ಕೋಲಾರ: ಕೋಲಾರ ನಗರದ ಪೇಟೆಚಾಮನಹಳ್ಳಿ ಬಡಾವಣೆಯ ಸರ್ಕಾರಿ ಶಾಲೆಯ ಆವರಣದಲ್ಲಿ ನವೆಂಬರ್ 3ರಂದು ಸಂಜೆಯ ಹೊತ್ತು ಪ್ರಥಮ ಪಿಯು ವಿದ್ಯಾರ್ಥಿ ಕಾರ್ತಿಕ್ (17) (Student Kartik) ಎಂಬಾತನನ್ನು ಅತ್ಯಂತ ಹಿಂಸಾತ್ಮಕವಾಗಿ ಕೊಲೆ (Kolara Murder) ಮಾಡಿದ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ಅಪ್ರಾಪ್ತ ವಯಸ್ಸಿನ ಹಂತಕರಿಗೆ ಈಗ ಪೊಲೀಸರೇ ಫೈರಿಂಗ್ (Police firing) ಮಾಡಿದ್ದಾರೆ. ತಮಿಳುನಾಡಿನಲ್ಲಿ ಬಂಧಿತರಾಗಿದ್ದ ಈ ಇಬ್ಬರನ್ನು ಕೋಲಾರಕ್ಕೆ ಕರೆತರುವ ವೇಳೆ ಅವರು ಪೊಲೀಸರ ಮೇಲೆಯೇ ದಾಳಿ ಮಾಡಲು ಮುಂದಾಗಿದ್ದರು. ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ಕ್ರೌರ್ಯವನ್ನು ಮೈಗೂಡಿಸಿಕೊಂಡಿರುವ ಇವರ ಸೊಕ್ಕು ಅಡಗಿಸಲು ಪೊಲೀಸರು ಅವರ ಕಾಲಿಗೇ ಗುಂಡು ಹಾರಿಸಿದ್ದಾರೆ. ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ಈ ಫೈರಿಂಗ್ ನಡೆದಿದೆ.
ಕೋಲಾರದ ಎಸ್.ಡಿ.ಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್ ಅರುಣ್ ಸಿಂಗ್ ಎಂಬವರ ಪುತ್ರನಾಗಿದ್ದಾನೆ. ನವೆಂಬರ್ 3ರಂದು ಸಂಜೆ ಆತನನ್ನು ಶಾಲೆಯ ಆವರಣಕ್ಕೆ ಬರುವಂತೆ ಹೇಳಿದ್ದ ಆತನ ಸ್ನೇಹಿತರು ಅಲ್ಲೇ ಆತನನ್ನು ಕೊಂದು ಮುಗಿಸಿದ್ದರು. ಈ ಕೃತ್ಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರನಾಗಿರುವ ದಿಲೀಪ್ ಅಲಿಯಾಸ್ ಶೈನ್ ಮತ್ತು ರಿಷಿಕ್ ಎಂಬವರು ಪ್ರಧಾನ ಆರೋಪಿಗಳು ಎಂದು ಗುರುತಿಸಲಾಗಿತ್ತು. ಒಟ್ಟು ಆರು ಮಂದಿಯ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಮೂವರನ್ನು ಬಂಧಿಸಲಾಗಿತ್ತು. ಕಾರ್ತಿಕ್ ಮತ್ತು ಈ ಹಂತಕರೆಲ್ಲರೂ ಮೊದಲು ಗೆಳೆಯರೇ ಆಗಿದ್ದು, ಯಾವುದೋ ಕಾರಣಕ್ಕೆ ದ್ವೇಷ ಬೆಳೆದು ಕೊಲೆಯ ಹಂತಕ್ಕೆ ತಲುಪಿತ್ತು ಎನ್ನುವುದು ಪ್ರಾಥಮಿಕ ಮಾಹಿತಿ.
ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ಹಂತಕರು
ಕಾರ್ತಿಕ್‌ನನ್ನು ಕೊಲೆ ಮಾಡಿದ ದುಷ್ಟ ಬಾಲಕರಲ್ಲಿ ಇಬ್ಬರು ತಮಿಳುನಾಡಿಗೆ ಪರಾರಿಯಾಗಿದ್ದರು. ಆದರೆ, ಅವರ ಚಲನವಲನಗಳನ್ನು ಪತ್ತೆಹಚ್ಚಿದ ಪೊಲೀಸರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಅವರನ್ನು ಬಂಧಿಸಿದ್ದರು.
