ಬೆಳಗಾವಿ: ರಾಜ್ಯದಲ್ಲಿ 11,133 ಪೌರ ಕಾರ್ಮಿಕರ ನೌಕರಿಯನ್ನು ಕಾಯಂಗೊಳಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 42 ಸಾವಿರ ಪೌರಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರನ್ನು ಕಾಯಂ ನೇಮಕಾತಿ (Pourakarmika Appointment) ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಬುಧವಾರ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು. ಆರೋಗ್ಯ ಹಿತರಕ್ಷಣೆಗಾಗಿ ಬಜೆಟ್‌ನಲ್ಲಿ ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆಯನ್ನು ನೀಡಲಾಯಿತು. ಅವರು ಗೌರವಯುತ ಜೀವನ ನಡೆಸುವ ಸಲುವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 309 ಕ್ಲೀನರ್, 1437 ಲೋಡರ್‌ಗಳನ್ನು ಕಾಯಂಗೊಳಿಸಲಾಗಿದೆ. ಇದೇ ರೀತಿ ಉಳಿದವ ನೇಮಕಾತಿ ಮಾಡಲಾಗುವುದು. ಅಲ್ಲಿಯವರೆಗೆ ಅವರ ಸೇವಾದರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ತೀರ್ಮಾನವನ್ನು ಸರ್ಕಾರ ಮಾಡಿದೆ ಎಂದರು.
ಇದನ್ನೂ ಓದಿ | Ramanagara | ಅಶ್ವತ್ಥನಾರಾಯಣ ಮಂದಿರವನ್ನು ಕಟ್ಟಲಿ ಎಂದ ಡಿಕೆಶಿ; ಅವರಿಗೂ ರಾಮನಗರಕ್ಕೂ ಸಂಬಂಧ ಏನು ಎಂದ ಎಚ್‌ಡಿಡಿ
ಪೌರ ಕಾರ್ಮಿಕರಲ್ಲ, ಪೌರ ನೌಕರರು
ಇನ್ನು ಮುಂದೆ ಪೌರ ಕಾರ್ಮಿಕರು ಎನ್ನದೇ, ಸರ್ಕಾರಿ ಪೌರ ನೌಕರರು ಎಂದು ಕರೆಯಲು ತೀರ್ಮಾನಿಸಲಾಗಿದೆ. ಈ ಹೆಸರು ಪೌರಕಾರ್ಮಿಕರಿಗೆ ಸ್ವಾಭಿಮಾನ, ಅಸ್ಮಿತೆಯನ್ನು ನೀಡುತ್ತದೆ. ಪೌರನೌಕರರ ಸೇವೆಯನ್ನು ಸರ್ಕಾರ ಗುರುತಿಸಿದೆ. ಬರುವ ದಿನಗಳಲ್ಲಿ ಪೌರನೌಕರರ ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿಶೇಷ ತರಬೇತಿ
ಮಾರ್ಚ್‌ನಲ್ಲಿ ಪದವಿ ಪರೀಕ್ಷೆ ಬರೆಯುವ ಪೌರನೌಕರರ ಮಕ್ಕಳ ಸವಿವರ ಪಟ್ಟಿಯನ್ನು ನೀಡಲು ಸಂಬಂಧಪಟ್ಟ ಸಚಿವರಿಗೆ ಸೂಚಿಸಿದ ಮುಖ್ಯಮಂತ್ರಿ, ಎಸ್‌ಸಿ-ಎಸ್‌ಟಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡುವಂತೆ, ಪೌರನೌಕರರ ಮಕ್ಕಳೂ ಸಿಇಟಿ ಸೇರಿ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿಶೇಷ ತರಬೇತಿಯನ್ನು ನೀಡಲು ಸರ್ಕಾರ ಸಿದ್ಧವಿದೆ. ಪೌರಕಾರ್ಮಿಕರ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣ, ಮನೆ ನಿರ್ಮಾಣಗಳಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಪೌರಕಾರ್ಮಿಕರ ಇವುಗಳ ಲಾಭವನ್ನು ಪಡೆಯಬೇಕು ಎಂದು ಕೋರಿದರು.
ಪೌರ ಕಾರ್ಮಿಕರಿಗೆ ಕಾಯಂ ನೇಮಕಾತಿ ಆದೇಶ ನೀಡುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಇದರ ಬಗ್ಗೆ ಹಲವು ವರದಿಗಳು ಬಂದಿದ್ದರೂ, ಬೇಡಿಕೆ ಈಡೇರಿರಲಿಲ್ಲ. ನಿಮ್ಮ ಜಾಗದಲ್ಲಿ ನಿಂತು ಯೋಚಿಸಿದಾಗ, ಬದುಕಿಗಾಗಿ ನಾನು ಏಕೆ ಇನ್ನೊಬ್ಬರ ಹೊಲಸನ್ನು ಸ್ವಚ್ಛಗೊಳಿಸಬೇಕು ಎಂಬ ಮೂಲಭೂತ ಪ್ರಶ್ನೆ ಏಳುತ್ತದೆ. ಇಂತಹ ಬದುಕನ್ನು ಬದುಕುವ ಅನಿವಾರ್ಯತೆ ಏಕೆ ಬಂದಿದೆ ಎಂದ ಅವರು, ರಾಜ್ಯದ ದಲಿತ ನಾಯಕ ಬಸವಲಿಂಗಪ್ಪ, ಮಲ ಹೊರುವ ಪದ್ಧತಿಯನ್ನು ನಿಷೇದಿಸುವ ಕಾನೂನನ್ನು ತಂದ ಧೀಮಂತ ನಾಯಕರಾಗಿದ್ದಾರೆ ಎಂದು ಸ್ಮರಿಸಿದರು.
ಸಚಿವರಾದ ಗೋವಿಂದ ಕಾರಜೋಳ, ಎಂ.ಟಿ.ಬಿ.ನಾಗರಾಜ್, ಶಶಿಕಲಾ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | Amit Shah | ಮಂಡ್ಯದಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ; 1 ಲಕ್ಷ ಜನರನ್ನು ಸೇರಿಸುವ ಗುರಿ