Site icon Vistara News

Actor Darshan: ದರ್ಶನ್‌ ಮನೆಯಲ್ಲಿ 37 ಲಕ್ಷ ರೂ. ಜಪ್ತಿ ಮಾಡಿದ ಪೊಲೀಸರು; ಸ್ಫೋಟಕ ಮಾಹಿತಿ ಬಹಿರಂಗ

Actor Darshan

Police Seized 37.40 Lakh Rupees At Actor Darshan's Home; Court Informed

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested) ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ಎರಡು ದಿನ ಪೊಲೀಸ್‌ ಕಸ್ಟಡಿಗೆ ವಹಿಸಿದೆ. ಇನ್ನು ಪ್ರಕರಣದಲ್ಲಿ ಎ1 ಆಗಿರುವ ಪವಿತ್ರಾ ಗೌಡ ಸೇರಿ ಒಟ್ಟು 11 ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನ್ಯಾಯಾಲಯಕ್ಕೆ ಪೊಲೀಸರು ಎರಡು ರಿಮ್ಯಾಂಡ್‌ ಅರ್ಜಿಗಳನ್ನು ಸಲ್ಲಿಸಿದ ಕಾರಣ ನ್ಯಾಯಾಲಯವು ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ಹಾಗೂ ನ್ಯಾಯಾಂಗ ಬಂಧನಕ್ಕೆ ವಹಿಸಿದೆ. ಇದರ ಬೆನ್ನಲ್ಲೇ, ನಟ ದರ್ಶನ್‌ (Actor Darshan) ಮನೆಯಲ್ಲಿ ಬುಧವಾರ (ಜೂನ್‌ 19) ಪೊಲೀಸರು 37.40 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಹೌದು, ಪೊಲೀಸರೇ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್‌ ಅರ್ಜಿಯಲ್ಲಿ ಹಣ ವಶಪಡಿಸಿಕೊಂಡಿರುವ ಕುರಿತು ಮಾಹಿತಿ ನೀಡಿದ್ದಾರೆ. “ಜೂನ್‌ 19ರಂದು ಎ2 ಆರೋಪಿಯ ಮನೆಯಿಂದ 37.40 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ, ಆರೋಪಿಯು ತನ್ನ ಹೆಂಡತಿಗೆ ನೀಡಿದ್ದ 3 ಲಕ್ಷ ರೂಪಾಯಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಹಾಗಾಗಿ, ವಶಪಡಿಸಿಕೊಂಡಿರುವ ಹಣದ ಮೂಲದ ಬಗ್ಗೆ ಆರೋಪಿಯಿಂದ ಮಾಹಿತಿ ಪಡೆದು, ತನಿಖೆ ಮಾಡಬೇಕಿದೆ” ಎಂಬುದಾಗಿ ಪೊಲೀಸರು ಉಲ್ಲೇಖಿಸಿದ್ದಾರೆ.

ರಿಮ್ಯಾಂಡ್‌ ಅರ್ಜಿಯಲ್ಲಿರುವ ಅಂಶಗಳು

ಮೂಲಗಳ ಪ್ರಕಾರ ದರ್ಶನ್‌ ನಿವಾಸದ ಬೆಡ್‌ರೂಮ್‌ನ ಕಬೋಡ್‌ನಲ್ಲಿ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬ್ಯಾಗ್‌ನಲ್ಲಿ ಇಟ್ಟಿದ್ದ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿಜಯಲಕ್ಷ್ಮೀ ಮನೆಯಲ್ಲಿ 3 ಲಕ್ಷ ರೂಪಾಯಿಯನ್ನೂ ವಶಪಡಿಸಿಕೊಂಡಿದ್ದಾರೆ. ಅಲ್ಲಿಗೆ, ಪ್ರಕರಣದಲ್ಲಿ ಪೊಲೀಸರು ಇದುವರೆಗೆ 70.40 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದಂತಾಗಿದೆ. ಜಪ್ತಿಯಾದ ಹಣದ ಕುರಿತು ಕೂಡ ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿ, ದರ್ಶನ್‌ ಅವರನ್ನು ಕಸ್ಟಡಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಪೊಲೀಸರ ಪರವಾಗಿ ಎಸ್‌ಪಿಪಿ ಪ್ರಸನ್ನಕುಮಾರ್‌ ವಾದ ಮಂಡಿಸಿದರು. “ಕೊಲೆ ಪ್ರಕರಣದ ತನಿಖೆ ವೇಳೆ ಹಲವು ಮಾಹಿತಿ ಲಭ್ಯವಾಗಿದೆ. ಪ್ರಕರಣದ ಕುರಿತು ಆರೋಪಿಗಳ ವಿಚಾರಣೆಯ ಅಗತ್ಯವಿದೆ. ಹಾಗಾಗಿ, ನ್ಯಾಯಾಲಯವು ಇನ್ನೂ ನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ ನೀಡಬೇಕು” ಎಂಬುದಾಗಿ ಮನವಿ ಮಾಡಿದರು. ಇದಕ್ಕೆ ದರ್ಶನ್‌ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. “ಬಹುತೇಕ ವಿಚಾರಣೆ ಮುಗಿದಿದೆ. ಹಾಗಾಗಿ, ಪೊಲೀಸ್‌ ಕಸ್ಟಡಿಗೆ ನೀಡುವ ಅಗತ್ಯವಿಲ್ಲ” ಎಂದರು. ಆದರೆ, “ರೇಣುಕಾಸ್ವಾಮಿ ಮೊಬೈಲ್‌ ರಿಕವರಿ ಆಗಿಲ್ಲ. ಅದನ್ನು ಪತ್ತೆ ಹಚ್ಚಬೇಕಿದೆ. ಪವಿತ್ರಾ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಹಾಗೂ ದರ್ಶನ್‌ ಸೇರಿ ಆರು ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಬೇಕು” ಎಂದು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿ ಸೂಚಿಸಿದರು. ದರ್ಶನ್, ವಿನಯ್, ಪ್ರದೋಷ್ ಹಾಗೂ ಧನರಾಜ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಿದರು.

ಪವಿತ್ರಾ ಗೌಡ ಸೇರಿ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಇವರನ್ನು ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಮಾಡಲಾಗುತ್ತದೆ. ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ , ರವಿ ಕಾರ್ತಿಕ್‌ ಜೈಲುಪಾಲಾಗಲಿದ್ದಾರೆ.

ಇದನ್ನೂ ಓದಿ: Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Exit mobile version