ಬೆಂಗಳೂರು: ತರೀಕೆರೆಯಲ್ಲಿ ಗೋಪಿಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಕಚೇರಿಯೆದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ವಿಷ ಸೇವನೆಗೆ ಮುಂದಾದ ಘಟನೆ ನಡೆದಿದೆ.
ಈಗಾಗಲೆ ಮೊದಲ ಪಟ್ಟಿಯನ್ನು ಕೆಪಿಸಿಸಿ ಬಿಡುಗಡೆ ಮಾಡಿದ್ದು, ಕೆಲವೆಡೆ ಬಂಡಾಯದ ಬಿಸಿ ತಟ್ಟಿದೆ. ಎರಡನೇ ಪಟ್ಟಿಯಲ್ಲಿ ಹೆಸರು ಖಚಿತವಾಗಿಲ್ಲ ಎಂದು ದೃಢಪಟ್ಟ ಹಾಗೂ ಅನುಮಾನವಿರುವ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದಾಸರಹಳ್ಳಿ, ಮೊಳಕಾಲ್ಮೂರು, ತರಿಕೇರೆ, ಚಿಕ್ಕಮಗಳೂರು, ಹರಿಹರ ಸೇರಿದಂತೆ 10 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯ ಬಿಸಿ ತಟ್ಟಿದೆ.
ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ರಸ್ತೆಗೆ ನುಗ್ಗಲು ಯತ್ನಿಸಿದರು. ಈ ಸಮಯದಲ್ಲಿ ಪ್ರತಿಭಟನಾಕಾರರು ವಿಷದ ಬಾಟಲಿಯನ್ನು ಹಿಡಿದಿದ್ದರು. ಇದನ್ನು ಗಮನಿಸಿದ ಪೊಲೀಸರು ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.
ಕಚೇರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನೂ ಬಿಡದಂತೆ ಪ್ರತಿಭಟನಾಕಾರರು ಸುತ್ತುವರಿದಿದ್ದಾರೆ. ಇದೇ ವೇಳೆ ಮೊಳಕಾಲ್ಮೂರು ಕಾರ್ಯಕರ್ತರರೂ ಆಗಮಿಸಿದರು.
ಯೋಗೇಶ್ ಬಾಬು ಪರವಾಗಿ ಕಾರ್ಯಕರ್ತರು ಆಗಮಿಸಿದ್ದು, ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಳಕಾಲ್ಮೂರು ಟಿಕೆಟ್ ಆಕಾಂಕ್ಷಿ ಆಗಿರುವ ಯೋಗೇಶ್ ಬಾಬು ಬದಲಿಗೆ ಈಗ ಕಾಂಗ್ರೆಸ್ ನಾಯಕರು ಗೋಪಾಲಕೃಷ್ಣಗೆ ಮಣೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರೀಕೆರೆ ಟಿಕೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ತರೀಕೆರೆ ಟಿಕೆಟ್ ಯಾರಿಗೆ ಅಂತ ಇನ್ನೂ ಫೈನಲ್ ಆಗಿಲ್ಲ. ನಾಳೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ತೀರ್ಮಾನ ಆಗಲಿದೆ. ಹೆಸರುಗಳು ಶಿಫಾರಸು ಆಗಿವೆ ಎಂದಿದ್ದಾರೆ.
ಇದನ್ನೂ ಓದಿ: Karnataka Congress: ಬಿಜೆಪಿ ನಾಯಕರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದನ್ನು ಸಮರ್ಥಿಸಿಕೊಂಡ ಡಿ.ಕೆ. ಶಿವಕುಮಾರ್