ಬೆಂಗಳೂರು: ಒಂದು ಕಡೆ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ದಿನವೂ ಎಂಬಂತೆ ಪ್ರಾಣ ಬಲಿ ಪಡೆಯುತ್ತಿವೆ, ಅಪಘಾತಕ್ಕೆ ಸಿಲುಕಿದ ಹಲವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆದರೆ, ಬಿಬಿಎಂಪಿ ಮಾತ್ರ ಏನೂ ಆಗಿಲ್ಲ ಎನ್ನುವಂತೆ ಮೌನವಾಗಿ ಕುಳಿತಿದೆ. ಅದರ ಈ ನಿರ್ಲಕ್ಷ್ಯಕ್ಕೆ ಈಗ ಪೊಲೀಸ್ ಇಲಾಖೆಯೂ ಸಾಥ್ ನೀಡುತ್ತಿದೆ. ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನೊಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರೆ, ಪೊಲೀಸರು ಮಾತ್ರ ಇದೊಂದು ಸ್ವಯಂ ಆಪಘಾತ ಎಂದು ಕೇಸು ದಾಖಲಿಸಿಕೊಂಡಿದ್ದಾರೆ.
ನಿಜವೆಂದರೆ ಯಾವ ಭಾಗದಲ್ಲಿ ಯಾವ ಗುಂಡಿಗೆ ಬಿದ್ದು ಈ ರೀತಿ ತೊಂದರೆ ಆಗಿದೆ ಎಂದು ಎಲ್ಲ ದಾಖಲೆಗಳ ಸಹಿತ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಮಾತ್ರ ತಮ್ಮ ಎಫ್‌ಐಆರ್‌ನಲ್ಲಿ ರಸ್ತೆ ಗುಂಡಿಯ ಯಾವ ವಿಚಾರವನ್ನೂ ಉಲ್ಲೇಖಿಸದೆ ಬೈಕ್ ಸವಾರ ತಾನೇ ಅಪಘಾತ ಮಾಡಿಕೊಂಡಿದ್ದಾನೆ. ಇದು ಸ್ವಯಂ ಅಪಘಾತ ಎಂಬಂತೆ ಷರಾ ಬರೆದಿದ್ದಾರೆ. ಈಗ ಯುವಕ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಅವನ ಚಿಕಿತ್ಸೆಯ ವೆಚ್ಚ ಭರಿಸುವುದು ಕಷ್ಟವಾಗಿದೆ. ಪೊಲೀಸರ ನಿರ್ಲಕ್ಷ್ಯದಿಂದಾಗಿ ಕುಟುಂಬ ಪರದಾಡುವಂತಾಗಿದೆ.
ಏನಿದು ಘಟನೆ?
ಬೆಂಗಳೂರಿನ ವಿದ್ಯಾರಣ್ಯ ಪುರದ ದೊಡ್ಡಬೆಟ್ಟಹಳ್ಳಿ ನಿವಾಸಿಯಾಗಿರುವ ಸಂದೀಪ್ ಎಂಬವರು ನವೆಂಬರ್ ೧ರಂದು ರಾತ್ರಿ ೯.೪೫ರ ಸುಮಾರಿಗೆ ಟಿವಿಎಸ್ ಜುಪಿಟರ್ ಬೈಕ್‌ನಲ್ಲಿ ಹೋಗುವಾಗ ಅಪಘಾತಕ್ಕೀಡಾಗಿದ್ದರು. ಜಾಲಹಳ್ಳಿ ಕ್ರಾಸ್‌ನಿಂದ ಗಂಗಮ್ಮ ಸರ್ಕಲ್ ಕಡೆಗೆ ಸಾಗುತ್ತಿದ್ದಾಗ ಬೈಕ್ ರಸ್ತೆ ಗುಂಡಿಗೆ ಬಿದ್ದು ಅವರು ನಿಯಂತ್ರಣ ತಪ್ಪಿ ಉರುಳಿದ್ದರು. ಈ ಬಗ್ಗೆ ಸಂದೀಪ್ ಅವರ ಪತ್ನಿ ಸೀಮಾ ಅವರು ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ, ಪೊಲೀಸರು ತಯಾರಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ರಸ್ತೆ ಗುಂಡಿಯ ವಿಚಾರವೇ ಇಲ್ಲ. ಸಂದೀಪ್ ಅವರು ತಾವಾಗಿಯೇ ಹೋಗಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಸೀಮಾ ಅವರು ತಾವು ನೀಡಿದ ದೂರಿನಲ್ಲಿ ಸ್ಪಷ್ಟವಾಗಿ ಇದು ರಸ್ತೆ ಗುಂಡಿಯಿಂದ ಸಂಭವಿಸಿದ ಅಪಘಾತ ಎನ್ನುವುದನ್ನು ತಿಳಿಸಿದ್ದಾರೆ. ಜತೆಗೆ ಕೆಲವೊಂದು ದಾಖಲೆಗಳನ್ನೂ ನೀಡಿದ್ದರು. ಆದರೆ, ಪೊಲೀಸರು ಮಾತ್ರ ಕುಟುಂಬಕ್ಕೆ ಮೋಸ ಮಾಡಿ ಬಿಬಿಎಂಪಿಗೆ ಬೆಂಬಲವಾಗಿ ನಿಂತಿದ್ದಾರೆ. ಇದರಿಂದ ಕುಟುಂಬ ಭಾರಿ ಸಂಕಷ್ಟಕ್ಕೆ ಗುರಿಯಾಗಿದೆ.
