Site icon Vistara News

Police Museum | ಒಂದೇ ಸೂರಿನಡಿ ಇಲಾಖೆಯ ಸಮಗ್ರ ನೋಟ; ಐದೇ ನಿಮಿಷದಲ್ಲಿ ಪೂರ್ಣ ಚಿತ್ರಣ

bellary Police Museum 3

ಶಶಿಧರ್ ಮೇಟಿ, ಬಳ್ಳಾರಿ
ಐದು ನಿಮಿಷದಲ್ಲಿಯೇ ರಾಜ್ಯದ ಪೊಲೀಸ್ ಇತಿಹಾಸವನ್ನು ಮೆಲುಕು ಹಾಕಬಹುದು. ಸಮವಸ್ತ್ರ, ವಾಕಿಟಾಕಿ, ಪೊಲೀಸ್ ಸಶಸ್ತ್ರದ ಇತಿಹಾಸದ ಹಾದಿ ಎಲ್ಲವೂ ಇಲ್ಲಿ ಲಭ್ಯ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯ ಸಮಗ್ರ ಚಿತ್ರಣವನ್ನು ತಿಳಿಯಬೇಕೆಂದರೆ ಈ ಮ್ಯೂಸಿಯಂಗೆ (Police Museum) ಒಮ್ಮೆ ಭೇಟಿ ಕೊಟ್ಟರೆ ಒಂದೇ ನೋಟದಲ್ಲಿ ತಿಳಿಯಬಹುದು.

ಪೊಲೀಸ್ ಇಲಾಖೆಯಲ್ಲಿ ಒಂದು ಮಾದರಿ ಮ್ಯೂಸಿಯಂ ಇದಾಗಿದ್ದು, ಗಣಿ ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ ಆರಂಭಿಸಲಾಗಿದೆ. ಇಲಾಖೆಯ ಇಡೀ ಇತಿಹಾಸವನ್ನು ಒಂದೇ ಸೂರಿನಡಿ ಮತ್ತು ನೋಟದಡಿ ತಿಳಿಸುವುದು ಈ ಮ್ಯೂಸಿಯಂನ ಮೂಲ ಉದ್ದೇಶ. ಎಸ್ಪಿ ಕಚೇರಿಯಲ್ಲಿರುವ 100 ವರ್ಷದ ಹಳೆಯ ಕಟ್ಟಡವನ್ನು ನವೀಕರಣ ಮಾಡಿ, 45 ಲಕ್ಷ ರೂ.ವೆಚ್ಚದಲ್ಲಿಯೇ ಮ್ಯೂಸಿಯಂ ವ್ಯವಸ್ಥೆಯನ್ನು ಮಾಡಲಾಗಿದೆ.

ಪೊಲೀಸ್ ಇಲಾಖೆಯ 184 ವರ್ಷದ ಇತಿಹಾಸ
1838ರಲ್ಲಿ ಪೊಲೀಸರು ನಿರ್ವಹಿಸಬೇಕಾದ ಕೆಲಸವನ್ನು ತಳವಾರರು, ತೋಟಿಗಳು, ನೀರಗಂಟಿಗಳು, ಕಾವಲುಗಾರರು, ಆಮರಗರರು, ಅಂಕಮಾಲೆ, ಪಾಟೀಲ್, ಶಾನುಭೋಗ ಮುಂತಾದವರು ನಿರ್ವಹಿಸಿದ್ದರು. ನಂತರ ಪೊಲೀಸ್ ವ್ಯವಸ್ಥೆ ಸುಧಾರಣೆಯಾಗಿ 1847ರಲ್ಲಿ ಹೈದ್ರಾಬಾದ್ ಪೊಲೀಸ್ ವ್ಯವಸ್ಥೆ, 1857ರಲ್ಲಿ ಮದ್ರಾಸ್ ಪೊಲೀಸ್ ವ್ಯವಸ್ಥೆ, 1883ರಲ್ಲಿ ಮೈಸೂರು ಪೊಲೀಸ್ ವ್ಯವಸ್ಥೆ, ಬಾಂಬೆ ಪೊಲೀಸ್ ವ್ಯವಸ್ಥೆ ಕೊಡಗು ಪೊಲೀಸ್ ವ್ಯವಸ್ಥೆ ಜಾರಿಗೆ ಬಂತು. 1885ರಲ್ಲಿ ನವೆಂಬರ್ 1ರಂದು ಎಲ್ ರಿಕೆಟ್ಸ್ ಹಳೇ ಮೈಸೂರು ರಾಜ್ಯಕ್ಕೆ ಮೊದಲ ಐಜಿಪಿಯಾಗಿ ನೇಮಕರಾದರು. ನ.1, 1956ರಲ್ಲಿ ಹೊಸ ಮೈಸೂರು ರಾಜ್ಯವು ರೂಪುಗೊಂಡಿತ್ತು. ಪಿ.ಕೆ. ಪೊನ್ನಪ್ಪ ಐಪಿಎಸ್ ಪೊಲೀಸ್ ಮಹಾನಿರೀಕ್ಷಕರಾಗಿ ಹೊಸ ಮೈಸೂರಿನ ರಾಜ್ಯದ ಪೊಲೀಸ್ ಆಡಳಿತ ನೇತೃತ್ವವಹಿಸಿದ್ದರು. ಈ ಮಾಹಿತಿಯೂ ಮ್ಯೂಸಿಯಂನಲ್ಲಿ ಲಭ್ಯವಿದೆ.

