ಬೆಂಗಳೂರು: ವಿಧಾನಸಭಾ ಚುನಾವಣೆಗೆ (karnataka election 2023) ಕೌಂಟ್‌ಡೌನ್ ಶುರುವಾಗಿದೆ. ಚುನಾವಣೆ ಸಮಯ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಖಾಕಿ ಪಡೆಗಳು ಹಗಲಿರುಳು ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹೊತ್ತಲ್ಲೇ ಪೊಲೀಸ್ ಸಿಬ್ಬಂದಿಯಲ್ಲಿ ಎದೆನೋವು, ಅಧಿಕ, ಕಡಿಮೆ ರಕ್ತದೊತ್ತಡ ಸೇರಿದಂತೆ ಅನಾರೋಗ್ಯ ಸಮಸ್ಯೆಗಳು (Police Health Issues) ಕಾಡುತ್ತಿವೆ. ಹೀಗಾಗಿ ಸಿಬ್ಬಂದಿಯ ಆರೋಗ್ಯ ಕಾಳಜಿಗೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಆಗ್ನೇಯ ವ್ಯಾಪ್ತಿಗೆ ಬರುವ 14 ಪೊಲೀಸ್ ಸ್ಟೇಷನ್‌ಗಳ ಪೈಕಿ 800 ಸಿಬ್ಬಂದಿಗೆ 8 ವಿಧದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇವರಲ್ಲಿ ಶೇಕಡ 20%ರಷ್ಟು ಮಂದಿ ಹೈ ಹಾಗೂ ಲೋ ಬಿಪಿ ಸಮಸ್ಯೆಯನ್ನು ಹೊಂದಿದ್ದಾರೆ. ಉಳಿದ 20%ರಷ್ಟು ಮಂದಿಗೆ ಗ್ಯಾಸ್ಟಿಕ್ ಹಾಗೂ ಎದೆನೋವಿನ ಸಮಸ್ಯೆ ಕಾಡುತ್ತಿರುವ ಬಗ್ಗೆ ವರದಿ ಆಗಿದೆ.
ಇತ್ತೀಚೆಗೆ ಹೃದಯಾಘಾತ ಹಾಗೂ ಲೋ ಬಿಪಿ ಸಮಸ್ಯೆಯಿಂದಾಗಿ ಕರ್ತವ್ಯದಲ್ಲಿರುವಾಗಲೇ ಪೊಲೀಸರು ಮೃತಪಡುತ್ತಿದ್ದಾರೆ. ಒತ್ತಡದೊಂದಿಗೆ ಹಗಲಿರುಳು ಶ್ರಮವಹಿಸುವ ಪೊಲೀಸ್ ಸಿಬ್ಬಂದಿಯಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆ. ಇದರಿಂದ ಎಚ್ಚೆತ್ತಿರುವ ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಯ ಆರೋಗ್ಯಕ್ಕೆ ಒತ್ತು ನೀಡುತ್ತಿದ್ದಾರೆ.
ಆಗ್ನೇಯ ವಿಭಾಗದ ಪೊಲೀಸರಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿದೆ. ಹೀಗಾಗಿ ಕೆಲಸ ಅವಧಿಯಷ್ಟೇ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ಜಯದೇವ ಹೃದ್ರೋಗ, ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ಎಲ್ಲ ಸಿಬ್ಬಂದಿಗೆ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬ, ಎಂಟು ವಿಧದಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯದ ಸಮಸ್ಯೆ ಇರುವವರನ್ನು ಪ್ರತ್ಯೇಕ ಗ್ರೂಪ್ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಒತ್ತಡದ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಆರೋಗ್ಯ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಲೋ ಬಿಪಿಯಿಂದಾಗಿ ಎಎಸ್‌ಐ ಮೃತ್ಯು; ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಉರುಳಿಬಿದ್ದರು
ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಎಎಸ್‌ಐ (ASI Death) ಒಬ್ಬರು ಮೃತಪಟ್ಟಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೈ ಶ್ರೀನಿವಾಸ್ (59) ಮೃತ ದುರ್ದೈವಿ. ಶ್ರೀನಿವಾಸ್ ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದು, ವಾರದ ಹಿಂದೆ ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಕುಸಿದುಬಿದ್ದಿದ್ದರು. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲೋ ಬಿಪಿ ಸಮಸ್ಯೆ ಉಂಟಾಗಿ ಅವರು ಬೈಕ್‌ನಿಂದ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Road Accident: ಅಪರಿಚಿತ ವಾಹನ ಡಿಕ್ಕಿಯಾಗಿ ಪೊಲೀಸ್ ಪೇದೆ ಸಾವು; ಮರಳು ಟ್ರ್ಯಾಕ್ಟರ್ ಪಲ್ಟಿ ಹೊಡೆದು ಚಾಲಕ ಮೃತ್ಯು
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತೀಚೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಪ್ರಾಣ ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿದೆ. ಹೆಚ್ಚಿನ ಮಂದಿ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಇತ್ತೀಚೆಗೆ ಅಧ್ಯಯನವೊಂದು ತಿಳಿಸಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