Site icon Vistara News

ಬೆಂಕಿ ಜತೆ ಕಾಲ್ಚೆಂಡಾಟ! ಉರಿಯುತ್ತಿದ್ದ ಟಯರನ್ನು ಫುಟ್ಬಾಲ್‌ನಂತೆ ಕಾಲಲ್ಲಿ ಒದ್ದ ಪೊಲೀಸ್‌ ಇನ್‌ಸ್ಪೆಕ್ಟರ್‌!

Haveri fire

ಹಾವೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಮೊಟ್ಟೆ ಎಸೆದ ಮತ್ತು ಗೋಬ್ಯಾಕ್‌ ಸಿದ್ದರಾಮಯ್ಯ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಹಾವೇರಿಯಲ್ಲಿ ನಡೆದ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿದ ಟಯರ್‌ ಒಂದನ್ನು ಪೊಲೀಸ್‌ ಇನ್‌ಸ್ಪೆಕ್ಟರ್‌ ಸುರೇಶ್‌ ಸಗರಿ ಅವರು ಫುಟ್ಬಾಲ್‌ನಂತೆ ಕಾಲಿನಲ್ಲಿ ಚೆಲ್ಲಾಡಿದ ಘಟನೆ ಗಮನ ಸೆಳೆಯಿತು. ಈ ನಡುವೆ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟವೂ ನಡೆಯಿತು.

ಕಾಂಗ್ರೆಸ್‌ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಹಾವೇರಿ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ಹಿಡಿದು ಬಂಧಿಸುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದರು. ಈ ನಡುವೆ, ಸ್ವಲ್ಪ ದೂರದಲ್ಲಿ ಕೆಲವು ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚುವುದು ಸಿಪಿಐ ಸುರೇಶ್‌ ಸಗರಿ ಅವರಿಗೆ ಕಂಡಿತು. ಅವರು ತಕ್ಷಣವೇ ಆ ಕಡಗೆ ಓಡಿದರು. ಅವರ ಜತೆಗೆ ಇದರ ಪೊಲೀಸ್‌ ಸಿಬ್ಬಂದಿ ಕೂಡಾ ದೌಡಾಯಿಸಿದರು.

ಎರಡು ಮೂರು ಟಯರ್‌ಗಳಿಗೆ ಬೆಂಕಿ ಹಚ್ಚಿದ್ದು ಸಗರಿ ಅವರು ಒಂದು ಟಯರ್‌ ಬಳಿಗೆ ಧಾವಿಸಿದರು. ಟಯರ್‌ಗೆ ಆಗಷ್ಟೇ ಸಣ್ಣಗೆ ಬೆಂಕಿ ಹತ್ತಿಕೊಳ್ಳುತ್ತಿತ್ತು. ಬೆಂಕಿ ಜೋರಾಗುವುದನ್ನು ತಡೆಯುವ ಉದ್ದೇಶದಿಂದ ಮತ್ತು ಕಾರ್ಯಕರ್ತರ ಕೈಯಿಂದ ಅದನ್ನು ತಪ್ಪಿಸುವುದಕ್ಕಾಗಿ ಕಾಲಿನಿಂದ ಚೆಂಡಿನಂತೆ ಒದ್ದರು. ಈ ನಡುವೆ, ಕಾರ್ಯಕರ್ತರೂ ಅವರ ಹಿಂದೆ ಓಡಿದರು. ಆಗ ಅವರು ಫುಟ್ಬಾಲ್‌ ಆಟದಲ್ಲಿ ಚೆಂಡು ಇನ್ನೊಬ್ಬರ ಕಾಲಿಗೆ ಸಿಗದಂತೆ ಹೇಗೆ ತಪ್ಪಿಸುತ್ತಾರೋ ಥೇಟ್‌ ಅದೇ ರೀತಿ ಅವರ ಕಾಲಿನಿಂದ ತಪ್ಪಿಸಿ ಮುಂದಕ್ಕೆ ತಳ್ಳುತ್ತಾ ಸಾಗಿದರು. ಅಂತಿಮವಾಗಿ ತಾವೇ ಅದರ ಮೇಲೆ ಹಾರಿ ಹಾರಿ ಬೆಂಕಿಯನ್ನು ನಂದಿಸಿದರು. ಅಷ್ಟಕ್ಕೇ ಬಿಡದೆ ಬೆಂಕಿ ಆರಿದ ಟಯರನ್ನು ಕೈಯಲ್ಲಿ ಎತ್ತಿಕೊಂಡು ಓಡಿದರು.

