ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಪಕ್ಷಗಳ ನಡುವೆ ಪೋಸ್ಟರ್ ರಾಜಕೀಯ (Poster War) ಅಸಹ್ಯಕರ ತಿರುವುಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ನ ಪೇ ಸಿಎಂ ಪೋಸ್ಟರ್ (Pay CM Poster) ಮೂಲಕ ಆರಂಭವಾದ ಇದು ಬಿಜೆಪಿ, ಜೆಡಿಎಸ್‌ಗಳ ಪಾಲುದಾರಿಕೆಯೊಂದಿಗೆ ಮುಂದುವರಿದಿದೆ. ಇದೀಗ ಬಿಡುಗಡೆಯಾಗಿರುವ ಹೊಸ ಪೋಸ್ಟರ್‌ನಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಅಪಮಾನಕಾರಿಯಾಗಿ ಚಿತ್ರಿಸಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಜೆಡಿಎಸ್ ಕಚೇರಿಯ ಗೋಡೆಗೆ ʻಕರೆಂಟ್ ಕಳ್ಳʼ ಎಂಬ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಇದೀಗ ʻಪೆನ್ ಡ್ರೈವ್ ಬ್ರದರ್ʼ (Pen Drive brother) ಎಂಬ ಸಿನಿಮಾದ ಹೆಸರಿನಲ್ಲಿ ಅವರನ್ನು ಹೀಯಾಳಿಸಿದ್ದಾರೆ. ನಗರದ ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಪೋಸ್ಟರ್ ಅಂಟಿಸಲಾಗಿದೆ. ಇದರಲ್ಲಿ ಬ್ಲೂ ಫಿಲಂನ್ನು ಹೆಚ್ಚು ಪ್ರಖರವಾಗಿ ಬಿಂಬಿಸಲಾಗಿದೆ.
ಇತ್ತೀಚೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು, ಡಿ.ಕೆ. ಶಿವಕುಮಾರ್ ಅವರು ಟೆಂಟ್‌ನಲ್ಲಿ ಬ್ಲೂ ಫಿಲ್ಮ್ ಹಾಕುತ್ತಿದ್ದರು ಎಂದು ಹೇಳಿದ್ದರು. ಈ ಹೇಳಿಕೆಯಿಂದ ಕೆರಳಿದರು ಎಚ್.ಡಿಕೆ ಅವರ ಸಿನಿಮಾ ಮಾದರಿಯ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಏನಿದೆ ಪೋಸ್ಟರ್‌ನಲ್ಲಿ? ರಾಧಾ, ಮಾರ ಯಾರು?
_ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬ ಒಕ್ಕಣೆ ಇರುವ ಪೋಸ್ಟರ್‌ನಲ್ಲಿ
ʻಪೆನ್ ಡ್ರೈವ್ ಬ್ರದರ್ʼ ಸಿನಿಮಾ ಎಂದು ಬರೆಯಲಾಗಿದೆ. ಇದರಲ್ಲಿ ಎಚ್.ಡಿಕೆ ಅವರ ಎರಡು ಚಿತ್ರಗಳನ್ನು ಬಳಸಲಾಗಿದೆ.
-ರಾಧಾ, ಮಾರ , ಬ್ಲೂಬಾಯ್ಸ್ ಚಿತ್ರಮಂದಿರಗಳಲ್ಲಿ ಈ ಚಿರ ಬಿಡುಗಡೆಯಾಗಲಿದೆ ಎಂದು ಹೇಳುವ ಮೂಲಕ ಕೆಲವೊಂದು ಸಂಬಂಧಗಳನ್ನು ಕೆಣಕಲಾಗಿದೆ.
-ಕರೆಂಟ್ ಕಳ್ಳ ಖ್ಯಾತಿಯ ಎಚ್ಡಿಕೆ ನಿರ್ಮಾಣದ ಚಿತ್ರ ಪೆನ್ ಡ್ರೈವ್ ಬ್ರದರ್ ಎಂದು ಬರೆಯಲಾಗಿದೆ.