ಆಗ 10ನೇ ಕ್ಲಾಸ್ ಓದಿದರೆ ಇನ್ಸ್‌ಪೆಕ್ಟರ್!
ಮದ್ರಾಸ್ ಪ್ರಾಂತ್ಯದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಲು 10ನೇ ತರಗತಿ ಅಥವಾ ಮಧ್ಯಂತರದ ಅರ್ಹತೆ ಅಗತ್ಯವಾಗಿತ್ತು. ಇಂಪೀರಿಯಲ್ ಪೊಲೀಸ್ ಖೇಡರ್ಗೆ ಲಂಡನ್‌ನಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದ್ದರು. ನಂತರ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಪೋಸ್ಟ್ ಮಾಡಲಾಗುತ್ತಿತ್ತು. ಹತ್ತು ವರ್ಷಗಳಲ್ಲಿ ಅವರಿಗೆ ಬಡ್ತಿ ನೀಡಿ ಪೊಲೀಸ್ ಅಧೀಕ್ಷಕರನ್ನಾಗಿ ಮಾಡಲಾಯಿತು. ನಂತರದಲ್ಲಿ ಈ ಹುದ್ದೆಗಳನ್ನು ನೇರವಾಗಿ ಐಪಿಎಸ್‌ಗಳನ್ನು ನೇಮಕ ಮಾಡಲಾಯಿತು ಎಂಬ ಮಾಹಿತಿಯನ್ನು ಇಲ್ಲಿದೆ.

ಇಂದಿನ ಆಂಧ್ರ, ಅಂದಿನ ಬಳ್ಳಾರಿ..!
ಹೌದು, ಇಂದಿನ ಆಂಧ್ರಪ್ರದೇಶದ ಅನಂತಪುರ, ಆದೋನಿ, ಆಲೂರು, ಗುತ್ತಿ, ರಾಯದುರ್ಗ, ತಾಡಿಪತ್ರಿ, ಧರ್ಮವರಂ, ಪೆನ್ನಕೊಂಡ, ಹಿಂದೂಪುರ, ಮಡಕಸಿರಗಳು 1860ರಲ್ಲಿ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಇಲ್ಲಿನ ಠಾಣೆಗಳು ಸೇರಿದಂತೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ 14 ತಾಲೂಕುಗಳು ಇತ್ತೆಂಬ ಮಾಹಿತಿ ಇಲ್ಲಿದೆ. ಅಲ್ಲದೆ, ಬೈನಾಕುಲರ್‌ ಅನ್ನು ಕ್ರಿ.ಶ.1608ರಲ್ಲಿ ಹ್ಯಾನ್ಸ್ ಲಿಪ್ಪರ್ಶ ಎಂಬ ಡಚ್ ಸಂಶೋಧಕ ಕಂಡು ಹಿಡಿದಿದ್ದ ಸಮಗ್ರ ಮಾಹಿತಿಯನ್ನೂ ಇಲ್ಲಿ ಕಾಣಬಹುದಾಗಿದೆ.

