ಮಂಡ್ಯ: ಜಾಮಿಯಾ ಮಸೀದಿ ವಿವಾದ ಸಂಬಂಧಿಸಿ ನಿಷೇದಾಜ್ಞೆ ನಡುವೆಯೂ ಶ್ರೀರಂಗಪಟ್ಟಣ ಚಲೋ ಮಾಡಿಯೇ ತೀರಲು ವಿಎಚ್‌ಪಿ ಮುಖಂಡರು ನಿರ್ಧರಿಸಿದ್ದಾರೆ. ಶನಿವಾರ ಶ್ರೀರಂಗಪಟ್ಟಣದ ಕುವೆಂಪು ಪ್ರತಿಮೆಯಿಂದ ಜಾಮಿಯಾ ಮಸೀದಿವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 144 ಸೆಕ್ಷನ್ ಜಾರಿ ಹಿನ್ನಲೆ, ಒಂದೆಡೆ ಹಿಂದೂ ಕಾರ್ಯಕರ್ತರು ಸೇರಿದರೆ ಬಂಧಿಸುವ ಸಾಧ್ಯತೆಯಿದ್ದು, ಪ್ರತಿಭಟನೆಗೆ ಮುಂದಾದ್ರೆ ಎಸ್ಪಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಬೆಳಗ್ಗೆ 10.30ಕ್ಕೆ ಪ್ರತಿಭಟನೆ ಮಾಡಲು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಇನ್ನಿತರ ಹಿಂದೂಪರ ಸಂಘಟನೆಗಳು ನಿರ್ಧರಿಸಿದ್ದು, ಕುವೆಂಪು ಪ್ರತಿಮೆ ಬಳಿ ಕಾರ್ಯಕರ್ತರು ಜಮಾಯಿಸಿ ಹೋರಾಟಕ್ಕೆ ಪ್ಲಾನ್ ರೂಪಿಸಲಾಗುವುದು. ಅಲ್ಲಿಂದ ಜಾಮಿಯಾ ಮಸೀದಿವರೆಗೆ ಪ್ರತಿಭಟನಾ ಮೆರವಣಿಗೆ ತೆರಳಲಿದೆ ಎಂದು ಹಿಂದೂ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
ಹಿಂದೂಪರ ಸಂಘಟನೆಗಳು ಶನಿವಾರ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೀಗಾಗಿ ಶುಕ್ರವಾರ ತಡರಾತ್ರಿಯೇ ಜಾಮಿಯಾ ಮಸೀದಿ ಬಳಿ ಐಜಿಪಿ ಪ್ರವೀಣ್ ಮಧುಕರ್ ಪವರ್ ಭೇಟಿ ನೀಡಿ ಭದ್ರತೆ ಪರಿಶೀಲಿಸಿ, ಮಂಡ್ಯ ಎಸ್ಪಿ ಎನ್. ಯತೀಶ್ ಅವರಿಂದ ಭದ್ರತೆ ಮಾಹಿತಿಯನ್ನು ಪಡೆದಿದ್ದಾರೆ.
ಈಗಾಗಲೇ ಶುಕ್ರವಾರ ಸಂಜೆಯಿಂದ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದ್ದು, ಯಾವುದೇ ಪ್ರತಿಭಟನೆ, ಗಲಭೆಗಳು ನಡೆಯದಂತೆ ಸರ್ಪಗಾವಲು ಏರ್ಪಡಿಸಲಾಗಿದೆ. ಎಸ್ಪಿ, ಇಬ್ಬರು ಡಿವೈಎಸ್ಪಿ, 5 ಸಿಪಿಐ, 10 ಪಿಎಸ್ಐ ಸೇರಿ 300 ಮಂದಿ ಪೊಲೀಸ್ ಪೇದೆ, 2 ಕೆಎಸ್ಆರ್‌ಪಿಪಿ, 4 ಡಿಆರ್ ತುಕಡಿ ನಿಯೋಜಿಸಲಾಗಿದೆ.
ಜಾಮಿಯಾ ಮಸಿದಿ ಇರುವ ಸ್ಥಳ ಮೂಲದಲ್ಲಿ ಆಂಜನೇಯಸ್ವಾಮಿ ದೇಗುಲವಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಬೇಕು. ಅಲ್ಲದೆ ಮಸೀದಿಯಲ್ಲಿ ಮದರಸಾ ನಡೆಸಲಾಗುತ್ತಿದ್ದು, ಅಲ್ಲಿನ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು ಎಂಬುದು ಹಿಂದೂಪರ ಸಂಘಟನೆಗಳ ಒತ್ತಾಯವಾಗಿದೆ.
ಇದನ್ನೂ ಓದಿ | ವಿಶ್ವದ TOP 10 ಶ್ರೀಮಂತರ ಪಟ್ಟಿ ಔಟ್, ಇದರಲ್ಲಿದ್ದಾರೆ ಇಬ್ಬರು ಭಾರತೀಯರು!