ಬೆಂಗಳೂರು: ನಗರದ ರೌಡಿಗಳ ಮನೆ ಮೇಲೆ ಪೊಲೀಸರು ಗುರುವಾರ ಬೆಳಗ್ಗೆ ದಾಳಿ (Police Raid) ನಡೆಸಿದ್ದು, ಈ ವೇಳೆ ಮಚ್ಚು, ಲಾಂಗು ಸೇರಿದಂತೆ ಹಲವು ಮಾರಕಾಸ್ತ್ರಗಳು ಪತ್ತೆಯಾಗಿವೆ. ಈ ಬಾರಿಯ ವಿಧಾನಸಭಾ ಚುನಾವಣೆ ಜಿದ್ದಾಜಿದ್ದಿ ಇರುವ ಕಾರಣ ಸಾಕಷ್ಟು ಬಿಸಿಬಿಸಿ ವಾತಾವರಣವಿದೆ. ಮುಖ್ಯವಾಗಿ ಎಲೆಕ್ಷನ್ ಬಂದಾಗ ಒಬ್ಬೊಬ್ಬನೇ ರೌಡಿಶೀಟರ್ಗಳು ತಮ್ಮ ಪ್ರಭಾವವನ್ನು ಬೀರಲು ಅಪರಾಧ ಕೃತ್ಯಗಳಲ್ಲಿ ಆ್ಯಕ್ಟಿವ್ ಆಗುತ್ತಾರೆ. ಹೀಗಾಗಿ ಸಮಾಜಘಾತಕರಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.
ದಕ್ಷಿಣ ಹಾಗೂ ಪಶ್ಚಿಮ ವಿಭಾಗದ ಪೊಲೀಸರು ಗುರುವಾರ ಬೆಳಗಿನ ಜಾವವೇ ಗಾಢ ನಿದ್ದೆಯಲ್ಲಿದ್ದ ರೌಡಿಗಳ ಮನೆ ಬಾಗಿಲು ತಟ್ಟಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರ ನೇತೃತ್ವದಲ್ಲಿ ಒಟ್ಟು 80ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಕೆಲ ರೌಡಿಶೀಟರ್‌ಗಳ ಮನೆಯ ರೂಮಿನೊಳಗೆ ಚಾಕು, ಮಚ್ಚು, ವೆಪನ್ಗಳು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಆರ್ಮ್ಸ್ ಆ್ಯಕ್ಟ್‌ನಡಿ ಅವರನ್ನು ಬಂಧನ ಕೂಡ ಮಾಡಲಾಗಿದೆ.
ದಕ್ಷಿಣ ವಿಭಾಗದಲ್ಲೂ ಅನೇಕ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿತ್ತು. 20ಕ್ಕೂ ಹೆಚ್ಚು ಜನರನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಹಾಗೂ ಕಾನೂನು ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿರುವ ಕಾರಣದಿಂದಾಗಿ ಬಂಧನ ಮಾಡಲಾಗಿದೆ. ಈ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದ ಸರಗಳ್ಳ ಇಮ್ರಾನ್ ಎಂಬಾತ ಸೇರಿದಂತೆ ನ್ಯಾಯಾಲಯಕ್ಕೆ ಹಾಜರಾಗದ ವ್ಯಕ್ತಿಗಳೂ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: Assault Case: ಚೆಕ್‌ಪೋಸ್ಟ್‌ನಲ್ಲಿ ಕಾರು ತಡೆದ ಪೊಲೀಸರ ಮೇಲೆ ಮಾಜಿ ಎಂಎಲ್‌ಸಿ ಸಹೋದರನ ದರ್ಪ, ಹಲ್ಲೆ; ಆರೋಪಿ ಸೆರೆ
ನೂರಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಬನಶಂಕರಿ ರೌಡಿಶೀಟರ್ ಮನೆಯಲ್ಲಿ ಮಾರಕಾಸ್ತ್ರ ಪತ್ತೆಯಾಗಿದ್ದು, ಆತನ ಮೇಲೆಯೂ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧನ ಮಾಡಲಾಗಿದೆ. ನಟೋರಿಯಸ್ ಎನಿಸಿಕೊಂಡಿರುವ ರೌಡಿಗಳು ಕೆಲವರು ಜೈಲಿನಲ್ಲಿದ್ದರೆ, ಇನ್ನುಳಿದವರನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ. ಮತ್ತೊಂದಿಷ್ಟು ರೌಡಿಶೀಟರ್‌ಗಳಿದ್ದು, ಅವರನ್ನು ಗಡಿಪಾರು ಮಾಡಲು ನಗರ ಪೊಲೀಸರು ಸಿದ್ಧತೆ ನಡೆಸಿದ್ದಾರೆ.