ಅವರನ್ನು ಅಲ್ಲಿಂದ ಕೋಲಾರಕ್ಕೆ ಕರೆತರುವ ಜವಾಬ್ದಾರಿಯನ್ನು ಹೊತ್ತಿದ್ದವರು ಮುಳಬಾಗಿಲು ಸಬ್ ಇನ್ಸ್‌ಪೆಕ್ಟರ್ ವಿಠಲ್ ತಳವಾರ್. ಅವರು ವಾಹನದಲ್ಲಿ ಕೊಯಮತ್ತೂರಿನಿಂದ ಹಂತಕರನ್ನು ಕರೆ ತರುತ್ತಿದ್ದರು. ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ಬರುತ್ತಿದ್ದಂತೆಯೇ ಒಮ್ಮೆ ವಾಹನವನ್ನು ನಿಲ್ಲಿಸಲಾಯಿತು. ಆಗ ಈ ಹಂತಕರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಆಗ ವಿಠಲ್ ತಳವಾರ್ ಅವರು ಆತ್ಮರಕ್ಷಣೆಗಾಗಿ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಎರಡೂ ಕಾಲುಗಳಿಗೆ ಗುಂಡು ಹಾರಿಸಲಾಗಿದ್ದು, ಬಳಿಕ ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸರಿಗೂ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಸ್ಪಿ ನಾರಾಯಣ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವೆಂಬರ್ 3ರ ಸಂಜೆ ನಡೆದಿದ್ದೇನು?
ಕೋಲಾರದ ಎಸ್.ಡಿ.ಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್, ನ.3ರಂದು ಕಾಲೇಜಿಗೆ ಹೋಗಿರಲಿಲ್ಲ. ಹೊಟ್ಟೆ ನೋವಿನ ಕಾರಣ ನೀಡಿ ಮನೆಯಲ್ಲೇ ಇದ್ದ. ಸಂಜೆ ವೇಳೆ ಯಾರೋ ಸ್ನೇಹಿತರು ಕರೆ ಮಾಡಿ ಆತನನ್ನು ಕರೆದಿದ್ದಾರೆ. ಸಂಜೆ 5.30ರ ವೇಳೆಗೆ ಕಾರ್ತಿಕ್ ಮನೆಯಿಂದ ಹೊರ ಹೋಗಿದ್ದು ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ರಾತ್ರಿ 9 ಗಂಟೆಗೆ ಕಾರ್ತಿಕ್‌ನ ತಂದೆ ಅರುಣ್ ಸಿಂಗ್ ಅವರಿಗೆ ಕರೆ ಮಾಡಿ ಕಾರ್ತಿಕ್ ಕೊಲೆಯಾಗಿರುವ ವಿಷಯವನ್ನು ತಿಳಿಸಿದ್ದರು. ಅಲ್ಲಿ ಹೋಗಿ ನೋಡಿದಾಗ ಕಾರ್ತಿಕ್ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದ.
ಮೈಮೇಲೆ ಚಾಕುವಿನಿಂದ S ಮತ್ತು R ಎಂದು ಬರೆದಿದ್ದರು!
ಈ ಕೊಲೆ ಮಾಡಿದವರು ಅದೆಷ್ಟು ಕ್ರೂರಿಗಳಾಗಿದ್ದರೆಂದರೆ ಕಾರ್ತಿಕ್‌ನನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಲ್ಲದೆ ಆತನ ಮೈಮೇಲೆ S ಮತ್ತು R ಎಂಬ ಅಕ್ಷರಗಳನ್ನು ಚಾಕುವಿನಿಂದ ಕೆತ್ತಿದ್ದರು. ಚಾಕುವಿನಿಂದ ಇರಿದ ಬಳಿಕ ಆತ ನೋವಿನಿಂದ ನರಳುತ್ತಾ ಪ್ರಾಣ ಕಳೆದುಕೊಳ್ಳುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದರು. ವಿಡಿಯೊದಲ್ಲಿ ಒಟ್ಟು ಆರು ಮಂದಿ ಕೊಲೆ ಮಾಡಿದಂತೆ ಕಂಡುಬರುತ್ತಿತ್ತು.
ಹಾಗಿದ್ದರೆ ಎಸ್ ಮತ್ತು ಆರ್ ಅಂದರೆ ಯಾರು?