-ಅದಕ್ಕಿಂತಲೂ ಹೆಚ್ಚಾಗಿ ನಿರ್ದೇಶನ: ಪ್ರಾಮಾಣಿಕ ಖ್ಯಾತಿಯ ಕರೆಂಟ್ ಕಳ್ಳ ಎಂದು ಬರೆಯುವ ಮೂಲಕ ಅವಹೇಳನ ಮಾಡಲಾಗಿದೆ.
-ಕೊನೆಯ ಲೈನ್ ಇನ್ನಷ್ಟು ಪಂಚಿಂಗ್ ಆಗಿದೆ: ಬರೀ ಟೀಸರ್‌ಗೆ ಇಷ್ಟೊಂದು ಟೆನ್ಶನ್ ಆದ್ರೆ ಹೇಗೆ?, ಸಿನಿಮಾ ಇನ್ನೂ ಬಾಕಿಯಿದೆ ಎಂದು ಬರೆಯಲಾಗಿದೆ.
-ಚಿತ್ರದ ನಿರ್ಮಾಣದ ವೆಚ್ಚ 68000 ಎಂದು ಪೋಸ್ಟರ್ ನಲ್ಲಿ ಹೇಳಲಾಗಿದೆ.
ಆಕ್ರೋಶದ ಪ್ರತಿಕ್ರಿಯೆ ನೀಡಿದ ಎಚ್.ಡಿ ಕುಮಾರಸ್ವಾಮಿ
ಕಾಂಗ್ರೆಸ್ ಕಾರ್ಯಕರ್ತರ ಈ ಅವಹೇಳನಕಾರಿ ಪೋಸ್ಟರ್‌ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶದ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ಚನ್ನರಾಯಪಟ್ಟಣ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ʻʻಕುಮಾರಸ್ವಾಮಿ ಘನತೆಗೆ ತಕ್ಕನಾಗಿ ಮಾತನಾಡಬೇಕುʼʼ ಎಂಬ ಡಿಕೆಶಿ ಹೇಳಿಕೆಗೆ ಪ್ರತಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: HD Kumaraswamy : ವಿದ್ಯುತ್ ಕಳ್ಳತನ ಪ್ರಕರಣ; 68,526 ರೂಪಾಯಿ ದಂಡ ಕಟ್ಟಿದ ಎಚ್.ಡಿ. ಕುಮಾರಸ್ವಾಮಿ
ʻʻಅವರು ಏನ್ ಮಾತಾಡ್ತಾರೆ, ಅವರಿಗೆ ಯಾವ ಘನತೆ ಇದೆ? ಕರೆಂಟ್ ಕಳ್ಳ ಅಂತ ಪೋಸ್ಟ್ ಅಂಟಿಸೋದು.. ಇದಲ್ವಾ ನಿಮ್ಮ ಘನತೆ, ಒಬ್ಬ ಪಾರ್ಟಿ ಅಧ್ಯಕ್ಷಂದು, ಕಾಂಗ್ರೆಸ್ ಪಕ್ಷದ ಅಧ್ಯಕ್ಷಂದು ಘನತೆ ಇದಲ್ವಾʼʼ ಎಂದು ಕೇಳಿದರು.
ಅದಕ್ಕೆ ನಾನು ನಿನ್ನೆ ಅವರ ಬ್ಲೂ ಫಿಲಂ ಕಥೆ ಹೇಳಿದ್ದು. ದೊಡ್ಡ ಆಲಹಳ್ಳಿಯಲ್ಲಿ, ಸಾತನೂರಿನಲ್ಲಿ ಎರಡು ಟೆಂಟ್ ಇಡ್ಕೊಂಡು ಬ್ಲೂಫಿಲಂ ಹಾಕ್ತಾ ಇದ್ರಲ್ವಾ ಅಂತ. ಆ ಸಂಸ್ಕೃತಿಯಲ್ಲಿ ಬಂದಿರೋದ್ರಿಂದಲೇ ಈ ಪೋಸ್ಟರ್ ಅಂಟಿಸಿಕೊಂಡು ಕೂತಿದ್ದೀರಿ ಎಂದಿದ್ದೇನೆ ಎಂದು ಹೇಳಿದ್ದಾರೆ ಕುಮಾರಸ್ವಾಮಿ.