ಮೈಸೂರು: ವೇಶ್ಯಾವಾಟಿಕೆ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆ ಆರೋಪದಲ್ಲಿ ಬಂಧನವಾಗಿರುವ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ, ಸದ್ಯ ಮೈಸೂರಿನ ಜೈಲಿನಲ್ಲಿದ್ದಾನೆ. ಆದರೆ, ಈತನ ಕಿರಿಕಿರಿಗೆ ಅಧಿಕಾರಿಗಳೇ ಸುಸ್ತಾಗಿದ್ದು, ಆತನನ್ನು (Santro Ravi) ಮೈಸೂರು ಜೈಲಿನಿಂದ ಬೆಂಗಳೂರಿನಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ನ್ಯಾಯಾಧೀಶರಿಗೆ ಪತ್ರ ಬರೆದಿರುವುದು ಕಂಡುಬಂದಿದೆ.
ಜೈಲಿನಲ್ಲೂ ತನ್ನ ದರ್ಪ ಮೆರೆಯುತ್ತಿರುವ ಸ್ಯಾಂಟ್ರೋ ರವಿ, ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸಿ ಬಾಯಿಗೆ ಬಂದ ಹಾಗೆ ಬೈಯ್ಯುತ್ತಾನೆ ಎನ್ನಲಾಗಿದೆ. ಜೈಲಿನ ನಿಯಮಗಳನ್ನು ಪಾಲಿಸದೆ ಸತಾಯಿಸುವ ಈತ, ಸಹ ಕೈದಿಗಳ ಜತೆಯೂ ಗಲಾಟೆ ಮಾಡಿಕೊಳ್ಳುತ್ತಿದ್ದಾನೆ. ಹೀಗಾಗಿ ಏಪ್ರಿಲ್ 13 ರಂದೇ ಸ್ಯಾಂಟ್ರೋ ರವಿಯನ್ನು ಸ್ಥಳಾಂತರ ಮಾಡಲು ಕೋರಿ, ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.
ಏಪ್ರಿಲ್ 5 ರಂದು ಸ್ಯಾಂಟ್ರೋ ರವಿಯನ್ನು ಮೈಸೂರು ನ್ಯಾಯಾಲಯಕ್ಕೆ ಕರೆದೊಯ್ದಿದ್ದಾಗ ಕೈದಿಯೊಬ್ಬರ ತಾಯಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇನ್ನು ಸೆಲ್ಗೆ ಬೀಗ ಹಾಕುವಾಗ ಮತ್ತು ಕೊಠಡಿ ತಪಾಸಣೆ ಮಾಡುವ ವೇಳೆ ಸಿಬ್ಬಂದಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾನೆ ಎನ್ನಲಾಗಿದೆ. ಇನ್ನು ಸ್ಯಾಂಟ್ರೋ ರವಿ ಕೊಠಡಿಗೆ ತೆರಳುವ ಪೊಲೀಸರು ತಮ್ಮ ಶೂಗಳನ್ನು ಹೊರಗಡೆ ಬಿಟ್ಟು ಬರಬೇಕು. ನೀವು ಜುಜುಬಿ ವೀಕ್ಷಕರಷ್ಟೇ ಎಂದು ಬಯ್ಯುತ್ತಾನಂತೆ. ಸ್ಯಾಂಟ್ರೋ ರವಿಯ ಹೈಡ್ರಾಮಗಳು ಸಿಬ್ಬಂದಿಯ ಬಾಡಿವೋರ್ನ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದೆ.
ಇದನ್ನೂ ಓದಿ | Special 26: ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿ ಮನೆಯಲ್ಲಿ 36 ಲಕ್ಷ ರೂ. ದರೋಡೆ
ನನಗೆ ನಿಮ್ಮ ಮೇಲಾಧಿಕಾರಿಗಳು ಗೊತ್ತಿದ್ದಾರೆ. ನಿಮ್ಮನ್ನು ವರ್ಗಾವಣೆ ಮಾಡಿಸಿ ಬಿಡುತ್ತೇನೆಂದು ಅಧಿಕಾರಿಗಳಿಗೆ ಧಮ್ಕಿ ಹಾಕಿ ಸ್ಯಾಂಟ್ರೋ ಗಲಾಟೆ ಮಾಡಿದ್ದಾನೆ. ಈತನ ವರ್ತನೆಯಿಂದ ಬೇಸತ್ತಿರುವ ಅಧಿಕಾರಿಗಳು, ಆತನನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ನ್ಯಾಯಾಧೀಶರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.