ಸಾಗರ: ಖ್ಯಾತ ಸಾಹಿತಿ ಡಾ.ನಾ ಡಿಸೋಜ ಅವರಿಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಪೊಲೀಸರು ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದರು.
ಸಾಗರ ಪೇಟೆ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಸೀತಾರಾಂ ಅವರು ನೆಹರೂ ನಗರದಲ್ಲಿರುವ ನಾ. ಡಿಸೋಜ ಅವರ ಮನೆಗೆ ಭೇಟಿ ನೀಡಿ ಬೆದರಿಕೆ ಪತ್ರದ ವಿಚಾರವಾಗಿ ಚರ್ಚೆ ನಡೆಸಿದರು. ಆದರೆ, ನಾ. ಡಿಸೋಜ ಅವರು ಈ ಬಗ್ಗೆ ಯಾವುದೇ ದೂರು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ ಸಾಹಿತಿ ಡಿಸೋಜ ಅವರಿಗೆ ಸೂಕ್ತ ಭದ್ರತೆ ನೀಡುವುದಾಗಿ ಇನ್ಸ್‌ಪೆಕ್ಟರ್ ಸೀತಾರಾಂ ಭರವಸೆ ನೀಡಿದ್ದಾರೆ. ಬೆದರಿಕೆ ಪತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದು
ಸಾಗರ ತಾಲೂಕು ಸಾಹಿತ್ಯ ಕಳೆದ ಕಳೆದ ಶುಕ್ರವಾರ ಮತ್ತು ಶನಿವಾರ ನಡೆದಿತ್ತು. ಈ ವೇಳೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ನಾ. ಡಿಸೋಜ ಅವರು ತಮಗೆ ಬಂದಿರುವ ಬೆದರಿಕೆ ಪತ್ರ ಮತ್ತು ಹಾಲಿ ಪರಿಸ್ಥಿತಿಯ ಅವಲೋಕನ ನಡೆಸಿದ್ದರು.
ʻʻನನ್ನ ಸ್ನೇಹಿತರೊಬ್ಬರು ಸಾಹಿತಿಯಾಗಿದ್ದು ಅವರಿಗೆ ʻನಿಮ್ಮನ್ನು ತೆಗೆಯುತ್ತೇವೆʼ ಎಂಬ ಬೆದರಿಕೆ ಪತ್ರ ಬಂದಿದೆ. ಅದರ ಹಿಂದೆಯೇ ನನಗೂ ಎರಡು ಬೆದರಿಕೆ ಪತ್ರ ಬಂದಿದೆ. ಇತ್ತೀಚಿನ ದಿನಮಾನಗಳಲ್ಲಿ ಇಂತಹ ವಿಭಿನ್ನ ಸನ್ನಿವೇಶ ಸೃಷ್ಟಿಯಾಗಿದ್ದು, ಸಾಹಿತಿಗಳು ಅನಿಸಿದ್ದನ್ನು ಬರೆಯಲು ಕಡಿವಾಣ ಹಾಕುವ ಪ್ರಯತ್ನ ನಡೆಸಲಾಗುತ್ತಿದೆʼʼ ಎಂದು ಹೇಳಿದ್ದರು.