ಮಂಗಳೂರು: ಇಂದಿನ ರಾಜಕೀಯ ಸನ್ನಿವೇಶಗಳು ಕೆಲವರಿಗೆ ಬೇಸರ ತರಿಸಿದೆ. ಅಲ್ಲದೆ, ರಾಜಕೀಯ ನಿಂತ ನೀರಾಗಿದೆ. ಬದಲಾವಣೆಯೇ ಇಲ್ಲ. ಹೊಸ ಮುಖಗಳು ಬರುತ್ತಿಲ್ಲ. ಬಂದರೂ ಅವರು ಈ ವ್ಯವಸ್ಥೆಯೊಳಗೆ ಇರಲಾಗುತ್ತಿಲ್ಲ. ಅಲ್ಲದೆ, ರಾಜಕೀಯ ಪಟ್ಟುಗಳು, ಕಾನೂನು, ನೀತಿ ನಿರೂಪಣೆಯಲ್ಲಿ ಹೊಸಬರು ಸೋಲುತ್ತಿದ್ದಾರೆ. ಅವರಿಗೆ ಅಷ್ಟಾಗಿ ಅನುಭವ ಇಲ್ಲ, ಅನುಭವ ಇಲ್ಲದೇ ಆಯ್ಕೆ ಆಗಲ್ಲ, ಆಯ್ಕೆಯಾಗಿ ಅನುಭವ ಪಡೆಯಲು ಕೆಲವರಿಗೆ ಆಗಲ್ಲ… ಹೀಗೆ “ಅಲ್ಲ”, “ಇಲ್ಲ”ಗಳ ನಡುವೆ ಸಾಗುವ ನಮ್ಮೆಲ್ಲರ ಮಾತಿಗೆ ಇನ್ನು ಬ್ರೇಕ್ ಬೀಳಲಿದೆ. ರಾಜಕೀಯವನ್ನೇ ಉಸಿರು ಮಾಡಿಕೊಳ್ಳಬೇಕು ಎನ್ನುವವರಿಗೆ, ರಾಜಕೀಯದ (Karnataka Politics) ಬಗ್ಗೆ ಆಸಕ್ತಿ ಹೊಂದಿರುವವರಿಗೆ ಇದು ಸಿಹಿ ಸುದ್ದಿ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ “ರಾಜಕೀಯ ತರಬೇತಿ ಕೇಂದ್ರ” ಆರಂಭವಾಗಲಿದೆ.
ಈ ಬಗ್ಗೆ ಸ್ವತಃ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ (UT Khadar) ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅವರು ರಾಜಕೀಯ ಹಾಗೂ ಯುವ ಜನತೆ ಬಗ್ಗೆ ಮಾತನಾಡುತ್ತಾ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಎಲ್ಲರಿಗೂ ಪ್ರಜಾಪ್ರಭುತ್ವ ಅರಿವು ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ತಾವು ಕೆಲವೊಂದು ಕಾರ್ಯಯೋಜನೆಯನ್ನು ಹಾಕಿಕೊಂಡಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Video Viral : ಫ್ರೀ ಬಸ್ ಬಗ್ಗೆ ಉಗಿದು ಉಪ್ಪಿನಕಾಯಿ ಹಾಕಿದ ಮಹಿಳೆ! ಸಿದ್ದರಾಮಯ್ಯಗೆ ಏಕವಚನ ಪ್ರಯೋಗ
ಪದವಿ ಕಲಿತ ಯುವಕರಿಗೆ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ತರಬೇತಿ ಕೇಂದ್ರಗಳು ಇಲ್ಲ. ಹಾಗಾಗಿ ರಾಜಕೀಯ ತರಬೇತಿ ಸಂಸ್ಥೆ ಪ್ರಾರಂಭಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿ ಮಾಡಲಿದ್ದೇವೆ. ಸದ್ಯ ಪುಣೆಯಲ್ಲಿ ಈ ಮಾದರಿ ವ್ಯವಸ್ಥೆ ಇದೆ. ಅವರ ಜತೆ ಚರ್ಚಿಸಿ ಒಂದು ವರ್ಷದ ಕೋರ್ಸ್ ಅನ್ನು ಆರಂಭಿಸಲಿದ್ದೇವೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.
ಇಂಟರ್ನ್‌ಶಿಪ್ ಇರಲಿದೆ
ಎಲ್ಲರಿಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವ ಉದ್ದೇಶ ಇದೆ. ಕೇವಲ ಎಂಎಲ್‌ಎ, ಎಂಪಿ ಅಷ್ಟೇ ಅಲ್ಲದೇ ಎಲ್ಲರಿಗೂ ತಿಳಿಸುವ ಉದ್ದೇಶವನ್ನು ಹೊಂದಲಾಗಿದೆ. ರಾಜ್ಯದ ಪ್ರಮುಖ ಕೇಂದ್ರದಲ್ಲೇ ಇದನ್ನು ಸ್ಥಾಪಿಸಲಾಗುವುದು. ಇದಕ್ಕೆ ಸಿಲಬಸ್ ಇರಲಿದೆ, ಫುಲ್ ಟೈಮ್ ಉಪನ್ಯಾಸಕರು ಇರುತ್ತಾರೆ. ಮಧ್ಯೆ ರಾಜಕೀಯ ನಾಯಕರು, ಮುತ್ಸದ್ದಿಗಳು ಬಂದು ತರಬೇತಿ ಕೊಡುತ್ತಾರೆ. ಆರು ತಿಂಗಳು ಕಲಿತು ಬಳಿಕ ಇಂಟರ್ನ್‌ಶಿಪ್ ಮುಗಿಸಬಹುದು. ಆ ಬಳಿಕ ಒಳ್ಳೆಯ ನಾಯಕ ಆಗಬಹುದು, ಅದರ ಜತೆಗೆ ಶಾಸಕರ ಬಳಿಯೂ ಕೆಲಸ ಮಾಡಬಹುದು ಎಂದು ಯು.ಟಿ. ಖಾದರ್ ಹೇಳಿದ್ದಾರೆ.
ಇದನ್ನೂ ಓದಿ: Murder Case : ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ, ತಹಸೀಲ್ದಾರ್ ಸಾವಿಗೆ ಟ್ವಿಸ್ಟ್! ಹೃದಯಾಘಾತವಲ್ಲ, ಕೊಲೆ?
ಸಭಾಪತಿ ಕೆಲಸ ಮಾತನಾಡೋದಲ್ಲ- ಖಾದರ್
ಸಭಾಪತಿ ಕೆಲಸ ಎಂಬುದು ಮಾತನಾಡುವುದಲ್ಲ. ಸಭೆಯನ್ನು ಚೆನ್ನಾಗಿ ನಡೆಸುವುದು. ಜುಲೈ 3ರಿಂದ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲರು ಸಂದೇಶ ನೀಡಲಿದ್ದಾರೆ. ಜುಲೈ 7ರಂದು ಸಿಎಂ ರಾಜ್ಯದ ಮುಂಗಡ ಪತ್ರ ಮಂಡಿಸುತ್ತಾರೆ. ಶಾಸಕರೆಲ್ಲರ ಭಾಗವಹಿಸುವಿಕೆ ಅಧಿವೇಶನದಲ್ಲಿ ಆಗಬೇಕು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.