ಬೆಂಗಳೂರು: ಇತ್ತೀಚೆಗೆ ಮೊಬೈಲ್ ಬಳಕೆಯೇ ಹೆಚ್ಚುತ್ತಿದೆ. ಅದರಲ್ಲೂ ಮಕ್ಕಳಲ್ಲಿ-ಹದಿಹರೆಯದವರಲ್ಲಿ ಮೊಬೈಲ್ ಗೀಳು ವಿಪರೀತ ಆಗುತ್ತಿದೆ. ಅದರಲ್ಲೂ ಕೊವಿಡ್ 19 ನಂತರ ಮಕ್ಕಳು, ಹದಿಹರೆಯಕ್ಕೆ ಕಾಲಿಡುತ್ತಿರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಈ ಹೊತ್ತಲ್ಲಿ ಪಾಲಕರ ಜವಾಬ್ದಾರಿ ಹೆಚ್ಚಿದೆ ಎನ್ನುತ್ತಾರೆ ಮಾನಸಿಕ ಆರೋಗ್ಯ ವೈದ್ಯಕೀಯ ಸಲಹೆಗಾರರಾದ ಡಾ. ಪಿ. ರಜಿನಿ. ‘ಮಕ್ಕಳು ಮೊಬೈಲ್ನಲ್ಲಿ ಏನು ನೋಡುತ್ತಾರೆ ಎಂಬುದರ ಬಗ್ಗೆ ಎಚ್ಚರವಿರಲಿ. ಚಿಕ್ಕಮಕ್ಕಳು-ಹದಿಹರೆಯದವರು ಅಶ್ಲೀಲ ಚಿತ್ರ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೊವಿಡ್ 19 ಬಂದು ಹೋದ ಬಳಿಕ ಮಕ್ಕಳಿಗೆ ಮೊಬೈಲ್-ಲ್ಯಾಪ್ಟಾಪ್ಗಳೆಲ್ಲ ಇನ್ನಷ್ಟು ಸುಲಭವಾಗಿ ಸಿಗುತ್ತಿದೆ. ಈಗೀಗ ಮೊಬೈಲ್ನಲ್ಲಿ ಸ್ಕ್ರಾಲ್ ಮಾಡುತ್ತ ಹೋದರೆ ಅಶ್ಲೀಲ ಚಿತ್ರಗಳು, ವಿಡಿಯೊಗಳು ಕಾಣಿಸಿಕೊಳ್ಳುತ್ತಿವೆ. ನಾವದನ್ನು ಟೈಪ್ ಮಾಡಬೇಕು ಎಂದೂ ಇಲ್ಲ. ದೊಡ್ಡವರಿಗಾದರೆ ಅರಿವು ಲೈಂಗಿಕತೆ ಬಗ್ಗೆ ಅರಿವು ಇರುತ್ತದೆ. ಆದರೆ ಮಕ್ಕಳಿಗೆ ಹಾಗಲ್ಲ. ಕುತೂಹಲ ಇರುತ್ತದೆ. ಹಾಗಾಗಿಯೇ ಅವರು ಮತ್ತೆಮತ್ತೆ ಅದನ್ನು ನೋಡುತ್ತಾರೆ. ಆ ಸೈಟ್ಗಳ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಾರೆ. ಬರುಬರುತ್ತ ಅವರಲ್ಲಿ ಪೋರ್ನೋಗ್ರಫಿ ಗೀಳು ಬೆಳೆಯುತ್ತದೆ. ಹೀಗೆ ಮಕ್ಕಳು ಕದ್ದುಮುಚ್ಚಿ ಅಶ್ಲೀಲ ವಿಡಿಯೊ ನೋಡುವ ಜತೆ, ಅವರು ಅದನ್ನು ಇನ್ನೊಬ್ಬರ ಮೇಲೆ ಪ್ರಯೋಗ ಮಾಡುವ ಪ್ರಕರಣಗಳೂ ವರದಿಯಾಗುತ್ತಿವೆ. ಅಶ್ಲೀಲ ಚಿತ್ರಗಳಿಂದ ಪ್ರಚೋದಿತರಾಗಿ ತಪ್ಪು ದಾರಿ ಹಿಡಿಯುವ ಸಾಧ್ಯತೆಯೂ ಇರುತ್ತದೆ. ಇದು ನಿಜಕ್ಕೂ ಆತಂಕಕಾರಿ ಎಂದಿದ್ದಾರೆ ಡಾ. ರಜಿನಿ.
