ಬೆಂಗಳೂರು: “ಎಷ್ಟೋ ವರ್ಷಗಳಿಂದ ಗಂಡ- ಹೆಂಡತಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಡ್ಯೂಟಿ ಹಾಕಿರುವ (police transfer) ಕಾರಣ ಮಕ್ಕಳಾಗುತ್ತಿಲ್ಲ. ಇದರಿಂದಾಗಿಯೇ ದಾಂಪತ್ಯ ವಿಚ್ಛೇದನಗಳೂ ಆಗಿವೆ. ದಯವಿಟ್ಟು ನಮಗೆ ದಯಾಮರಣ (euthanasia) ಕೊಡಿ…”
ಹೀಗೊಂದು ಮನವಿ ಪತ್ರ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ತಲುಪಿದೆ. ಬರೆದವರು ರಾಜ್ಯ ಪೊಲೀಸ್ ಇಲಾಖೆಯ ನೊಂದ ಸಿಬ್ಬಂದಿಗಳು. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ (police transfer) ಸಿಗದೇ ಇರುವುದರಿಂದ ಹತಾಶರಾಗಿರುವ ಸಿಬ್ಬಂದಿ ಅಂತಿಮವಾಗಿ ಈ ಹಾದಿ ಹಿಡಿದಿದ್ದಾರೆ! ಪತ್ರ ಬರೆದು, ವರ್ಗಾವಣೆ ಮಾಡಿ ಇಲ್ಲವೇ ದಯಾ ಮರಣ ನೀಡಿ ಎಂದು ಕೋರಿದ್ದಾರೆ.
ರಾಜ್ಯದ ಅನೇಕ ಠಾಣೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಈ ಪತ್ರ ಬಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ರವಾನಿಸಲಾಗಿದೆ. ಪತ್ರದ ಪೂರ್ಣ ಒಕ್ಕಣೆ ಹೀಗಿದೆ:
“ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮತ್ತು ಕೆಸಿಎಸ್‌ಆರ್ ನಿಯಮದ ಪ್ರಕಾರ ಪತಿ-ಪತ್ನಿಯರು ಸುಪ್ರೀಂ ಕೋರ್ಟ್ ಆದೇಶ ಮತ್ತು ಕೆಸಿಎಸ್‌ಆರ್ ನಿಯಮದ ಪ್ರಕಾರ ಒಂದೇ ಘಟಕ ಹಾಗೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಯಮ ಇದ್ದರೂ ಕೂಡ ಕಳೆದ 3 ವರ್ಷಗಳಿಂದ ಮಾನ್ಯ ಕರ್ನಾಟಕ ಸರ್ಕಾರವಾಗಲಿ ರಾಜ್ಯದ ಗೃಹ ಸಚಿವರಾಗಲಿ ಪೊಲೀಸ್ ಮುಖ್ಯಸ್ಥರಾಗಲಿ ಯಾವುದೇ ವರ್ಗಾವಣೆ ಮಾಡುತ್ತಿಲ್ಲ. ಈ ವಿಚಾರವಾಗಿ ಸುಮಾರು 3 ವರ್ಷಗಳಿಂದ ಮಾನ್ಯ ಗೃಹ ಸಚಿವರಿಗೆ ಪತಿ-ಪತ್ನಿ ಪ್ರಕರಣದಲ್ಲಿ ಅಂತರ್ ಜಿಲ್ಲಾ ವಗಾವಣೆ ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದು ಈ ವಿಚಾರವಾಗಿ ಶೀಘ್ರದಲ್ಲೇ ವರ್ಗಾವಣೆ ಮಾಡುತ್ತೇವೆ ಅಂತ ಮಾಧ್ಯಮಗಳ ಮುಂದೆ 3 ವರ್ಷಗಳಿಂದ ಹೇಳಿಕೆ ನೀಡಿರುತ್ತಾರೆ ವಿನಃ ಯಾವುದೇ ವರ್ಗಾವಣೆ ಮಾಡುತ್ತಿಲ್ಲ. ನಾವುಗಳು 10ರಿಂದ 15 ವರ್ಷಗಳ ಕಾಲ ತಂದೆ ತಾಯಿ ಹೆಂಡತಿ ಮಕ್ಕಳನ್ನು ಬಿಟ್ಟು ಒಂದು ಕಡೆ ಹೆಂಡತಿ ಒಂದು ಕಡೆ ನೌಕರಿ ಮಾಡುತ್ತಾ ಹೆತ್ತ ಮಕ್ಕಳ ಲಾಲನೆ ಪಾಲನೆ ಮಾಡದೆ ಜನ್ಮ ಕೊಟ್ಟ ಅಪ್ಪ ಅಮ್ಮ ಇವರ ಪೊಷಣೆ ಮಾಡಲಾಗದೆ ಜೀವನ ನಡೆಸುವಂತಾಗಿದೆ.
