ಬೆಂಗಳೂರು: ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ (47) ವಿರುದ್ಧ ಅವರ ಪತ್ನಿಯೇ ದೂರು ದಾಖಲಿಸಿದ್ದರು ಎಂದು ತಿಳಿದುಬಂದಿದೆ. ಪ್ರದೀಪ್ ಅವರ ಪತ್ನಿ ನಮಿತಾ ಎಂಬುವವರು ಕಳೆದ ಮೇ ತಿಂಗಳಲ್ಲಿ ದೂರು ದಾಖಲಿಸಿದ್ದು, ಸದ್ಯ ಪ್ರದೀಪ್ ಅವರ ಫೋನ್ ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
“ಪತಿ ನನಗೆ ಕಿರುಕುಳ ನೀಡುತ್ತಿದ್ದಾನೆ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾನೆ. ಬಂದೂಕಿನಿಂದ ಗುಂಡು ಹಾರಿಸುತ್ತೇನೆ ಎಂಬುದಾಗಿಯೂ ಬೆದರಿಕೆ ಹಾಕಿದ್ದಾನೆ” ಎಂದು ನಮಿತಾ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿದುಬಂದಿದೆ.
ಪೊಲೀಸರು ತನಿಖೆ ಆರಂಭಿಸಿದ್ದು, ಕೊನೆಯದಾಗಿ ಪ್ರದೀಪ್ ಕರೆ ಮಾಡಿದ್ದು ಯಾರಿಗೆ? ಕರೆ ಮಾಡಿದ ವ್ಯಕ್ತಿಗೂ ಪ್ರದೀಪ್‌ಗೂ ಇರುವ ಸಂಬಂಧ ಏನು? ಪ್ರದೀಪ್ ನಡೆಸುತ್ತಿದ್ದ ವ್ಯವಹಾರ, ಬ್ಯಾಂಕ್ ವಹಿವಾಟು ಮಾಹಿತಿ, ಆತ್ಮಹತ್ಯೆಗೆ ಬಳಿಸಿದ ಗನ್ ಯಾರ ಹೆಸರಿನಲ್ಲಿದೆ, ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರು ಬರೆದಿಟ್ಟಿದ್ದು ಯಾಕೆ ಎಂಬುದು ಸೇರಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೆಟ್ಟಿಗೆರೆ ಗ್ರಾಮದ ಬಳಿ ಕಾರಿನಲ್ಲಿ ಪ್ರದೀಪ್ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಕಾರಿನಲ್ಲಿ ಡೆತ್ ನೋಟ್ ಸಿಕ್ಕಿದ್ದು, ಪ್ರಭಾವಿ ರಾಜಕಾರಣಿ, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೆಸರು ಸೇರಿ ಆರು ಜನರ ಹೆಸರು ಬರೆದಿದ್ದಾರೆ. ಪ್ರದೀಪ್ ಶವವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದ್ದು, ಸೋಮವಾರ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Suicide Case | ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು, ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