ಸಮವಸ್ತ್ರ ನೀತಿ ಸಂಹಿತೆ ಬೆಳೆದು ಬಂದಿದ್ದು ಹೀಗೆ
1956ರಲ್ಲಿ ರಾಜ್ಯಗಳು ಮರು ವಿಂಗಡೆಯ ನಂತರ ಪೊಲೀಸ್ ವ್ಯವಸ್ಥೆಗೆ ಹಲವು ಸವಾಲು ಒಡ್ಡಿತ್ತು. ಅದರಲ್ಲಿ ಸಮವಸ್ತ್ರವೂ ಒಂದಾಗಿತ್ತು, ವಿವಿಧ ಪೊಲೀಸ್ ಘಟಕಗಳು ಬಹು ಸಮವಸ್ತ್ರ ಹೊಂದಿತ್ತು. 1973ರಲ್ಲಿ ಸಮವಸ್ತ್ರವನ್ನು ಅಂಗೀಕರಿಸಿತು. ಆದರೆ, ಕೆಲವೊಂದು ತೊಡಕಿನಿಂದಾಗಿ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸ್ ಅವರು ಮುತುವರ್ಜಿವಹಿಸಿ ಪೊಲೀಸರಿಗೆ ಆರಾಮದಾಯಕ ಮತ್ತು ಆಕರ್ಷಕ ಸಮವಸ್ತ್ರವನ್ನು ಅನುಮೋದಿಸಿದರು.

ಆರಂಭದಲ್ಲಿ ಶಾರ್ಟ್ಸ್‌ಗಳು ಪ್ಯಾಂಟ್‌ಗಳಾಗಿ ಬದಲಾವಣೆ, ಸಿವಿಎಲ್ ಪಿಸಿ ಮತ್ತು ಎಚ್‌ಸಿ ಕುರ್ತಾಗಳನ್ನು ಫುಲ್ ಶರ್ಟ್‌ಗಳಾಗಿ ಬದಲಾವಣೆ, 1973ರಲ್ಲಿ ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್‌ಗೆ ಯೂನಿಫಾರ್ಮ್, ಮಹಿಳೆಯರಿಗೆ ನೀಲಿ ಬಣ್ಣದ ರೇಷ್ಮೆ ಸೀರೆಗಳ ಜಾಗದಲ್ಲಿ, ಬಿಳಿ ಬಣ್ಣದ ಕೋಟ್‌ಗಳು ಮತ್ತು ಟೆರಿಕಾಟ್ ಸೀರೆಗಳನ್ನು ಒದಗಿಸುತ್ತಿದ್ದರೆಂಬ ಮಾಹಿತಿಯನ್ನು ಸಹ ಇಲ್ಲಿ ಕಾಣಬಹುದು.

ಮಹಾಯುದ್ಧದ ಬಳಕೆಯ ಮಾದರಿ ರಿವಾಲ್ವರ್ ಪ್ರದರ್ಶನ
ಎರಡನೇ ಮಹಾಯುದ್ಧದಲ್ಲಿ ಬಳಕೆಯಾಗುತ್ತಿದ್ದ ಮಾದರಿಯ ಪಿಸ್ತೂಲ್ ಮತ್ತು ರಿವಾಲ್ವರ್‌ಗಳು ಪ್ರದರ್ಶನ ಮಾಡಲಾಗಿದೆ. ಹಳೆಯ ಪಿಸ್ತೂಲ್‌ಗಳನ್ನು ಇಟ್ಟುಕೊಳ್ಳಲು ಅವಕಾಶವಿಲ್ಲದ ಕಾರಣ ಡಿಜಿಯಿಂದ ಮತ್ತು ಇಲಾಖೆಯಿಂದ ಜಿಓ ಹೊರಡಿಸಿ ಪ್ರದರ್ಶನ ಮಾಡಲಾಗಿದೆ. (.38) ರೇಗರ್ ರಿವಾಲ್ವರ್, (.455) ರಿವಾಲ್ವರ್, (.303) ನಂ.1 ಮಾರ್ಕ್ 3 ರೈಫಲ್, (.303) ನಂ.4 ಮಾರ್ಕ್ 1 ರೈಫಲ್, ನಂ.5 ಮಾರ್ಕ್ 1 ರೈಫಲ್, (.38) ರಿವಾಲ್ವರ್ ಮಿನಿ, (.410) ಮಸ್ಕಿಟ್, (.45) ಸಿಎಂಟಿ ಹೀಗೆ ಸುಮಾರು ೨೦೦ ವರ್ಷಗಳ ಸಶಸ್ತ್ರಗಳ ಪ್ರದರ್ಶನವನ್ನು ಮಾಡಲಾಗಿದೆ.

