ಬೆಂಗಳೂರು: ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ಹಿರಿಯ ಪೊಲೀಸ್ ಅಧಿಕಾರಿ ಬಿ. ದಯಾನಂದ ಅವರನ್ನು ರಾಝ್ಯ ಸರ್ಕಾರ ನೇಮಿಸಿದೆ. ವಿವಿಧ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೂತನ ಸರ್ಕಾರ ವರ್ಗಾವಣೆ ಮಾಡಿದೆ.
1994ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ದಯಾನಂದ ಅವರು ಸದ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿಯನ್ನಾಗಿ ನೇಮಿಸಲಾಗಿದೆ.
ಬೆಂಗಳೂರು ಸಂಚಾರ ದಟ್ಟಣೆಯನ್ನು ಸುಧಾರಿಸುವ ಸಲುವಾಗಿ ಎಡಿಜಿಪಿ ಮಟ್ಟದ ಅಧಿಕಾರಿಯಾದ ಡಾ. ಎಂ.ಎ. ಸಲೀಂ ಅವರಿಗೆ ಪದೋನ್ನತಿ ನೀಡಿ ವರ್ಗಾವಣೆ ಮಾಡಲಾಗಿದೆ. ಸಂಚಾರ ವಿಭಾಗ ಎಡಿಜಿಪಿ ಆಗಿದ್ದ ಎಂ.ಎ. ಸಲೀಂ ಅವರನ್ನು ಡಿಜಿಪಿಯಾಗಿ ಪದೋನ್ನತಿ ನೀಡಲಾಗಿದೆ. ಹಾಗೂ ಅವರನ್ನು ಅಪರಾಧ ತನಿಖಾ ಘಟಕ, ವಿಶೇಷ ಘಟಕಗಳು ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿಯಾಗಿ ನೇಮಿಸಲಾಗಿದೆ. ಈ ಸ್ಥಾನದಲ್ಲಿದ್ದ ಕೆ. ವಿ. ಶರತ್ ಚಂದ್ರ ಅವರನ್ನು ಬಿ.ದಯಾನಂದ ಅವರು ನಿರ್ವಹಣೆ ಮಾಡುತ್ತಿದ್ದ ಗುಪ್ತಚರ ಇಲಾಖೆ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ.
ಬಿ. ದಯಾನಂದ ಅವರು ಈ ಹಿಂದೆ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷದ ಆಡಳಿತದಲ್ಲೂ ಉತ್ತಮ ಸ್ಥಾನಗಳನ್ನು ನೀಡಲಾಗಿತ್ತು. ಎಲ್ಲರಿಗೂ ನಂಬಿಕರ್ಹ, ದಕ್ಷ ಅಧಿಕಾರಿ ಎನ್ನಿಸಿಕೊಂಡಿದ್ದಾರೆ. ಗೃಹ ಇಲಾಖೆಗೆ ಸೇರಿದ್ದರೂ ಗುಪ್ತ ಚರ ಇಲಾಖೆಯನ್ನು ಮುಖ್ಯಮಂತ್ರಿ ತಾವೇ ಇಟ್ಟುಕೊಳ್ಳುತ್ತಾರೆ. ಈ ಇಲಾಖೆಗೆ ತಮ್ಮ ಅತ್ಯಂತ ನಂಬಿಕರ್ಹ ಅಧಿಕಾರಿಯನ್ನಷ್ಟೆ ನೇಮಿಸಿಕೊಳ್ಳಲಾಗುತ್ತದೆ. ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿಯವರ ಅವಧಿಯಲ್ಲಿ ಮೂವರು ಸಿಎಂಗಳಿಗೂ ಗುಪ್ತಚರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯನ್ನು ದಯಾನಂದ ಹೊಂದಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟ ಆರ್ಟಿಐ ಕಾರ್ಯಕರ್ತ