ಬೆಳಗಾವಿ: ಖಾನಾಪುರ ತಾಲೂಕಿನ ನೆರಸಾ ಗೌಳಿವಾಡ ಗ್ರಾಮದ ಸಮೀಪ ಪತ್ತೆಯಾಗಿದ್ದ ನವಜಾತ ಗಂಡು ಶಿಶುವಿನ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಅಪ್ರಾಪ್ರೆಯನ್ನು ಮದುವೆ ಆಗುವುದಾಗಿ ನಂಬಿಸಿ ಯುವಕನೊಬ್ಬ ದೈಹಿಕ ಸಂಬಂಧ ಬೆಳೆಸಿ ಮಗು ಜನನಕ್ಕೆ ಕಾರಣವಾಗಿರುವ ಘಟನೆ ಬೆಳಕಿಗೆ ಬಂದಿದೆ. ಯುವಕನ ಮೇಲೆ ಪೋಕ್ಸೊ ಕಾಯ್ದೆ ಅಡಿ (POCSO Case) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಗುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು ಮರಕ್ಕೆ ನೇತು ಹಾಕಿ ನಾಪತ್ತೆಯಾಗಿದ್ದ ಪ್ರಕರಣ ವಾರದ ಹಿಂದೆ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಇದು ಅಪ್ರಾಪ್ತೆಗೆ ಹುಟ್ಟಿದ ಮಗು ಎಂಬುದು ತಿಳಿದುಬಂದಿದೆ. ಹೆಚ್ಚಿನ ವಿಚಾರಣೆ ಮಾಡಿದಾಗ ಯುವಕನೊಬ್ಬನ ಮೋಸ ಬಯಲಾಗಿದೆ.
ನೆರಸಾ ಗೌಳಿವಾಡ ಗ್ರಾಮದ 19 ವರ್ಷದ ಮಲ್ಲು ಅಪ್ಪು ಪಿಂಗಳೆ ಎಂಬಾತ 16 ವರ್ಷದ ಬಾಲಕಿಯನ್ನು ಮದುವೆಯಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಈ ವೇಳೆ ಬಾಲಕಿ ಗರ್ಭಿಣಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಈ ವಿಷಯ ಕುಟುಂಬದವರಿಗೆ ತಿಳಿಯದಂತೆ ರಹಸ್ಯವಾಗಿ ಕಾಯ್ದುಕೊಂಡಿದ್ದರು ಎನ್ನಲಾಗಿದೆ. ಮಗು ಜನಿಸಿದ ಬಳಿಕ ಕುಟುಂಬದ ಭಯಕ್ಕೆ ಹೆತ್ತ ಮಗುವನ್ನು ಪ್ಲ್ಯಾಸ್ಟಿಕ್ ಚೀಲದಲ್ಲಿಟ್ಟು ಮರಕ್ಕೆ ನೇತು ಹಾಕಿ ಮಲ್ಲು ಪರಾರಿಯಾಗಿದ್ದ. ವಾರದ ಬಳಿಕ ಪ್ರಕರಣ ಪತ್ತೆ ಹಚ್ಚಿದ ಖಾನಾಪುರ ಠಾಣೆ ಪೊಲೀಸರು, ಯುವಕನನ್ನು ಬಂಧಿಸಿದ್ದಾರೆ. ಪೋಕ್ಸೊ ಕಾಯ್ದೆ ಅಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.
ಆಶಾ ಕಾರ್ಯಕರ್ತೆಯಿಂದ ಬದುಕುಳಿದಿದ್ದ ಶಿಶು
ನೆರಸಾ ಗೌಳಿವಾಡದಲ್ಲಿ ಮರಕ್ಕೆ ಶಿಶುವನ್ನು (Newborn baby) ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು ನೇತು ಹಾಕಿರುವುದನ್ನು ಗಮನಿಸಿದ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ಎಂಬುವರು ತಕ್ಷಣ ಆ್ಯಂಬುಲೆನ್ಸ್ ಕರೆಸಿ ತಾಲೂಕು ಆಸ್ಪತ್ರೆಗೆ ಶಿಶುವನ್ನು ರವಾನೆ ಮಾಡಿದ್ದರು. ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಶಿಶುವನ್ನು ಬೆಳಗಾವಿಯ ಬಿಮ್ಸ್‌ಗೆ ದಾಖಲಿಸಲಾಗಿತ್ತು. ಈಗ ಮಗು ಚೇತರಿಸಿಕೊಂಡಿದೆ.
ಇದನ್ನೂ ಓದಿ | Newborn baby | ಪ್ಲಾಸ್ಟಿಕ್ ಕವರ್‌ನಲ್ಲಿ ನವಜಾತ ಶಿಶು; ಮರಕ್ಕೆ ನೇತುಹಾಕಿ ಬಿಟ್ಟುಹೋಗಿದ್ದರು!