ಮಾಬ್ ಆಪರೇಷನ್ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಬಾಡಿ ಪ್ರೊಟೆಕ್ಟರ್ (ದೇಹ ರಕ್ಷಾ ಕವಚ) ಅನ್ನು ಬಳಕೆ ಮಾಡುತ್ತಿದ್ದರು. ಇದನ್ನು ಕ್ರಿ.ಶ.1400ರಲ್ಲಿ ಗ್ರೀಕ್ ಮೈಸಿನಿಯನ್ ರಾಜನು ಮೊದಲು ಬಳಸಿದನು. ಲೆಗ್ ಪ್ಯಾಡ್ ಪ್ರೊಟೆಕ್ಟರ್, ಹ್ಯಾಂಡ್ ಪ್ರೊಟೆಕ್ಟರ್, ಹೆಲ್ಮೆಟ್ ಬಳಕೆ ಮಾಡುತ್ತಾರೆ. ಕೈಕೋಳ ಮತ್ತು ಲೀಡಿಂಗ್ ಚೈನ್‌ಗಳ ಪ್ರದರ್ಶನ ಮಾಡಲಾಗಿದೆ.

ಅಂದು ಕೈಯಲ್ಲಿತ್ತು ವಾಕಿಟಾಕಿ ಮೀಷನ್
ಅಂದು ವಾಕಿಟಾಕಿ ಕೆಲಸ ಮಾಡುವ ವೈರ್‌ಲೆಸ್‌ ಮಿಷನ್‌ನನ್ನು ಸಿಬ್ಬಂದಿಯೇ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರು. ತಂತ್ರಜ್ಞಾನ ಬೆಳೆದಂತೆ ನಾಲ್ಕು ಮಾದರಿಯಲ್ಲಿ ವಾಕಿಟಾಕಿ ಬಳಕೆ ಬದಲಾಗಿದೆ. 1960 ರಿಂದ 1980ರವರೆಗೆ ಎಂಎಫ್ 713 ವಾಕಿಟಾಕಿ (ಎಚ್ಎಫ್), ಸಿಗ್ನಲ್ ಕಾರ್ಪ್ಸ್ ಫ್ರೀಕ್ವೆನ್ಸಿ ಮೀಟರ್ ಬಿಸಿ 221-ಎಇ, ಯೆಸ್ ಸಿಸ್ಟಮ್ 600 ಎಚ್ಎಫ್ ಟ್ರಾನ್ಸ್ರಿಸಿವರ್ ಸೆಟ್ ಬಳಸಲಾಗುತ್ತಿತ್ತು. ನಂತರದಲ್ಲಿ ಮೊಟರೋಲ ಜಿಎಂ 950 ಪ್ಲಸ್ ವಿಎಚ್ಎಫ್ ಸೆಟ್ ವಾಕಿಟಾಕಿಯನ್ನು ಬಳಸಲಾಯಿತು. ಹೀಗೆ ಅಂದು ಬ್ರಿಟಿಷರ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಇಲಾಖೆ ಕಡತಗಳು, ಗಡಿಯಾರಗಳು, ಬ್ಯಾಡ್ಜ್‌ಗಳು ಸೇರಿದಂತೆ ಇಲಾಖೆಯ ಅಧಿಕಾರ ವ್ಯವಸ್ಥೆಯ ಸಂಪೂರ್ಣ ಮಾಹಿತಿಯನ್ನು ಈ ಮ್ಯೂಸಿಯಂನಲ್ಲಿ ತಿಳಿಯಬಹುದು.

ಪೊಲೀಸ್ ಇಲಾಖೆ ನಡೆದು ಬಂದ ಹಾದಿಯನ್ನು ಮತ್ತು ಹಿಂದಿನಿಂದ ಬಳಕೆ ಮಾಡಿರುವ ಉಪಕರಣಗಳ ಮಾಹಿತಿಯನ್ನು ನಮ್ಮ ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಯುವ ಜನತೆಗೆ ತೆರೆದಮನೆ ಕಾರ್ಯಕ್ರಮದ ಮೂಲಕ ತಿಳಿಸಲು ಈ ಮ್ಯೂಸಿಯಂ ಅನುಕೂಲವಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ಬಂದರೆ ಇಡೀ ಇಲಾಖೆಯ ಸಮಗ್ರ ಮಾಹಿತಿ ತಿಳಿಯಲಿದೆ.
| ಸೈದುಲು ಅಡಾವತ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಬಳ್ಳಾರಿ

Exit mobile version