ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳ ಜಾತಿ ಗಣತಿ ಸಹ ಶುರುವಾಗಿದೆ. ಐಎಎಸ್, ಐಪಿಎಸ್‌ಗೆ ಯೋಗ್ಯತೆ, ದಕ್ಷತೆ ಮೇಲೆ ಪೋಸ್ಟ್ ಕೊಡಬೇಕು. ಆದರೆ, ಇವರು ಜಾತಿ ಲೇಬಲ್ ಹಾಕಿ ಪೋಸ್ಟಿಂಗ್ ಕೊಡುತ್ತಿದ್ದಾರೆ. ಇದು ಯಾವ ಸೀಮೆ ಜಾತ್ಯತೀತತೆ? ಜಾತಿ ಆಧಾರದ ಮೇಲೆ ಹುದ್ದೆ ಕೊಡುವುದು ಅಂದರೆ ಏನು? ಇಷ್ಟಾದ ಮೇಲೂ ಇವರು ಜಾತ್ಯತೀತರಾ? (Caste Politics), ಇದು ವಿಶ್ವಾಸಾರ್ಹತೆ ಇಲ್ಲದ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಜಿ ಸಚಿವ ಸಿ.ಟಿ..ರವಿ ಕಿಡಿಕಾರಿದ್ದಾರೆ.
ಸರ್ಕಾರದಲ್ಲಿ ಲಿಂಗಾಯತರ ಕಡೆಗಣನೆ ಎಂಬ ಶಾಮನೂರು ಶಿವಶಂಕರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ರಕಾಶ್ ರಾಥೋಡ್‌ಗೆ ಇವಿಎಂ ಮೇಲೆ ಪ್ರೀತಿ ಬಂದುಬಿಟ್ಟಿದೆ. ಮುಂಚೆ ಇವಿಎಂ ಟ್ಯಾಂಪರಿಂಗ್ ಆಗಿದೆ ಎಂದು ವಿರೋಧಿಸುತ್ತಿದ್ದರು. ಈಗ ಯಾವ ಜಾತಿ ಎಷ್ಟು ಮತ ಹಾಕಿದ್ದಾರೆ ಎಂದು ಹೇಳುತ್ತಿದ್ದಾರೆ. ಮತ ಹಾಕಿರುವುದು ಗುಪ್ತವಾಗಿರುತ್ತದೆ, ಇವರಿಗೆ ಹೇಗೆ ಸಿಕ್ಕಿತು. ಚೀನಾದಿಂದ ಟ್ಯಾಂಪರಿಂಗ್ ಮಾಡೋದನ್ನು ಕಲಿತು ಬಂದ್ರಾ ಇವರು ಎಂದು ಪ್ರಶ್ನಿಸಿದರು.
ಪ್ರಕಾಶ್ ರಾಥೋಡ್ ಪ್ರಕಾರವೇ ಅವರ ಪಕ್ಷ ಮುಸ್ಲಿಮರಿಗೂ ಅನ್ಯಾಯ ಮಾಡಿದೆ. ಶೇ.88 ಮತ ಹಾಕಿದ್ದರೂ ಎರಡೇ ಸಚಿವ ಸ್ಥಾನ ಕೊಟ್ಟಿದ್ದಾರೆ. ಅವರಿಗೆ ಅನ್ಯಾಯವಾಗಿದೆ ಅಂತ ಅವರೇ ಹೇಳಿಕೊಂಡಿದ್ದಾರೆ ಎಂದರು. ಇದೇ ವೇಳೆ ಬೀಳಗಿ ಶಾಸಕರಿಂದ ಪತ್ರ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರದಲ್ಲಿ ಅಸಹನೆ, ಒಳ ಬೇಗುದಿ ಇರುವುದು ಪತ್ರ ಸಮರದ ಮೂಲಕ ತೋರುತ್ತಿದೆ. ಬಹುಶಃ ಜಿ.ಟಿ. ಪಾಟೀಲ್ ಪತ್ರದ ಮೂಲಕ ಆ ಅಧಿಕಾರಿ ವಿರುದ್ಧ ಕ್ರಮ ಆಗಬಹುದು. ಇಲ್ಲದೇ ಹೋದರೆ ಜಿ.ಟಿ. ಪಾಟೀಲ್ ಅವರು ಮುಂದೆ ಕಠಿಣ ನಿಲುವು ತೆಗೆದುಕೊಳ್ಳಬಹುದು. ಶಾಸಕ ಸ್ಥಾನದ ಗೌರವ ಉಳಿಸಲು ಬೇರೆ ಏನಾದರೂ ನಿಲುವು ತೆಗೆದುಕೊಳ್ಳಬಹುದು ಎಂದರು.
