ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ತುರ್ತು ಚಿಕಿತ್ಸೆಗಳನ್ನು ನೀಡಿ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್‌ಗೆ ಶರಣರನ್ನು ಶಿಫ್ಟ್ ಮಾಡಲಾಗಿದ್ದು, ಸತತ 2 ಗಂಟೆಗಳಿಂದ ಶ್ರೀಗಳ ವೈದ್ಯಕೀಯ ತಪಾಸಣೆ ನಡೆಯುತ್ತಿದೆ. ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರು ಶುಗರ್, ಬಿಪಿ ಚೆಕಪ್, ಇಸಿಜಿ, ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಬಿಪಿ ಏರಿಳಿತದ ಜತೆಗೆ ಜ್ವರ ಕೂಡ ಕಾಣಿಸಿಕೊಂಡಿದೆ.
ಖಾಸಗಿ ಲ್ಯಾಬ್‌ಗೆ ಶ್ರೀಗಳ ರಕ್ತದ ಮಾದರಿಯನ್ನು ರವಾನಿಸಲಾಗಿದ್ದು, ಲ್ಯಾಬ್ ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ. ರಾತ್ರಿ ಆಕ್ಸಿಜನ್ ಸ್ಯಾಚುರೇಷನ್ ಮಟ್ಟ 98 ಇತ್ತು. ಇಂದು ಬೆಳಗ್ಗೆ ಆಕ್ಸಿಜನ್ ಸ್ಯಾಚುರೇಷನ್ 94ರಷ್ಟಿದೆ. ಅಧಿಕ ಒತ್ತಡ, ಚಿಂತೆಯಿಂದ ಸ್ಯಾಚುರೇಷನ್ ಲೆವೆಲ್ ಕಡಿಮೆ ಆಗಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ವರೆಗಿನ ಪ್ರಯಾಣದ ಸಮಯವನ್ನೂ ಗಮನಿಸಿಕೊಂಡು, ಐಸಿಯುನಲ್ಲಿ ಅಗತ್ಯ ಚಿಕಿತ್ಸೆಗಳನ್ನು ನೀಡಿದ ಬಳಿಕ, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯರ ಅಂತಿಮ ಸೂಚನೆಗಾಗಿ ಕಾಯಲಾಗುತ್ತಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಸುದ್ದಿಯಲ್ಲಿ ಮುರುಘಾ ಮಠ; ಇದರ ಇತಿಹಾಸವೇನು ಗೊತ್ತೇ?
ಮುರುಘಾ ಶರಣರನ್ನು ಬೆಂಗಳೂರಿಗೆ ಕರೆದೊಯ್ಯಲು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯ ಆಂಬ್ಯುಲೆನ್ಸ್ ಜಿಲ್ಲಾಸ್ಪತ್ರೆ ಆವರಣಕ್ಕೆ ಆಗಮಿಸಿದೆ. ಮುರುಘಾ ಮಠಕ್ಕೇ ಸೇರಿರುವ ಬಸವೇಶ್ವರ ಆಸ್ಪತ್ರೆಯ ಆಂಬ್ಯುಲೆನ್ಸ್ ಇದಾಗಿದ್ದು, ಇಲ್ಲಿಂದ ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಗೆ ದಾಖಲು ಮಾಡಲು ಸಿದ್ಧತೆ ನಡೆದಿದೆ. ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಆದರೆ ಚಿತ್ರದುರ್ಗ ಕೇಂದ್ರ ಕಾರಾಗೃಹದ ಜೈಲುವಾಸವನ್ನು ಶ್ರೀಗಳು ತಪ್ಪಿಸಿಕೊಳ್ಳಲಿದ್ದಾರೆ. ಆಗ ಪೊಲೀಸ್ ಕಸ್ಟಡಿಗೆ ಅವರನ್ನು ಪಡೆಯಲು ಉದ್ದೇಶಿಸಿರುವ ಪೊಲೀಸರ ಯೋಜನೆ ಕೂಡ ತಲೆಕೆಳಗಾಗಲಿದೆ.
ಗುರುವಾರ ತಡರಾತ್ರಿ ಶ್ರೀಗಳ ಬಂಧನವಾಗಿತ್ತು. ಅದಕ್ಕೂ ಮುನ್ನ ವೈದ್ಯಕೀಯ ತಪಾಸಣೆ ನಡೆದಿತ್ತು. ಎದೆನೋವು ಕಾಣಿಸಿಕೊಂಡರೆ ಆಸ್ಪತ್ರೆಗೆ ಸೇರಿಸಲು ವೈದ್ಯಾಧಿಕಾರಿಗಳು ಸೂಚಿಸಿದ್ದರು. ತಡರಾತ್ರಿ ನ್ಯಾಯಾಧೀಶರ ಮುಂದೆ ಶ್ರೀಗಳನ್ನು ಹಾಜರುಪಡಿಸಿದಾಗ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಕೇಂದ್ರ ಕಾರಾಗೃಹಕ್ಕೆ ತೆರಳಿದ್ದ ಶ್ರೀಗಳಿಗೆ ಕೈದಿ ನಂ 2261 ನೀಡಲಾಗಿತ್ತು. ಶುಕ್ರವಾರ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶರಣರಿಗೆ ತೀವ್ರಗೊಂಡ ಎದೆನೋವು, ಬೆಂಗಳೂರಿಗೆ ಶಿಫ್ಟ್ ಮಾಡಲು ಸಜ್ಜು