“ನಮಗೆ ವರ್ಗಾವಣೆ ಆಗದೆ ಇರುವುದಕ್ಕೆ ದಾಂಪತ್ಯದಲ್ಲಿ ಬಿರುಕು ಬಿಟ್ಟು ಎಷ್ಟೋ ಸಂಸಾರಗಳು ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿವೆ. ಕೆಲವು ವಿಚ್ಛೇದನ ಕೊಟ್ಟಾಗಿದೆ. ಇನ್ನು ಕೆಲವರಲ್ಲಿ ಪತಿ- ಪತ್ನಿಯರು ಬೇರೆ ಬೇರೆ ಇರುವುದರಿಂದ ಮದುವೆಯಾಗಿ 5 ವರ್ಷ ಕಳೆದರೂ ಇನ್ನೂ ಕೂಡ ಮಕ್ಕಳು ಆಗುತ್ತಿಲ್ಲ. ನಮ್ಮದು ಶಿಸ್ತಿನ ಇಲಾಖೆ. ಹಾಗಾಗಿ ಬೇರೆ ಇಲಾಖೆಯವರಂತೆ ಪ್ರತಿಭಟನೆ ಮಾಡಲು ಅವಕಾಶವಿರುವುದಿಲ್ಲ. ಬೇರೆ ಇಲಾಖೆಯಲ್ಲಿ ಅಂತರ್ ಜಿಲ್ಲಾ ವರ್ಗಾವಣೆ ನಡೆದಿದೆ. ಆದರೆ ಪೊಲೀಸ್ ಇಲಾಖೆಯಲ್ಲಿ 2021ರಿಂದ ಯಾವುದೇ ವರ್ಗಾವಣೆ
ಆಗಿರುವುದಿಲ್ಲ. ಆದ ಕಾರಣ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ನೆಮ್ಮದಿ ಅನ್ನೋದು ಹಾಳಾಗಿ ಆರೋಗ್ಯದಲ್ಲಿ ತೊಂದರೆ ಉಂಟಾಗಿವೆ. ಆದ ಕಾರಣ ದಯಾಳುಗಳಾದ ತಾವುಗಳು ನಮಗೆ ದಯಾಮರಣ ಕಲ್ಪಿಸಿಕೊಡಬೇಕೆಂದು ನೊಂದ ಮನಸ್ಸಿನಿಂದ ಈ ಮೂಲಕ ಕಳಕಳಿಯಿಂದ ಬೇಡಿಕೊಳ್ಳುತ್ತವೆ.”
ಇದನ್ನೂ ಓದಿ: Viral News : ನಿಜವಾದ ಪೊಲೀಸ್ಗೆ ತಪ್ಪಾಗಿ ಸೆಲ್ಯೂಟ್ ಹೊಡೆದು ಸಿಕ್ಕಿ ಬಿದ್ದ ನಕಲಿ ಪೊಲೀಸ್!