ಬೆಂಗಳೂರು: ಕೆ.ಆರ್. ಪುರ ಪೊಲೀಸ್ ಅಧಿಕಾರಿ ನಂದೀಶ್ ಅವರ ಸಾವಿನ ಕುರಿತು ರಾಜಕೀಯ ಹಗ್ಗಜಗ್ಗಾಟ ಮುಂದುವರಿದಿದ್ದು, ಇದು ಸಹಜ ಸಾವು ಎಂದು ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಆದರೆ ಇದು ಭ್ರಷ್ಟಾಚಾರದ ಸಲುವಾಗಿ ಆಗಿರುವ ಸಾವು ಆದ್ಧರಿಂದ ಕೊಲೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ನಂದೀಶ್ ಅವರ ಸಾವು ನಮಗೆ ತಿಳಿದಂತೆ ಅದು ಸಹಜ ಸಾವು. ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಕಾಂಗ್ರೆಸ್ ಕಾಲದಲ್ಲಿ ಎಷ್ಟು ಇಂಥ ಸಮಸ್ಯೆಗಳಾಗಿವೆ? ಗಣಪತಿ ಆತ್ಮಹತ್ಯೆ ಮಾಡಿಕೊಂಡರು; ಡಿವೈಎಸ್ಪಿ ಸ್ವಯಂ ನಿವೃತ್ತಿ ಪಡೆಯುವ ಪರಿಸ್ಥಿತಿ ತಂದಿಟ್ಟಿದ್ದೀರಲ್ಲವೇ? ಅನುಪಮಾ ಶೆಣೈ ಆರೋಪಕ್ಕೆ ಸಚಿವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಾ?
ಕಲ್ಲಪ್ಪ ಬಸಪ್ಪ ಹಂಡಿಭಾಗ್ ಸಾವಾಯಿತು. ಸಚಿವರ ವಿರುದ್ಧ ಆಪಾದನೆ ಮಾಡಿ ಇಷ್ಟೆಲ್ಲ ಪ್ರಕರಣ ನಡೆದರೂ ನೀವೇನು ಮಾಡಿದ್ದೀರಿ ಎಂದರು. ನಂದೀಶ್ ಅವರ ಕುಟುಂಬದವರು ಸರಕಾರದ ಮೇಲೆ ಆರೋಪ ಮಾಡಿ ಹೇಳಿಕೆ ಕೊಟ್ಟಿಲ್ಲ. ನೀವು ರಾಜಕೀಯದ ಬಣ್ಣ ಬೆರೆಸುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಂದೀಶ್ ಅವರು 70-80 ಲಕ್ಷ ರೂ. ಸಾಲ ಮಾಡಿ ಲಂಚ ನೀಡಿದ್ದಾರೆ. ಈ ಹಣವನ್ನು ಯಾರಿಗೆ ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕೋ? ಬೇಡ್ವೋ? ಈ ಹಣ ಮುಖ್ಯಮಂತ್ರಿಗಳಿಗೆ ಹೋಗಿದಿಯಾ? ಗೃಹ ಸಚಿವರಿಗೆ ಹೋಗಿದೆಯಾ? ಅಥವಾ ಸ್ಥಳೀಯ ಶಾಸಕರಿಗೆ ನೀಡಿದ್ದಾರ ಎಂಬುದು ಗೊತ್ತಾಗಬೇಕು ತಾನೆ? ಸಾಲ ಮಾಡಿ ಲಂಚ ನೀಡಿದ್ದಾರೆ, ಇನ್ನೊಂದು ಕಡೆ ಕೆಲಸದಿಂದ ಅಮಾನತು ಮಾಡಿದ್ದಾರೆ, ಇದರಿಂದ ಹೃದಯಾಘಾತ ಆಗಿದೆ. ಎಂಟಿಬಿ ನಾಗರಾಜ್ ಅವರಿಗೆ ನಂದೀಶ ಅವರು ಚೆನ್ನಾಗಿ ಪರಿಚಯವಿರಬೇಕು ಅನ್ನಿಸುತ್ತೆ, ಇಲ್ಲದಿದ್ದರೆ ಅವರೇಕೆ ಅಂತಿಮ ದರ್ಶನಕ್ಕೆ ಹೋಗುತ್ತಿದ್ದರು? ಎಂಟಿಬಿ ನಾಗರಾಜ್ ಅವರ ಬಳಿ ತಾನು 70-80 ಲಕ್ಷ ಕೊಟ್ಟು ಕೆ,ಆರ್ ಪುರಂ ಠಾಣೆಗೆ ಬಂದಿದ್ದೀನಿ ಎಂದು ಹೇಳಿರಬಹುದು. ಇದನ್ನು ಎಂಟಿಬಿ ಬಾಯಿ ಬಿಟ್ಟಿದ್ದಾರೆ. ಇದು ಪ್ರಬಲವಾದ ಸಾಕ್ಷಿ ಕೂಡ ಹೌದುಎ ಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಇದು ಸಹಜ ಸಾವಲ್ಲ, ಸರ್ಕಾರ ಮಾಡಿರುವ ಕೊಲೆ ಎಂದು ಹೇಳಲು ಬಯಸುತ್ತೇನೆ. ಮಾನ್ಯ ಸಚಿವರಾದ ಎಂಟಿಬಿ ನಾಗರಾಜ್ ಅವರು ನಂದೀಶ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಹೋದ ಸಂದರ್ಭದಲ್ಲಿ 70-80 ಲಕ್ಷ ಹಣ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡು ಬಂದರೆ ಹೃದಯಾಘಾತ ಆಗದೇ ಇರುತ್ತದೆಯೇ ಎಂದು ಹೇಳಿದ್ದಾರೆ. ಈ ಸಂಭಾಷಣೆ ಬಹಿರಂಗವಾಗಿದೆ. ಆ ಮೂಲಕ ಈ ಸರ್ಕಾರದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಲಂಚ ಸ್ವೀಕರಿಸಲಾಗುತ್ತದೆ ಎಂಬ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಇವೆಲ್ಲವೂ 40% ಸರ್ಕಾರದ ಅಕ್ರಮಕ್ಕೆ ಸಾಕ್ಷಿಯಾಗಿವೆ ಎಂದಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾಥನಾಡಿ, ಸಚಿವ ಎಂಟಿಬಿ ನಾಗರಾಜ್ ವಿಡಿಯೋ ಜಗಜ್ಜಾಹೀರು ಆಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಾರೆ ತನಿಖೆ ಮಾಡಿಸಲಿ. ಈಗಾಗಲೇ ಮುಖ್ಯಮಂತ್ರಿಗಳು ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಆದರೆ, ಏನು, ಯಾವ ರೀತಿ ತನಿಖೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕಿಡಿಕಾರಿದರು. ನಂದೀಶ್ ಅವರ ಸಾವು ಪೊಲೀಸ್ ಇಲಾಖೆಯಲ್ಲಿ ನಡೆಯುವ ಕರಾಳ ಘಟನೆಗಳಿಗೆ ಕನ್ನಡಿ ಹಿಡಿದಂತೆ ಇದೆ. ಈ ಕಾರಣಕ್ಕೆ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ಮಾಡಬೇಕು ಎಂದರು.