ಬೆಂಗಳೂರು: ಮಾನ್ಯತಾ ಟೆಕ್ಪಾರ್ಕ್ ಬಳಿ ಪಾರ್ಟಿ ಮುಗಿಸಿ ಬರುತ್ತಿದ್ದ ಕಾರ್ತಿಕ್ ಪೆತ್ರಿ ದಂಪತಿಯನ್ನು ಹೊಯ್ಸಳ ಪೊಲೀಸರು ತಡೆದು ಸುಲಿಗೆ ಮಾಡಲು (Police extortion) ಮುಂದಾದ ಪ್ರಕರಣ ಸದ್ದಾಗುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಇನ್ನು ಹಲವು ಪ್ರಕರಣಗಳು ದಾಖಲಾಗುತ್ತಿವೆ. ಮಧ್ಯರಾತ್ರಿ ಓಡಾಟಕ್ಕೆ ನಿರ್ಬಂಧವಿದೆ. ೩೦,೦೦೦ ರೂ. ದಂಡ ಕಟ್ಟಬೇಕು ಎಂದು ದಂಪತಿಯನ್ನು ಕಾಡಿದ ಪೊಲೀಸರು ಮೊಬೈಲ್ ಕಸಿದುದಲ್ಲದೆ ಬಂಧಿಸುವ ಬೆದರಿಕೆಯನ್ನೂ ಹಾಕಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಆದರೆ, ಇಂಥ ಹಲವು ಘಟನೆಗಳು ನಗರದಲ್ಲಿ ನಿತ್ಯ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದೀಗ ಹೊಸದಾಗಿ ಆಡುಗೋಡಿ ಠಾಣೆ ಪೊಲೀಸರಿಂದ ಸುಲಿಗೆ ನಡೆದಿದೆ. ಈ ಬಗ್ಗೆ ಬಂದಿರುವ ದೂರು ಆಧರಿಸಿ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ.
ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಚೈತ್ರ ರತ್ನಾಕರ್ ಹಾಗೂ ಚಿರಾಸ್ ಎಂಬಿಬ್ಬರು ಸಿಗರೇಟು ಸೇದುತ್ತಾ ನಿಂತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಆಡುಗೋಡಿ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೇಬಲ್‌ಗಳಾದ ಅರವಿಂದ್ ಹಾಗೂ ಮಾಳಪ್ಪ ಬಿ. ವಾಲಿಕಾರ್ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವನೆ ಹೆಸರಿನಲ್ಲಿ ವಸೂಲಿಗೆ ಇಳಿದರೆನ್ನಲಾಗಿದೆ.
ʻʻನಿಮ್ಮ ಮೇಲೆ ಎಫ್‌ಐಆರ್ ಹಾಕ್ತೇವೆ. ೫೦ ಸಾವಿರ ರೂ. ದಂಡ ಕಟ್ಟಬೇಕುʼʼ ಎಂದು ಬೆದರಿಸಿದ ಕಾನ್‌ಸ್ಟೇಬಲ್‌ಗಳು ಕೊನೆಗೆ ಹಣ ಕೊಡುವಂತೆ ಪೀಡಿಸಿದರು ಎಂದು ದೂರಲಾಗಿದೆ. ಅಂತಿಮವಾಗಿ ೪೦೦೦ ರೂ. ಕೊಡದೆ ಬಿಡಲೇ ಇಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಗಂತ ಹಣವನ್ನು ಅವರು ನೇರವಾಗಿ ಪಡೆದಿಲ್ಲ. ತಮ್ಮ ಪರಿಚಯ ಟೀ ಅಂಗಡಿಯವರ ಫೋನ್ ನಂಬರ್ ಫೋನ್ ಪೇ ಮಾಡಿಸಿಕೊಂಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ವಿಚಾರವನ್ನು ಚೈತ್ರ ರತ್ನಾಕರ್ ಡಿಜಿ-ಐಜಿಪಿಗೆ ಟ್ವೀಟ್ ಮಾಡಿ ದೂರು ನೀಡಿದ್ದಾರೆ. ʻʻನಮ್ಮನ್ನು ಥರ್ಡ್ ಕ್ಲಾಸ್ ಸಿಟಿಝನ್ ತರ ಟ್ರೀಟ್ ಮಾಡಿದ್ದಾರೆ. ಹೆದರಿಸಿ ಬೆದರಿಸಿ 4 ಸಾವಿರ ಲಂಚದ ಹಣ ಪಡೆದಿದ್ದಾರೆʼʼ ಎಂದು ಟ್ವೀಟ್‌ನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಪೂರ್ವಭಾವಿ ಇಲಾಖಾ ತನಿಖೆ ಆದೇಶಿಸಿದ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬು ಅವರು, ವಿಚಾರಣೆ ನಡೆಸಿ ವರದಿ ನೀಡುವಂತೆ ಮಡಿವಾಳ ಎಸಿಪಿಗೆ ಸೂಚನೆ ನೀಡಿದ್ದಾರೆ. ಇದರ ಜತೆಗೇ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ.
ರಾಜಧಾನಿಯಲ್ಲಿ ಪೊಲೀಸರು ಮತ್ತು ಪೊಲೀಸರ ಹೆಸರಿನಲ್ಲಿ ದೊಡ್ಡ ಮಟ್ಟದ ಸುಲಿಗೆ ನಡೆಯುತ್ತಿದ್ದು, ಇದನ್ನು ನಿಯಂತ್ರಣ ಮಾಡಬೇಕು ಎಂಬ ಬೇಡಿಕೆ ಕೇಳಿಬಂದಿದೆ.