ಬೆಂಗಳೂರು: ತಮಿಳುನಾಡಿಗೆ ನೀರು ಹರಿಸಲು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಕಾವೇರಿ ಕೊಳ್ಳದ (Cauvery Dispute) ಜಿಲ್ಲೆಗಳಾದ ಮಂಡ್ಯ, ಮೈಸೂರಿನಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲೂ ಕನ್ನಡಪರ ಸಂಘಟನೆ, ರೈತ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್‌ಗೆ ಕ್ರಮ ಕೈಗೊಂಡಿದೆ.
ಬೆಂಗಳೂರು ನಗರದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವಂತೆ ಡಿಸಿಪಿಗಳಿಗೆ ಬೆಂಗಳೂರು ನಗರ ಕಮಿಷನರ್ ಬಿ.ದಯಾನಂದ್ ಸೂಚನೆ ನೀಡಿದ್ದಾರೆ. ನಗರದ ಪಶ್ಚಿಮ, ಪೂರ್ವ, ಉತ್ತರ, ದಕ್ಷಿಣ ವಲಯ ಹಾಗೂ ವೈಟ್ ಫೀಲ್ಡ್ ಸೇರಿ ಎಲ್ಲೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ಇದನ್ನೂ ಓದಿ | Cauvery Dispute : ಸುಪ್ರೀಂ ಆದೇಶ ಪಾಲಿಸಿದರೆ ಬರಿದಾಗಲಿದೆ KRS; ಇಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ, ಎಲ್ಲಿಂದ ತರೋದು ನೀರು?
ಕನ್ನಡಪರ ಸಂಘಟನೆ, ರೈತ ಸಂಘಟನೆಗಳ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ, ರಸ್ತೆ ತಡೆ ಹಾಗೂ ತಮಿಳುನಾಡು ಸಾರಿಗೆ ಬಸ್, ಇನ್ನಿತರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳುವಂತೆ ಕಮಿಷನರ್ ಸೂಚನೆ ನೀಡಿದ್ದಾರೆ.
ನಗರದ ತಮಿಳಿಗರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಗಲಾಟೆಗಳು ನಡೆಯುವ ಸಾಧ್ಯತೆ ಇದೆ. ಚಿತ್ರರಂಗದ ನಟರು ಕೂಡ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿರುವುದರಿಂದ ಪ್ರತಿಭಟನೆಗಳು ತೀವ್ರತೆ ಪಡೆಯಬಹುದು. ಅದೇ ರೀತಿ ಗಣೇಶ ವಿಸರ್ಜನಾ ಮೆರವಣಿಗೆಗಳು ನಡೆಯುತ್ತಿರುವುದರಿಂದ ಕಾವೇರಿ ವಿವಾದ ಬೇರೆ ರೀತಿಯ ತಿರುವು ಪಡೆದು ಸಂಘರ್ಷಗಳಿಗೆ ಕಾರಣವಾಗಬಹುದು. ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ | Cauvery Water Dispute: ಕಾವೇರಿಗಾಗಿ ಅಗತ್ಯಬಿದ್ರೆ ರಾಜೀನಾಮೆಗೂ ಸಿದ್ಧ ಎಂದ ಸಂಸದೆ ಸುಮಲತಾ
ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್‌ಗಳಲ್ಲಿ ತಮಿಳು ಭಾಷಾ ಚಿತ್ರಗಳ ಪ್ರದರ್ಶನ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಹಾಗೆಯೇ ತಮಿಳುನಾಡು ಸಂಪರ್ಕಿಸುವ ಹೊಸೂರು ಮುಖ್ಯರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಇನ್ನಿತರ ಕಡೆ ಪ್ರತಿಭಟನೆ, ಧರಣಿಗಳು ಹೆಚ್ಚಾಗಿ ನಡೆಯುವ ಸಾಧ್ಯತೆ ಇರುವುದರಿಂದ ಈ ಭಾಗಗಳಲ್ಲಿ ಹೆಚ್ಚಿನ ಭದ್ರತೆ ಏರ್ಪಡಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.