ ಡಿಮ್ಯಾಂಡ್ ಇಡಲಾಗಿದೆ ಎಂದು, ತನ್ನ ಆಪ್ತ ಸಹಾಯಕನಾಗಿದ್ದ ಅಭಿಲಾಷ್ ಎಂಬಾತನಿಂದ ಎಫ್ಐಆರ್ ದಾಖಲು ಮಾಡಿಸಿದ್ದ. ಒಟ್ಟು 6 ಜನರ ಮೇಲೆ ದೂರು ನೀಡಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಸ್ವಾಮೀಜಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ | Physical Abuse : ಚರ್ಚ್ ಧರ್ಮಗುರು ವಿರುದ್ಧ ಎಫ್‌ಐಆರ್; ಪ್ರಾರ್ಥನೆಗೆ ಬಂದವಳ ಮೇಲೆ ಅತ್ಯಾಚಾರ
ಮಠದಲ್ಲೇ ಅಪ್ರಾಪ್ತ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪ ಕೇಳಿಬಂದಿತ್ತು. ಅಭಿಷೇಕ್ ಕೊಟ್ಟ ಮಾಹಿತಿ ಮೇರೆಗೆ ತಡರಾತ್ರಿ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರ ಪರಿಶೀಲನೆ ವೇಳೆ ಸ್ವಾಮೀಜಿಯ ಅಸಲಿ ಮುಖವಾಡ ಬಯಲಾಗಿದೆ. ಬಾಲಮಂಜುನಾಥ ಸ್ವಾಮೀಜಿ ಹಾಗೂ ಆತನ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲು ಮಾಡಿ, ಗುರುವಾರ ತಡರಾತ್ರಿ ಇಬ್ಬರನ್ನು ಬಂಧಿಸಿದ್ದರು.