ಶಿವಮೊಗ್ಗ: ಆರೋಪಿಗಳನ್ನು ಪೊಲೀಸ್ ಎನ್‌ಕೌಂಟರ್ ಮಾಡುವುದು, ಒಂದು ಸಾವಿಗೆ ಇನ್ನೊಂದು ಕೊಲೆ ಮಾಡುವುದು ಪರಿಹಾರವಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬಿಜೆಪಿ ಯುವ ಮೋರ್ಚಾ ನಾಯಕರಾಗಿ ಪ್ರವೀಣ್ ನೆಟ್ಟಾರು ಅವರ ಹಂತಕರ ಎನ್‌ಕೌಂಟರ್‌ಗೆ ಕೇಳಿಬರುತ್ತಿರುವ ಕೂಗು ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಉತ್ತರ ಪ್ರದೇಶ ಮಾದರಿ ಅನುಸರಿಸಲು ಸಿದ್ಧ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಗೃಹ ಸಚಿವರ ಮಾತು ಮಹತ್ವ ಪಡೆದಿದೆ.
ಶಿವಮೊಗ್ಗೆದಲ್ಲಿ ಮಾತನಾಡಿದ ಅವರು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಳೆದುಕೊಂಡು ನೋವಾಗುವುದು, ಆಕ್ರೋಶ ವ್ಯಕ್ತಪಡಿಸುವುದು ಸಹಜ. ಯಾಕೆಂದರೆ, ನಮ್ಮಲ್ಲಿ ಯಾರೂ ಬಾಡಿಗೆ ಹಣಕ್ಕೆ ಇರುವ ಕಾರ್ಯಕರ್ತರಿಲ್ಲ. ಬಡವರಾದರೂ ಪಕ್ಷಕ್ಕೆ ದುಡಿಯುತ್ತಾರೆ. ಹೀಗಾಗಿ ಒಂದು ಘಟನೆ ನಡೆದಾಗ ಹೀಗೆಲ್ಲ ಅನಿಸುವುದು ಸಹಜ. ಪ್ರಾಣ ತೆಗೆಯುವುದು, ರಕ್ತ ಹರಿಸುವುದು ಹುಡುಗಾಟದ ಮಾತಲ್ಲ, ಇವೆಲ್ಲವೂ ನಿಲ್ಲಬೇಕುʼʼ ಎಂದರು.
ಸಿದ್ದು ಕಾಲದಲ್ಲೇ ಕೇಸೇ ಆಗುತ್ತಿರಲಿಲ್ಲ
ʻʻಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಕೂಡಲೇ ಮತಾಂಧ ಶಕ್ತಿಗಳ ಮೇಲಿದ್ದ 2000 ಕೇಸ್ ಹಿಂಪಡೆದರು. ಟಿಪ್ಪು ಜಯಂತಿ ಆರಂಭಿಸುವ ಮೂಲಕ ರಕ್ತಪಾತ ಮಾಡಿಸಿದರು. ಅವರ ಓಟ್ ಬ್ಯಾಂಕ್ ಗಾಗಿ ಯಾರ್ಯಾರನ್ನೋ ಬೆಳೆಸಿದ್ದಾರೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ದುಷ್ಕೃತ್ಯ ನಡೆದರೆ ಕೇಸನ್ನೇ ದಾಖಲಿಸುತ್ತಿರಲಿಲ್ಲʼʼ ಎಂದು ಗೃಹ ಸಚಿವರು ಹೇಳಿದರು.
ʻʻಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ಆರಾಮಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಜೈಲಿನ ಮೇಲೆ ದಾಳಿ ನಡೆಸಿ 15 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿದ್ದೇವೆʼʼ ಎಂದ ಸಚಿವರು, ಕಾಂಗ್ರೆಸ್ ಮಾಡಿಟ್ಟಿರುವ ಅಸಹ್ಯವನ್ನು ತೊಳೆಯಲು ಸಮಯ ಹಿಡಿಯುತ್ತಿದೆ ಎಂದರು.
ಫಾಸ್ಟ್ ಟ್ರ್ಯಾಕ್ ಕೋರ್ಟ್
ʻʻದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಯಾವ ದುಷ್ಟ ಶಕ್ತಿಗಳು ಬಾಲ ಬಿಚ್ಚದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುತ್ತೇವೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಿ ತ್ವರಿತ ವಿಚಾರಣೆ ನಡೆಸುವಂತೆ ಮನವಿ ಮಾಡುತ್ತಿದ್ದೇವೆ. ಬಿಸಿ ಇದ್ದಾಗಲೇ ಕಠಿಣ ಕ್ರಮ ಕೈಗೊಂಡರೆ ಮುಂದೆ ಈ ಕೃತ್ಯ ನಡೆಸುವವರಿಗೆ ಎಚ್ಚರಿಕೆ ಗಂಟೆಯಾದಂತಾಗುತ್ತದೆʼʼ ಎಂದು ಹೇಳಿದರು ಆರಗ ಜ್ಞಾನೇಂದ್ರ.