ರಾಯಚೂರು: ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಾಹನ ತಡೆದಿದ್ದಕ್ಕೆ ಪೊಲೀಸ್ ಪೇದೆ ಮೇಲೆ ಮರಳು ದಂಧೆಕೋರರು ಹಲ್ಲೆ (assault case) ನಡೆಸಿರುವ ಘಟನೆ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ್ ಪುತ್ರನ ಗ್ಯಾಂಗ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.
ಹನುಮಂತ ಹಲ್ಲೆಗೊಳಗಾದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್. ಅಕ್ರಮವಾಗಿ ಮರಳು ಸಾಗಣೆ (Sand smuggling) ಮಾಡುತ್ತಿದ್ದ ವಾಹನ ತಡೆದಿದ್ದಕ್ಕೆ ಪೇದೆಯನ್ನು ಸರ್ಕಾರಿ ಅತಿಥಿ ಗೃಹದಲ್ಲಿ ಹಾಕಿ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಶಾಸಕಿ ಪುತ್ರ ಸಂತೋಷ ಮತ್ತು ಆಪ್ತ ಸಹಾಯಕ ಇಲಿಯಾಸ್ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲಿಯಾಸ್ ಅವರು ಶಾಸಕಿಯ ಸರ್ಕಾರಿ ಆಪ್ತಸಹಾಯಕರಾಗಿದ್ದಾರೆ.
ಭಾನುವಾರ ಮಧ್ಯಾಹ್ನ 2 ಟ್ರ್ಯಾಕ್ಟರ್ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಆದರೆ, ಆ ಟ್ರ್ಯಾಕ್ಟರ್ ಶಾಸಕಿ ಪುತ್ರನಿಗೆ ಸಂಬಂಧಿಸಿದ್ದಾಗಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಪೊಲೀಸ್ ಪೇದೆ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ಗಾಯಾಳು ಪೇದೆ ಹನುಮಂತ ಅವರನ್ನು ದೇವದುರ್ಗ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ.
ಶಾಸಕಿಯ ಪುತ್ರನ ದರ್ಪಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಶಾಸಕಿ ಪುತ್ರನ ಮುಂದೆ ಪೇದೆ ಕಣ್ಣೀರಿಡುತ್ತಿರುವ ದೃಶ್ಯ ವೈರಲ್ ಅಗಿದೆ.
ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ
ಬೆಂಗಳೂರು: ನಗರದ ರಾಜಗೋಪಾಲನಗರದ ಮೋಹನ್ ಥಿಯೇಟರ್ ಸಮೀಪದ ಮನೆಯಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ | Road Accident: ಹೊಸಕೋಟೆಯಲ್ಲಿ ಸರಣಿ ಅಪಘಾತ; ಕ್ಯಾಂಟರ್ ಚಾಲಕನ ನಿರ್ಲಕ್ಷ್ಯಕ್ಕೆ ಯುವತಿ ಸಾವು
ಕಾವ್ಯ (22) ನೇಣಿಗೆ ಶರಣಾದ ಗೃಹಿಣಿ. ಕುಣಿಗಲ್ ನಿವಾಸಿಯಾಗಿದ್ದ ಈಕೆಗೆ ಎರಡು ವರ್ಷದ ಹಿಂದೆ ಪ್ರವೀಣ್ ಎಂಬಾತನೊಂದಿಗೆ ವಿವಾಹವಾಗಿತ್ತು.ದಂಪತಿಗೆ ಒಂದು ವರ್ಷದ ಮಗು ಕೂಡ ಇತ್ತು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ರಾಜಗೋಪಾಲ ನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