ಇದನ್ನೂ ಓದಿ | Attibele Fire Accident : ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡರೆ ಮಾತ್ರ ಇಂಥ ದುರಂತ ನಿಲ್ಲಲಿದೆ!
ಸರ್ಕಾರಕ್ಕೆ ಬಿಜೆಪಿ, ಜೆಡಿಎಸ್‌ನಿಂದ ಅಪಾಯ ಇಲ್ಲ
ಸಂಕ್ರಾಂತಿ ಬಳಿಕ ಸರ್ಕಾರ ಬೀಳುತ್ತೆ ಎಂಬ ಸಿ.ಪಿ. ಯೋಗೇಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರದ ಒಳಗೆ ಎಲ್ಲವೂ ಸರಿಯಲ್ಲ. ಆದರೆ, ಹೊರಗಿನ ಯಾವ ಶಕ್ತಿಗಳು ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಒಳಗಡೆ ಏನು ಬೇಕಾದರೂ ಆಗಬಹುದು. ಒಳಗಡೆ ಬಂಡಾಯ ಎದ್ದರೆ ಅದು ನಮ್ಮ ಕೈಯಲ್ಲಿ ಇಲ್ಲ. ಈ ಸರ್ಕಾರಕ್ಕೆ ಬಿಜೆಪಿ, ಜೆಡಿಎಸ್‌ನಿಂದ ಅಪಾಯ ಇಲ್ಲ. ಅಪಾಯ ಇರೋದು ಒಳಗಡೆಯಿಂದಲೇ. ಹೀಗಾಗಿ ಇದರಿಂದ ಮುಂದೆ ಏನು ಬೇಕಾದರೂ ಆಗಬಹುದು ಎಂದ ತಿಳಿಸಿದರು.
ಈದ್ ಮಿಲಾದ್ ಆಗಿ ಒಂದು ವಾರ ಆಗಿದೆ. ಯೋಜನಾ ಬದ್ಧವಾಗಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ದಾರೆ. ಶೇ.90 ಇಸ್ಲಾಂ ಭಾಗವಾಗಿ ದಾಳಿ ಆಗಿದೆ. ಉಳಿದ ಶೇ.10 ಎಡ ಪಂಥೀಯವಾದಿಗಳಿಂದ ಈ ರೀತಿಯ ಚಟುವಟಿಕೆ ಆಗುತ್ತಿದೆ. ಭಯೋತ್ಪಾದನಾ ಚಟುವಟಿಕೆ ಈಗ ಕಡಿಮೆ ಆಗಿದೆ. ಮೂಲ ಪ್ರಚೋದನೆ ಬಗ್ಗೆ ಆಲೋಚನೆ ಮಾಡಬೇಕು. ನಮ್ಮ ಪ್ರಧಾನಿ, ಇಸ್ರೆಲ್ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ. ಭಯೋತ್ಪಾದನಾ ಚಟುವಟಿಕೆಗಳ ಮೂಲ ಬೇರು ಕಿತ್ತು ಹಾಕಬೇಕು. ಶಾಂತಿ ನೆಲಸಲು ಎಲ್ಲರೂ ಒಂದಾಗಬೇಕು ಎಂದು ತಿಳಿಸಿದರು.
ತಂಗಡಗಿಗೆ ಪಕ್ಷ ನಿಷ್ಠೆ ಇದೆಯೇ?
ಬಿಜೆಪಿ ನಾಯಕರ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ತಂಗಡಗಿಗೆ ಪಕ್ಷ ನಿಷ್ಠೆ ಇದೆಯೇ. ಅವರು ಮೊದಲು ನಮ್ಮ ಜತೆ ಇದ್ದು, ಈಗ ಅಲ್ಲಿ ಇದ್ದಾರೆ. ಸಚಿವ ಸ್ಥಾನ ಸಿಗದೇ ಹೋದರೆ, ಕಾಂಗ್ರೆಸ್ ಕೂಡ ಬಿಡುತ್ತಾರೆ ಎಂದು ತಿರುಗೇಟು ನೀಡಿದರು.
