ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲೇ ಕಿತ್ತಾಡಿಕೊಂಡಿದ್ದ ಪೊಲೀಸ್ ಅಧಿಕಾರಿಗಳಿಬ್ಬರನ್ನು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಅಮಾನತು (Police Suspended) ಮಾಡಿದ್ದಾರೆ. ವಿಚಾರದ ಬಗ್ಗೆ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ಹಾಗೂ ಹೆಡ್ಕಾನ್ಸ್ಟೇಬಲ್ ಅಂಜನಾಮೂರ್ತಿ ಅಮಾನತುಗೊಂಡವರು.
ಠಾಣೆಯಲ್ಲಿ ಹೊಡೆದಾಡಿಕೊಂಡ ಕುರಿತು ತನಿಖೆ ನಡೆಸಿದಾಗ ಇಬ್ಬರ ತಪ್ಪೂ ಸಾಬೀತಾಗಿತ್ತು. ಹೀಗಾಗಿ ಅವರಿಬ್ಬರನ್ನೂ ಅಮಾನತು ಮಾಡಲು ಡಿಸಿಪಿ ಲೋಕೇಶ್ ಜಗಲಾಸರ್ ಆದೇಶ ಹೊರಡಿಸಿದ್ದಾರೆ. ಇವರಿಬ್ಬರೂ ಜುಲೈ 16ರಂದು ಠಾಣೆಯಲ್ಲಿ ಕರ್ತವ್ಯದ ಅವಧಿಯಲ್ಲಿ ಹೊಡೆದಾಡಿಕೊಂಡ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇದು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿತ್ತು.
ಏನಿದು ಗಲಾಟೆ?
ಪುಟ್ಟೇನಹಳ್ಳಿ ಪೊಲೀಸ್ ಸಿಬ್ಬಂದಿಗಳಾದ ಅವರಿಬ್ಬರೂ ಸಾರ್ವಜನಿಕರ ಮುಂದೆಯೇ ಕಿತ್ತಾಟ ನಡೆಸಿಕೊಂಡಿದ್ದರು. ಈ ವೇಳೆ ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊಂಡಿದ್ದರು. ಹೊರಗಡೆ ಬಂದ್ರೆ ಬೀದಿ ಹೆಣ ಮಾಡ್ತಿನಿ ಎಂದು ಪೊಲೀಸ್ ಠಾಣೆಯಲ್ಲಿಯೇ ಬೆದರಿಕೆ ಹಾಕಿಕೊಂಡಿದ್ದರು. ಈ ಬಗ್ಗೆ ಹೆಡ್ಕಾನಸ್ಟೇಬಲ್ ಅಂಜನಾಮೂರ್ತಿ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ದಾಖಲಾಗಿತ್ತು.
ಹೆಡ್ಕಾನ್ಸ್ಟೇಬಲ್ ನೇತ್ರಾವತಿ ಎಂಬುವರ ಜತೆ ಅತ್ಯಾಚಾರ ಪ್ರಕರಣವೊಂದರ ಕುರಿತು ಮಂಜುನಾಥ್ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬಂದ ಅಂಜನಾಮೂರ್ತಿ ಅವರು ಲೈನ್ ಕಂಪ್ಯೂಟರ್ನಲ್ಲಿ ಟೈಪ್ ಮಾಡಿ ಪುಕ್ಸಟ್ಟೆ ಸಂಬಳ ತಗೋತಿದ್ದೀಯ ಎಂದು ಹೇಳಿದ್ದರು. ಈ ವೇಳೆ ಸಿಟ್ಟಿಗೆದ್ದ ಮಂಜುನಾಥ್, ಬೇರೆಯವರಿಗೆ ಹೆದರಿಸಿದಂತಲ್ಲ. ನೀನೇ ಬಂದು ಇನ್ವೆಷ್ಟಿಗೇಷನ್ ಮಾಡು ಎಂದು ಮರುತ್ತರ ನೀಡಿದ್ದರು.
ಇದನ್ನೂ ಓದಿ: Natasa Stankovic : ಹಾರ್ದಿಕ್ ಪಾಂಡ್ಯಗೆ ಡೈವೋರ್ಸ್ ನೀಡಿದ್ದೇನೆ; ಪತ್ನಿ ನತಾಶಾ ಹೇಳಿಕೆ
ಕೋಪಗೊಂಡ ಅಂಜನಾಮೂರ್ತಿ ಕಾಲೆತ್ತಿ ಒದಿಯಲು ಮುಂದಾಗಿದ್ದರು ಎನ್ನಲಾಗಿದೆ. ಅಲ್ಲದೆ, ಪೆನ್ಷನ್ ಬರದೇ ಇರೋ ಮಾಡ್ತಿನಿ ಎಂದು ಹೇಳಿ ಅವಾಚ್ಯ ಪದಗಳಿಂದ ನಿಂದಿಸಿದ್ದರಂತೆ. ಈ ಬಗ್ಗೆ ಮಂಜುನಾಥ್ ಅವರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ತಮಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಎರಡು ಸಲ ಸ್ಟಂಟ್ ಹಾಕಿದ್ದೇನೆ. ಅಂಜನಾಮೂರ್ತಿಯಿಂದ ತೊಂದರೆ ಆಗುತ್ತಿದೆ ಎಂದು ಬರೆದುಕೊಂಡಿದ್ದರು.