ಕಾರ್ತಿಕ್ ಸಿಂಗ್‌ನನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿರುವ ಹಂತಕರು ಮುಖ, ಕತ್ತು, ಎದೆಯನ್ನು ಬಗೆದಿದ್ದರು. ಅದೇ ಚಾಕುವಿನಲ್ಲೇ ಎದೆಯ ಮೇಲೆ S ಮತ್ತು R ಎಂದು ಬರೆಯಲಾಗಿತ್ತು. ಇದು ಕೊಲೆಯ ಪ್ರಮುಖ ಆರೋಪಿಗಳಾದ ದಿಲೀಪ್ ಅಲಿಯಾಶ್ ಶೈನು ಹಾಗೂ ರಿಷಿಕ್ ಎಂಬವರ ಹೆಸರಿನ ಪ್ರಥಮಾಕ್ಷರ ಎಂದು ಪೊಲೀಸರಿಗೆ ಆವತ್ತೇ ತಿಳಿದಿತ್ತು.
ಸಣ್ಣ ವಯಸ್ಸಿನ ಅಪ್ರಾಪ್ತ ವಯಸ್ಸಿನ ಬಾಲಕರೇ ಆಗಿದ್ದರೂ ಇವರು ಅದೆಷ್ಟು ಕ್ರೂರಿಗಳಾಗಿದ್ದರು ಎಂದರೆ ಕಾರ್ತಿಕ್ ಸಿಂಗ್‌ನನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಏಳು ಮಂದಿ ಬಳಿಕ ತಮ್ಮ ತಮ್ಮ ಮನೆಗಳಿಗೆ ಹೋಗಿ ಊಟ ಮಾಡಿದ್ದರು. ಅದಾದ ಬಳಿಕವೇ ತಪ್ಪಿಸಿಕೊಂಡಿದ್ದರು.
ದುಷ್ಟ ಬಾಲಕರ ಸ್ನೇಹವೇ ಮುಳ್ಳಾಯ್ತು ಕಾರ್ತಿಕ್‌ಗೆ
17 ವರ್ಷದ ಬಾಲಕನಾಗಿರುವ ಕಾರ್ತಿಕ್ ಕೋಲಾರದ ಪಿ.ಸಿ. ಬಡಾವಣೆ ಹಾಗೂ ಆರೋಹಳ್ಳಿ ಏರಿಯಾದ ಅವನದೇ ವಯಸಿನ ಹುಡುಗರ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿದ್ದ. ಅದು ಖತರ್ನಾಕ್ ಗ್ಯಾಂಗ್ ಆಗಿತ್ತು.
ಎಂಟು ತಿಂಗಳ ಹಿಂದೆ ಕಾರ್ತಿಕ್ ಈ ತಂಡದಲ್ಲಿದ್ದ ಹುಡುಗರ ಪೈಕಿ ಒಬ್ಬನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿಲ್ಲ ಎಂಬ ಕಾರಣಕ್ಕಾಗಿ ಆತನ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿತ್ತು. ಅಷ್ಟೇ ಅಲ್ಲ ಆತನ ಬಟ್ಟೆ ಬಿಚ್ಚಿ ಥಳಿಸಲಾಗಿತ್ತು. ಇದರ ವಿಡಿಯೊ ಕೂಡಾ ವೈರಲ್ ಆಗಿತ್ತು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ಹುಡುಗರ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಆ ಬಳಿಕ ಕಾರ್ತಿಕ್ ಸಿಂಗ್ ಆ ತಂಡದಿಂದ ದೂರವಿದ್ದ ಎನ್ನಲಾಗಿದೆ. ಆದರೆ, ಈ ಪುಂಡರ ತಂಡ ಅವನನ್ನು ಕಾಡುತ್ತಲೇ ಇತ್ತು. ಬಹುಶಃ ನವೆಂಬರ್ 3ರಂದು ಅದೇ ತಂಡ ಆತನಿಗೆ ಹಲ್ಲೆ ಮಾಡುವ ಚಾಲೆಂಜ್ ಮಾಡಿದೆ ಅನಿಸುತ್ತದೆ. ಅದೇ ಕಾರಣಕ್ಕಾಗಿ ಆತ ಕಾಲೇಜಿಗೂ ಹೋಗದೆ ಮನೆಯಲ್ಲಿ ಉಳಿದಿದ್ದ. ಆದರೆ ಸಂಜೆಯ ಹೊತ್ತಿಗೆ ಯಾವುದೋ ಕಾರಣ ಕೊಟ್ಟು ಆತನನ್ನು ಕರೆಸಿಕೊಂಡು ಕೊಲೆ ಮಾಡಿದೆ.