ದಾವಣಗೆರೆ: ಪೊಲೀಸ್ ಅಧಿಕಾರಿಯ ಹುದ್ದೆಗೆ ರಾಜಿನಾಮೆ ನೀಡಿ ಐದು ವರ್ಷಗಳ ಕಾಲ ರಾಜಕೀಯ (Karnataka Elections) ಮಾಡಿದ ವ್ಯಕ್ತಿಯೊಬ್ಬರು ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುತ್ತಿಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಮತ್ತೆ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದು ಸಾಧ್ಯಾನ? ಪೊಲೀಸ್ ಇಲಾಖೆಯಲ್ಲಿ ಇದಕ್ಕೆಲ್ಲ ಅವಕಾಶ ಇರುತ್ತದಾ ಎಂದು ಎಲ್ಲರೂ ಹುಬ್ಬೇರಿಸುವಂತಾಗಿದೆ!
ಕೋಲಾರದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಇನ್ಸ್‌ಪೆಕ್ಟರ್ ಅಗಿದ್ದ ದೇವೇಂದ್ರಪ್ಪ ಅವರೇ ಈ ರೀತಿ ರಾಜಕೀಯಕ್ಕೆ ಬಂದು ಈಗ ಕರ್ತವ್ಯಕ್ಕೆ ಮರಳಿದವರು. ಅವರು ಐದು ವರ್ಷದ ಹಿಂದೆ ರಾಜಕೀಯ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮುಂದೆ ಪೂರ್ಣ ಪ್ರಮಾಣದಲ್ಲಿ ರಾಜಕೀಯವನ್ನೇ ಮಾಡಿದ್ದರು. ಆದರೆ, ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ರಾಜಕೀಯ ಬಿಟ್ಟು ಮರಳಿ ಕರ್ತವ್ಯಕ್ಕೆ ಸೇರಿದ್ದಾರೆ. ಹೀಗೆಲ್ಲ ಮನಸ್ಸು ಬಂದಾಗ ಬಿಡುವುದು ಬೇಕು ಅಂದಾಗ ಹುದ್ದೆಯನ್ನು ಸ್ವೀಕರಿಸಲು ಅವಕಾಶವಿದೆಯೇ ಎನ್ನುವುದು ಕುತೂಹಲಕಾರಿಯಾಗಿದೆ.
ದೇವೇಂದ್ರಪ್ಪ ಅವರಿಗೆ ರಾಜಕೀಯದಲ್ಲಿ ವಿಪರೀತ ಆಸಕ್ತಿ ಇದ್ದುದರಿಂದ 2023ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವ ಸಿದ್ಧತೆಗಾಗಿ ಐದು ವರ್ಷದ ಹಿಂದೆಯೇ ಸರ್ಕಲ್ ಇನ್ಸ್‌ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದರು.
ದೇವೇಂದ್ರಪ್ಪ ಅವರು ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ರಾಜೀನಾಮೆ ಕೊಟ್ಟಿದ್ದರು. ಆದರೆ, ಆದರೆ, ಅಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಾದಾಗ ಅವರು ವರ್ಷದ ಹಿಂದಷ್ಟೇ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.
ಈ ನಡುವೆ, ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ದೇವೇಂದ್ರಪ್ಪ ಅವರು ಎಲ್ಲರ ಜತೆಗೂ ಮಾತುಕತೆ ನಡೆಸಿದ್ದರು. ಆದರೆ, ಕಾಂಗ್ರೆಸ್ ಕೂಡಾ ಅವರಿಗೆ ಕೈಕೊಟ್ಟಿದೆ. ಇದೀಗ ಅವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಕರ್ತವ್ಯಕ್ಕೆ ತೆರಳಿದ್ದಾರೆ.
ದೇವೇಂದ್ರ ಅವರು ಈಗ ಹೊಸದಾಗಿ ಕರ್ತವ್ಯಕ್ಕೆ ಹಾಜರಾಗಿರುವುದು ಯಾದಗಿರಿ ಜಿಲ್ಲೆಯಲ್ಲಿ. ಯಾದಗಿರಿ ಡಿ.ಎಸ್.ಬಿ ಠಾಣೆಯ ಸಿಪಿಐ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ದೇವೇಂದ್ರಪ್ಪ.
ದೇವೇಂದ್ರಪ್ಪ ಅವರು ಐದು ವರ್ಷದ ಬಳಿಕ ಹೇಗೆ ಪೊಲೀಸ್ ಇಲಾಖೆಗೆ ವಾಪಸ್ ಆದರು ಎನ್ನುವುದು ಜನರ ಪ್ರಶ್ನೆ. ಐದು ವರ್ಷ ರಾಜರಾಕಣ ಮಾಡಿ, ಪುನಃ ಪೊಲೀಸ್ ಇಲಾಖೆಗೆ ಸೇರಬಹುದಾ ಎಂದು ಜನರು ತಲೆಕೆಡಿಸಿಕೊಂಡಿದ್ದಾರೆ. ದೇವೇಂದ್ರಪ್ಪ ಅವರು ಐದು ವರ್ಷ ಕಾಲ ರಜೆಯಲ್ಲಿದ್ದರಾ ಎನ್ನುವುದು ಇನ್ನೊಂದು ಪ್ರಶ್ನೆ. ಕೆಲವು ಇಲಾಖೆಗಳಲ್ಲಿ ಸೂಕ್ತ ಕಾರಣ ನೀಡಿದರೆ ಸುದೀರ್ಘ ಕಾಲ ವೇತನರಹಿತ ರಜೆಯ ಅವಕಾಶವೂ ಇರುತ್ತದೆ. ಅದನ್ನು ದೇವೇಂದ್ರಪ್ಪ ಅವರು ಬಳಸಿಕೊಂಡಿರುವ ಸಾಧ್ಯತೆ ಇದೆ.
ಇದನ್ನೂ ಓದಿ : Karnataka Election 2023: ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ನಾಮಪತ್ರ ಸಲ್ಲಿಕೆ; ಊರ ಹಬ್ಬದಂತೆ ಸಂಭ್ರಮಿಸಿದ ಜನ