Site icon Vistara News

Pocso Case : ಮೊಬೈಲ್‌ ಕೊಡಿಸುವ ಆಮಿಷ ಒಡ್ಡಿ 17ರ ಬಾಲಕಿಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ

assault

ಹುಬ್ಬಳ್ಳಿ: ಮೊಬೈಲ್‌ ಕೊಡಿಸುವ ಆಮಿಷ ಒಡ್ಡಿ ಬಾಲಕಿಯನ್ನು ಕರೆಸಿಕೊಂಡ ಫೋನ್‌ ಫ್ರೆಂಡ್‌ ಮತ್ತು ಆತನ ಗೆಳೆಯರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ (Pocso Case) ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ದೇವರಾಜ್‌ ಮತ್ತು ಫಕ್ಕಿರೇಶ್‌ ಹಾಗೂ ಇತರ ಇಬ್ಬರು 17 ವರ್ಷದ ಈ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರಲ್ಲಿ ದೇವರಾಜ್‌ ಆಕೆಗೆ ಫೋನ್‌ ಮೂಲಕ ಪರಿಚಯವಾದವನಾಗಿದ್ದರೆ ಉಳಿದ ಮೂವರು ಆತನ ಗೆಳೆಯರು.

ಬಾಲಕಿಗೆ ಕೆಲವು ಸಮಯದ ಹಿಂದೆ ದೇವರಾಜ ಎಂಬ ಯುವಕ ಸಾಗರ ಎಂಬವನ ಮೂಲಕ ಪರಿಚಯವಾಗಿದ್ದ. ಅವರಿಬ್ಬರೂ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಮಾರ್ಚ್‌ 8ರ ಮಹಿಳಾ ದಿನದಂದು ಹೊಸ ಮೊಬೈಲ್‌ ಕೊಡಿಸುತ್ತೇನೆ ಎಂದು ಹೇಳಿ ದೇವರಾಜ್‌ ಆಕೆಯನ್ನು ಹುಬ್ಬಳ್ಳಿಗೆ ಕರೆಸಿಕೊಂಡಿದ್ದ. ಅಲ್ಲಿ ಜತೆಯಾದ ದೇವರಾಜ ಆಕೆಯನ್ನು ಕೆಲವು ಕಡೆ ಸುತ್ತಾಡಿಸಿದ್ದಾನೆ. ಈ ನಡುವೆ ಫಕ್ಕಿರೇಶ್‌ ಜತೆಯಾಗಿದ್ದಾನೆ. ಅವರಿಬ್ಬರೂ ಆಕೆಗೆ ಊಟ ಮಾಡಿಸಿ ಐಸ್‌ ಕ್ರೀಂ ತಿನ್ನಿಸಿ ಹುಬ್ಬಳ್ಳಿಯ ಬೈಪಾಸ್‌ ರಿಂಗ್‌ ರೋಡ್‌ ಬ್ರಿಜ್‌ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ನಡುವೆ ಆಕೆಗೆ ಅವರಿಬ್ಬರೂ ಹಲ್ಲೆ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ.

ಇತ್ತ ರಿಂಗ್‌ ರೋಡ್‌ ಬಳಿ ಬಂದ ದೇವರಾಜ್‌ ಮತ್ತು ಫಕ್ಕಿರೇಶ್‌, ಬೈಕನ್ನು ಮೇಲೆ ನಿಲ್ಲಿಸಿ ಆಕೆಯನ್ನು ಬ್ರಿಜ್‌ನ ಕೆಳಗೆ ಕರೆದೊಯ್ದಿದ್ದಾರೆ. ಅಲ್ಲಿ ದೇವರಾಜ್‌ ಮತ್ತು ಫಕ್ಕಿರೇಶ್‌ ಆಕೆಯ ಮೇಲೆ ಬಲವಂತದಿಂದ ಅತ್ಯಾಚಾರ ಮಾಡಿದ್ದಾರೆ. ಸಾಲದ್ದಕ್ಕೆ ಇನ್ನಿಬ್ಬರು ಗೆಳೆಯರನ್ನು ಕರೆಸಿಕೊಂಡು ಅವರಿಂದಲೂ ದೌರ್ಜನ್ಯ ನಡೆಸಿದರು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಬಾಲಕಿ ಮನೆಗೆ ಬಂದು ವಿಷಯ ತಿಳಿಸಿದ್ದು ರಾತ್ರಿಯೇ ಹುಬ್ಬಳಿ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಮೇಲೆ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : Student Harrassment : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕ ಖುಲಾಸೆ

Exit mobile version