‘ಮಕ್ಕಳು ಸೋಷಿಯಲ್ ಮೀಡಿಯಾ ಬಳಕೆ ಮಾಡದಂತೆ ಪಾಲಕರು ಮುಂಜಾಗ್ರತೆ ವಹಿಸಲೇಬೇಕು. ಮಕ್ಕಳಿಗೆ, ಹದಿಹರೆಯದವರಿಗೆ ಯಾರಾದರೂ ಹೊಗಳಿದಾಗ, ನೀನು ಚೆನ್ನಾಗಿ ಕಾಣಿಸುತ್ತಿದ್ದೀಯ, ನಿನ್ನ ಡ್ರೆಸ್ ಚೆನ್ನಾಗಿದೆ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಬಂದರೆ ಅವರು ಸಹಜವಾಗಿಯೇ ಇನ್ನಷ್ಟು ಪ್ರಚೋದಿತರಾಗುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು-ಮತ್ತಷ್ಟು ಸಕ್ರಿಯರಾಗುತ್ತಾರೆ. 14-15ವರ್ಷದ ಹುಡುಗಿಯೊಬ್ಬಳು, ಇದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ಫ್ರೆಂಡ್ ಆಗಿ, ಶಾಲೆಗೂ ಹೋಗದೆ ಬೇರೆ ತೊಂದರೆಗೆ ಒಳಗಾದ ವರದಿ ನಮ್ಮೆದುರು ಬಂದಿತ್ತು ಎಂದು ಹೇಳಿದ್ದಾರೆ.
ಖಿನ್ನತೆ ಮಹಾ ಅಪಾಯಕಾರಿ
ಇತ್ತೀಚೆಗೆ ಮಕ್ಕಳ-ಹದಿಹರೆಯದವರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರಲು ಕಾರಣ ಹಲವು ಇವೆ. ಅದರಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ಖಿನ್ನತೆಯೂ ಒಂದು. ಸತತ ಪೋರ್ನೋಗ್ರಫಿ ನೋಡುವುದರಿಂದಲೂ ಮನಸು ಡಿಪ್ರೆಶನ್ಗೆ ಜಾರುತ್ತದೆ ಎಂದು ಡಾ. ರಜಿನಿ ವಿಶ್ಲೇಷಿಸಿದ್ದಾರೆ.
ಹಾಗೇ, ಕೊವಿಡ್ 19 ನಿಂದಾಗಿ ಮಕ್ಕಳು ಎರಡು ವರ್ಷ ಶಾಲೆಯಿಂದ ದೂರ ಉಳಿದು, ಮನೆಯಲ್ಲಿಯೇ ಇದ್ದರು. ಆನ್ಲೈನ್ನಲ್ಲಿಯೇ ಅವರ ಪಾಠ-ಓದು ನಡೆಯುತ್ತಿತ್ತು. ಹೀಗಾಗಿ ಮೊಬೈಲ್-ಲ್ಯಾಪ್ಟಾಪ್ಗಳೆಲ್ಲ ಇನ್ನಷ್ಟು ಅವರಗೆ ಆಪ್ತವಾದವು. ಈಗ ಕಳೆದ ಆರು ತಿಂಗಳಿಂದ ಶಾಲೆಗೆ ಹೋಗುತ್ತಿದ್ದಾರೆ. ಅವರಿಗೆ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು ಪಾಲಕರು ಸ್ವಲ್ಪ ಸಮಯ ಕೊಡಬೇಕು. ಈ ಮಧ್ಯೆ ಕೆಲವು ಪಾಲಕರು ಮಕ್ಕಳನ್ನು ದೂರುತ್ತಿದ್ದಾರೆ. ನನ್ನ ಮಗ ಕೊವಿಡ್ 19 ಪೂರ್ವ 90 ಪರ್ಸೆಂಟ್ ಮೇಲೆ ಮಾರ್ಕ್ಸ್ ತೆಗೆಯುತ್ತಿದ್ದ, ಈಗ ಬಹಳ ಕಡಿಮೆ ಮಾರ್ಕ್ಸ್ ತೆಗೆಯುತ್ತಿದ್ದಾನೆ. ಆತನಿಗೆ ಶಾಲೆಗೆ ಹೋಗಲು ಆಸಕ್ತಿಯೇ ಇಲ್ಲ. ಓದಿನ ಮೇಲೆ ಗಮನವೂ ಇಲ್ಲ ಎಂದು ಹಲವರು ನನ್ನ ಬಳಿಯೇ ದೂರಿದ್ದಾರೆ.
ಆದರೆ ಹೀಗಾದಾಗ ಪಾಲಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಸಮಾಧಾನದಿಂದ ಕೇಳಬೇಕು. ಅವನಿಗೆ/ಅವಳಿಗೆ ಏನಾಗುತ್ತಿದೆ? ಯಾವೆಲ್ಲ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ ಎಂದು ಅವರ ಬಳಿ ಕೇಳಬೇಕು. ಮಕ್ಕಳಲ್ಲಿ ಖಿನ್ನತೆ ಕಾಣುತ್ತಿದ್ದರೆ ಕೌನ್ಸಿಲಿಂಗ್ ಕೊಡಿಸಬೇಕು. ಅವರ ಮನಸನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು, ಪಾಲಕರು ಮುಂದಿನ ನಡೆ ಇಡಬೇಕು ಎಂದು ಡಾ. ರಜಿನಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರಸಿದ್ಧ ಮನೋರೋಗ ತಜ್ಞ ಡಾ. ಸಿ. ಆರ್. ಚಂದ್ರಶೇಖರ್‌ಗೆ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