Site icon Vistara News

Jain muni murder : ಜೈನಮುನಿಗಳ ಪಾದಯಾತ್ರೆಗೆ ಪೊಲೀಸ್‌ ಭದ್ರತೆ: ಡಾ. ಜಿ. ಪರಮೇಶ್ವರ

Gunadhara nandi maharaj kamkumar nandi and dr g parameshwar

ಹುಬ್ಬಳ್ಳಿ: ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ (Jain muni Murder) ಅವರ ಹತ್ಯೆ ಸಂಬಂಧ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಯಾವೆಲ್ಲ ತನಿಖೆಯಾಗಬೇಕೋ ಅದೆಲ್ಲವೂ ಆಗುತ್ತಿದೆ. ಜೈನಮುನಿ ಗುಣಧರನಂದಿ ಮಹಾರಾಜ್ ನಾಲ್ಕು ಬೇಡಿಕೆ ಇಟ್ಟಿದ್ದು, ಎಲ್ಲವನ್ನೂ ಈಡೇರಿಸುವ ಪ್ರಯತ್ನ ಮಾಡಲಾಗುವುದು. ಜೈನಮುನಿಗಳ ಪಾದಯಾತ್ರೆಗೆ ರಾಜ್ಯ ಸರ್ಕಾರದಿಂದ ಸೂಕ್ತ ಭದ್ರತೆ ಕಲ್ಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ಜೈನಮುನಿ ಗುಣಧರನಂದಿ ಮಹಾರಾಜ್ ಅವರನ್ನು ವರೂರಿನ ಜೈನಮಠದಲ್ಲಿ ಭೇಟಿ ಮಾಡಿದ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ, ಸ್ವಾಮೀಜಿಗಳು ನನ್ನ ಮುಂದೆ ನಾಲ್ಕು ಬೇಡಿಕೆಗಳನ್ನು ಇಟ್ಟಿದ್ದಾರೆ. ಜೈನ‌ಮುನಿಗಳ ಪಾದಯಾತ್ರೆ ವೇಳೆ ರಕ್ಷಣೆ ನೀಡುವುದರ ಕುರಿತು ಬೇಡಿಕೆ ಇಟ್ಟಿದ್ದಾರೆ. ತಮ್ಮ ಪಾದಯಾತ್ರೆ ಕುರಿತು ಲಿಖಿತವಾಗಿ ನಮಗೆ ತಿಳಿಸಿದ ಕೂಡಲೇ ಆಯಾ ಜಿಲ್ಲೆಗಳಲ್ಲಿ ನಮ್ಮ ಇಲಾಖೆಯಿಂದ ಭದ್ರತೆ ಒದಗಿಸಲಾಗುವುದು. ಪಾದಯಾತ್ರೆ ಸಂದರ್ಭದಲ್ಲಿ ಆಯಾ ಜಿಲ್ಲೆಗಳಲ್ಲಿ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ಆಯಾ ಜಿಲ್ಲೆ ವ್ಯಾಪ್ತಿಯಲ್ಲಿ‌ ಶಾಲಾ ಕಾಲೇಜುಗಳಲ್ಲಿ ಸೂಕ್ತ ಆಶ್ರಯ ಒದಗಿಸುವಂತೆ ಶಿಕ್ಷಣ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಕ್ರಮ‌ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜೈನ ಮಂಡಳಿ ಕುರಿತು ಸಿಎಂ ಗಮನಕ್ಕೆ ತರುವೆ

ಜೈನ‌ ಸಮುದಾಯದ ಮಂಡಳಿ ಕುರಿತು ಸಿಎಂ ಗಮನಕ್ಕೆ ತರುತ್ತೇನೆ. ಬಜೆಟ್‌ಗಿಂತಲೂ ಮುಂಚೆಯಾಗಿದ್ದರೆ ಜೈನ‌ ಮಂಡಳಿಗೆ ಹಣ ಮೀಸಲಿಡುವ ಕೆಲಸಗಳಾಗುತ್ತಿತ್ತು. ಈಗ ಈ ಬೇಡಿಕೆಗಳ ಕುರಿತು ಸಿಎಂ ಜತೆ ಚರ್ಚಿಸಿ ಸೂಕ್ತ ಕ್ರಮ‌ ಕೈಗೊಳ್ಳಲಾಗುವುದು. ಹತ್ಯೆ ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮ‌ಕೈಗೊಳ್ಳುತ್ತೇವೆ. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ‌ ವಹಿಸುತ್ತೇವೆ. ಕರ್ನಾಟಕ ಶಾಂತಿಯ ತೋಟ ಎಂಬಂತೆ ನಾವು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ಗುಣಧರನಂದಿ ಸ್ವಾಮೀಜಿ ಆಮರಣಾಂತ ಉಪವಾಸ ಕೈಗೊಂಡಿರುವುದು ಗಮನಕ್ಕೆ ಬಂತು. ಕೂಡಲೇ ನಾನು ಸ್ವಾಮೀಜಿಯವರಿಗೆ ಕರೆ ಮಾಡಿ ವಿನಂತಿ ಮಾಡಿಕೊಂಡಿದ್ದೆ. ನಾವು ಬಹಳ ಪ್ರಾಮಾಣಿಕವಾಗಿ ತನಿಖೆ ಕೈಗೊಂಡಿರುವುದಾಗಿ ಕೂಡ ಹೇಳಿದ್ದೆ. ನಾನು ಸಂಪೂರ್ಣ ಭರವಸೆ ನೀಡಿದ ನಂತರ ಸ್ವಾಮೀಜಿಗಳು ಉಪವಾಸವನ್ನು ಮೊಟಕುಗೊಳಿಸಿದ್ದಾರೆ. ಸ್ವಾಮೀಜಿಯವರ ಈ‌ ನಿರ್ಧಾರಕ್ಕೆ ನಾನು ಅಭಾರಿಯಾಗಿದ್ದೇನೆ. ಎಡಿಜಿಪಿ ಸಹ ಚಿಕ್ಕೋಡಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನ ನನಗೆ ತಿಳಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ಕಾಮಕುಮಾರ ಸ್ವಾಮೀಜಿ ಅವರ ಹತ್ಯೆಯು ಯಾರ ವೈಫಲ್ಯದಿಂದ ಆಗಿಲ್ಲ. ಆದರೆ, ಇಂತಹ ಘಟನೆಗಳು ನಡೆಯಲಾರದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸುವುದು ಮುಖ್ಯ ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ಇದನ್ನೂ ಓದಿ: Jain Muni Murder : ಕಾಮಕುಮಾರ ನಂದಿ ಮಹಾರಾಜ್ ಕೊಲೆಗೆ ರಾಜ್ಯಾದ್ಯಂತ ಜೈನರ ಪ್ರತಿಭಟನೆ

ವರೂರಿಗೆ ಎಡಿಜಿಪಿ ಹಿತೇಂದ್ರ ಭೇಟಿ

ಹುಬ್ಬಳ್ಳಿಯ ವರೂರಿಗೆ ಎಡಿಜಿಪಿ ಹಿತೇಂದ್ರ ಭೇಟಿ ನೀಡಿ ಜೈನಮುನಿ ಗುಣಧರನಂದಿ ಮಹರಾಜ್‌ ಜತೆ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಹತ್ಯೆಯ ತನಿಖೆ ಸೇರಿದಂತೆ ಹಲವು ಆಯಾಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಪೊಲೀಸ್‌ ಭದ್ರತೆ ನೀಡುವ ಕುರಿತೂ ಚರ್ಚೆಯಾಗಿದೆ ಎನ್ನಲಾಗಿದೆ.

Exit mobile version