ಕೋಮಾ ಸ್ಥಿತಿಯಲ್ಲಿ ಸಂದೀಪ್
ತೀವ್ರವಾಗಿ ಗಾಯಗೊಂಡಿರುವ ಸಂದೀಪ್ ಅವರು ಈಗ ಖಾಸಗಿ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದಾರೆ. ಮನೆಗೆ ಆಧಾರವಾದ ಯುವಕನ ಈ ಸ್ಥಿತಿ ಎಲ್ಲರನ್ನೂ ಕಂಗಾಲು ಮಾಡಿದೆ. ಇದರ ಜತೆಗೆ ಆದ್ರೆ ಜಾಲಹಳ್ಳಿ ಸಂಚಾರಿ ಪೊಲೀಸರು ರಸ್ತೆ ಗುಂಡಿ ಎಂದು ಉಲ್ಲೇಖಿಸದ ಕಾರಣ ಬಿಬಿಎಂಪಿಯಿಂದ ಸಿಗಬೇಕಿದ್ದ ಚಿಕಿತ್ಸಾ ವೆಚ್ಚ ಹಾಗು ಇನ್ನಿತರ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದಾಗಿ ಕುಟುಂಬಸ್ಥರು ಆಸ್ಪತ್ರೆಯ ಬಿಲ್ ಕಟ್ಟಿ ಹೈರಾಣಾಗಿದ್ದಾರೆ. ಸದ್ಯ ಜಾಲಹಳ್ಳಿ ಸಂಚಾರಿ ಪೊಲೀಸರು ಈ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಪರಿಹರಿಸಬೇಕಾದ ತುರ್ತು ಸ್ಥಿತಿ ಇದೆ.
ಸಾಕ್ಷ್ಯಾಧಾರ ಬೇಕು ಎಂದ ಆಯುಕ್ತರು
ಈ ನಡುವೆ, ಕುಟುಂಬದವರು ಮತ್ತು ಗೆಳೆಯರು ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದಾರೆ. ಸಂದೀಪ್ ರಸ್ತೆ ಗುಂಡಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರ ಗಮನಕ್ಕೂ ತಂದಿದ್ದಾರೆ. ಆದರೆ, ಸಂದೀಪ್ ಅವರು ಕೋಮಾದಲ್ಲಿರುವ ವಿಚಾರಕ್ಕೆ ಆಯುಕ್ತರು ಕ್ಯಾರೇ ಅಂದಿಲ್ಲ.
ರಸ್ತೆ ಗುಂಡಿಯಿಂದಲೇ ಈ ಅಪಘಾತ ಆಗಿದೆ ಎನ್ನುವ ಬಗ್ಗೆ ದಾಖಲೆ ಬೇಕು, ಸಾಕ್ಷ್ಯಾಧಾರ ಬೇಕು ಎಂದು ಅವರು ಕೇಳಿದ್ದಾರೆ. ತನಿಖೆ ಆಗದೆ ಈಗಲೇ ಏನೂ ಹೇಳಲಾಗದು ಎಂದಿದ್ದಾರೆ.
ಕುಟುಂಬ ಈಗ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಬೆಂಗಳೂರಿನ ರಸ್ತೆಗಳ ದುಸ್ಥಿತಿಯನ್ನು ಕೇಳುವವರಿಲ್ಲ ಎನ್ನುವುದು ಒಂದು ಕಡೆಯಾದರೆ ಅದರಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದರೂ ವ್ಯವಸ್ಥೆಯ ಮನ ಕರಗುವುದಿಲ್ಲ. ವಾಹನಿಗರೇ ಅಪರಾಧಿಗಳೂ ಎಂದು ಪರಿಗಣಿಸುವ ಕ್ರೌರ್ಯ ಇನ್ನಷ್ಟು ಬೇಸರ ಮೂಡಿಸುತ್ತಿದೆ.
ಇದನ್ನೂ ಓದಿ | Bangalore Pot hole| ಎಲ್ಲರದ್ದೂ ಒಂದೇ ಬೇಡಿಕೆ, ಮೋದಿ ಜಿ ನಮ್ಮ ಏರಿಯಾಗೆ ಒಮ್ಮೆ ಬಂದು ಹೋಗಿ ಪ್ಲೀಸ್!