Site icon Vistara News

ಮುರುಘಾಶ್ರೀ ಪ್ರಕರಣ| ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಜತೆಗೆ ದಲಿತ ದೌರ್ಜನ್ಯ ಕೇಸ್‌ ಕೂಡಾ ದಾಖಲು

ಮುರುಘಾಶ್ರೀ

ಚಿತ್ರದುರ್ಗ: ಇಲ್ಲಿನ ಪ್ರತಿಷ್ಠಿತ ಮುರುಘಾ ಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಡಬಲ್‌ ಟ್ರಬಲ್‌ ಎದುರಾಗಿದೆ. ಒಂದು ಕಡೆ ಹಾಸ್ಟೆಲ್‌ವಾಸಿಗಳಾಗಿದ್ದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಅವರ ಪಾಲಿಗೆ ಆತಂಕ ಸೃಷ್ಟಿಸಿದ್ದರೆ, ಈಗ ದಲಿತ ದೌರ್ಜನ್ಯ ಪ್ರಕರಣವೂ ಜತೆಯಾಗಿದೆ.

ಮುರುಘಾ ಶರಣ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರತಿಬಂಧಕ ಅಧಿನಿಯಮದಡಿ ದೂರು ದಾಖಲಿಸಲಾಗಿದೆ. ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಈ ಕಾರಣಕ್ಕಾಗಿ ಈ ಪ್ರಕರಣ ಮಾನ್ಯತೆ ಪಡೆದಿದೆ.

ದೌರ್ಜನ್ಯ ಪ್ರತಿಬಂಧಕ ಕಾಯಿದೆಯ ಕಲಂ 3 ಕ್ಲಾಸ್ (1) ಸಬ್ ಕ್ಲಾಸ್, w(1)(2), 3 ಕ್ಲಾಸ್(2) (v) ಹೆಚ್ಚುವರಿ ಸೇರ್ಪಡೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಅನುಮತಿ ಮತ್ತು ಸಲಹೆ ಪಡೆದೇ ಪೊಲೀಸರು ಈ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ವಾಮೀಜಿ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯಿದೆಯಡಿ ಕೇಸ್‌ ದಾಖಲಾಗಿರುವುದರಿಂದ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಮುಂಜಾನೆಯೇ ದಲಿತ ಯುವ ಕಾರ್ಯಕರ್ತರು ವಿದ್ಯಾರ್ಥಿನಿಯರನ್ನು ಇರಿಸಲಾಗಿದ್ದ ಬಾಲಭವನದ ಮುಂದೆ ಪ್ರತಿಭಟನೆ ನಡೆಸಿದ್ದರು.

ಚಿತ್ರದುರ್ಗದಲ್ಲಿ ಬೆಳಗ್ಗಿನಿಂದ ಹಲವು ವಿದ್ಯಮಾನಗಳು ನಡೆಯುತ್ತಿವೆ. ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು, ರಾಜಕಾರಣಿಗಳು ಮಠಕ್ಕೆ ಆಗಮಿಸಿದ್ದರು. ಈ ನಡುವೆ, ವಿದ್ಯಾರ್ಥಿನಿಯರನ್ನು ಕೋರ್ಟ್‌ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಲು ಸಿದ್ಧತೆ ನಡೆಯುತ್ತಿದ್ದು, ಮಧ್ಯಾಹ್ನ ೨.೩೦ಕ್ಕೆ ಕೋರ್ಟ್‌ ಸಮಯ ನಿಗದಿಪಡಿಸಲಾಗಿದೆ.

ಇದನ್ನೂ ಓದಿ| ಮುರುಘಾ ಶ್ರೀ ಪ್ರಕರಣ | ಶ್ರೀಗಳ ಬಂಧನ ಆಗ್ರಹಿಸಿ ದಲಿತ ಮುಖಂಡರಿಂದ ಪ್ರತಿಭಟನೆ

Exit mobile version