ರಾಜ್ಯಾಧ್ಯಕ್ಷ ಕಟೀಲ್ ಬದಲಾವಣೆ ಆಗಬೇಕು, ಕಾರ್ಯಕರ್ತರು ನೊಂದಿದ್ದಾರೆ ಎಂಬ ಡಿವಿಎಸ್ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಜವಾಬ್ದಾರಿಯಿಂದ ಮುಕ್ತ ಮಾಡಿ ಅಂತ ಹೈಕಮಾಂಡ್‌ಗೆ ಅವರೇ ಹೇಳಿದ್ದಾರೆ. ವರಿಷ್ಠರು ಯಾವಾಗ ನಿರ್ಣಯ ಮಾಡುತ್ತಾರೋ ಗೊತ್ತಿಲ್ಲ. ಈಗ ಕಟೀಲ್ ಅವರು ಅವರ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದ ಮೇಲೆ ಆ ಸ್ಥಾನಕ್ಕೆ ಎಲ್ಲರೂ ಗೌರವ ಕೊಡಬೇಕು ಎಂದರು.
ಗಾಂಧಿವಾದಿಗಳು ಊರೂರಿಗೂ ಮದ್ಯದಂಗಡಿ ಲೈಸೆನ್ಸ್ ಕೊಡುತ್ತಿದ್ದಾರೆ
ಮದ್ಯ ಮಾರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಮದ್ಯದ ವಿಚಾರದಲ್ಲಿ ನೀನು ಅತ್ತಂಗೆ ಮಾಡು ನಾನು ಸತ್ತಂಗೆ ಮಾಡ್ತೀನಿ ಅನ್ನೋ ನಿಲುವು ಇವರದು. ಹಳ್ಳಿಗಳಿಗೆ ಈಗಾಗಲೇ ಅನಧಿಕೃತವಾಗಿ ಮದ್ಯ ಪೂರೈಕೆ ಆಗುತ್ತಿದೆ. ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೂ ಇವರು ತಮ್ಮನ್ನು ಗಾಂಧಿವಾದಿಗಳು ಎಂದು ಕರೆದುಕೊಳ್ಳುತ್ತಾರೆ. ಈ ಗಾಂಧಿವಾದಿಗಳು ಊರೂರಿಗೆ ಮದ್ಯದಂಗಡಿ ಲೈಸೆನ್ಸ್ ಕೊಡುತ್ತಿದ್ದಾರೆ. ಇದು ಆರನೇ ಗ್ಯಾರಂಟಿ ಇರಬೇಕು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | Attibele Fire Accident : ಅತ್ತಿಬೆಲೆ ಪಟಾಕಿ ದುರಂತದ ಸಿಐಡಿ ತನಿಖೆ: ಸಿದ್ದರಾಮಯ್ಯ ಘೋಷಣೆ
ಅತ್ತಿಬೆಲೆ ಪಟಾಕಿ ಅಂಗಡಿ ದುರಂತ; ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ಪರಿಹಾರ ಕೊಡಬೇಕು
ಅತ್ತಿಬೆಲೆ ಘಟನೆ ಬಹಳ ದುರದೃಷ್ಟಕರ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ. ಜನ ವಸತಿ ಪ್ರದೇಶದಲ್ಲಿ ಪಟಾಕಿ ಶೇಖರಣೆಗೆ ಹೇಗೆ ಅನುಮತಿ ಕೊಟ್ಟರು. ಪ್ರಾಣ ಕಳೆದುಕೊಂಡವರೆಲ್ಲ ಬಡ ಕಾರ್ಮಿಕರು. ಅಧಿಕಾರಿಗಳು ಮತ್ತು ಮಾಲೀಕರ ಮೇಲೆ ಕ್ರಮ ಆಗಬೇಕು. ಇಂತಹ ಘಟನೆಗಳು ಇನ್ಮೊಮ್ಮೆ ಆಗದ ರೀತಿ ಉಳಿದ ಕಡೆ ಸೂಕ್ತ ಎಚ್ಚರಿಕೆ ಕ್ರಮ ವಹಿಸಬೇಕು. ಇಂತಹ ಅನಾಹುತ ಆಗದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಜತೆಗೆ ಸತ್ತವರಿಗೆ ತಲಾ 25 ಲಕ್ಷ ರೂ. ಪರಿಹಾರ ಕೊಡಬೇಕು. ಗಾಯಾಳುಗಳ ಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.