ಈ ಬೆಂಕಿಯಾಟದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರ ಪ್ಯಾಂಟಿಗೂ ಒಂದು ಕ್ಷಣ ಬೆಂಕಿ ಹತ್ತಿಕೊಂಡಿತ್ತು. ಆದರೂ ಲೆಕ್ಕಿಸದೆ ಅವರು ಹೋರಾಟ ಮುಂದುವರಿಸಿದರು!

ಇನ್‌ಸ್ಪೆಕ್ಟರ್‌ ಅವರು ಯಾಕೆ ಇಷ್ಟೊಂದು ರೋಷಾವೇಷ ಪ್ರದರ್ಶಿಸಿದರು ಎಂದು ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯವಾಗಿತ್ತು. ಎಸ್‌ಪಿ ಹನುಮಂತರಾಯ ಅವರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ಕಾರ್ಯಕರ್ತರಿಗೆ ಟಯರ್‌ ಉರಿಸಲು ಅನುಮತಿ ನೀಡಲಾಗಿಲ್ಲ. ಹೀಗಾಗಿ ಅದನ್ನು ನಂದಿಸಲು ಇನ್‌ಸ್ಪೆಕ್ಟರ್‌ ಶ್ರಮಿಸಿದರು ಎಂದು ಅವರು ಸಮಜಾಯಿಷಿ ನೀಡಿದರು.

ಪೊಲೀಸ್‌ ಅಧಿಕಾರಿಗಳ ಬೆಂಕಿಯಾಟ

ಎಸ್‌ಪಿ ಎದುರಲ್ಲೇ ಎಗರಾಡಿದರು
ಈ ನಡುವೆ, ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಎಸ್‌ಪಿ ಎದುರೇ ಎಗರಾಡಿದರು. ದಾಂಧಲೆಗೆ ಮುಂದಾದರು. ಅವರನ್ನು ಖಾಕಿ ಪಡೆ ಎಳೆದೊಯ್ದು ಬಂಧಿಸಿತು. ಕೆಲವು ಕಾರ್ಯಕರ್ತರನ್ನು ಎಳೆದೊಯ್ದ ವೇಗ ಎಷ್ಟಿತ್ತೆಂದರೆ ಕೆಲವರು ಜೀಪ್‌ ಹತ್ತಲಾಗದೆ ಬಿದ್ದು ಒದ್ದಾಡಿದರು.!

ಇದವೇಳೆ ಕೆಲವರು ಪೊಲೀಸರ ನೇಮ್ ಪ್ಲೇಟ್, ವಿಜಿಲ್ ಗಾರ್ಡ್ ಕಿತ್ತು ಹಾಕಿದರು. ಅದರಲ್ಲೂ ಮುಖ್ಯವಾಗಿ ನಗರ ಠಾಣೆಯ ಸಿಪಿಐ ಸುರೇಶ್ ಸಗರಿ, ಪಿಎಸೈ ಯಲ್ಲಪ್ಪ ಹಾಗೂ ಸಿಬ್ಬಂದಿಯ ಮೇಲೆ ದಾಳಿ ನಡೆಯಿತು. ನೂಕಾಟದ ವೇಳೆ ಪೊಲೀಸರ ಯೂನಿಫಾರ್ಮ್‌ನ್ನೂ ಹರಿದು ಹಾಕಲಾಗಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ| ಎಲ್ಲ ಸಚಿವರ ಮನೆಗೆ ಮೊಟ್ಟೆ ಪಾರ್ಸೆಲ್‌: ವಿನೂತನ ಪ್ರತಿಭಟನೆಗೆ ಮುಂದಾದ ಯುವ ಕಾಂಗ್ರೆಸ್‌!

Exit mobile version