ಬಾಗಲಕೋಟೆ: ತಂದೆ ತಾಯಿ ಇಲ್ಲದ ಯುವತಿಯ ಮೇಲೆ ದುರ್ಷ್ಕರ್ಮಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲ್ಲೂಕಿನ ಗುಡೂರು ಎಸ್ಸಿ ಗ್ರಾಮದಲ್ಲಿ ಇಂತಹದ್ದೊಂದು ದುರ್ಘಟನೆ ನಡೆದಿದೆ.
ಗ್ರಾಮದ ಗಂಗಾನಗರ ನಿವಾಸಿಯಾಗಿರುವ ನೇತ್ರಾ ಕೋಣಪ್ಪ ವಡ್ಡರ್( 18) ಎಂಬ ಯುವತಿ ಮೇಲೆ, ಅದೇ ಗ್ರಾಮದ ಗರಡಿಮನೆ ಏರಿಯಾದ ಅಪ್ಜಲ್ ಸೋಲ್ಹಾಪುರ್(೨೭) ಎಂಬ ಯುವಕ ಪ್ರೀತಿಸುವಂತೆ 15 ದಿನಗಳಿಂದ ಪೀಡಿಸುತ್ತಿದ್ದನಂತೆ.
ಇದರಿಂದ ಬೇಸತ್ತ ನೇತ್ರಾ ವಡ್ಡರ್, ಮನೆಯಲ್ಲಿ ಹೇಳುತ್ತೇನೆ ಎಂದು ಹೇಳಿದ್ದಕ್ಕೆ, ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತಂದೆ ತಾಯಿ ಇಲ್ಲದ ನೇತ್ರಾ ಅಕ್ಕನ ಜೊತೆಗೆ ಜೀವನ ಸಾಗಿಸುತ್ತಿದ್ದಳು. ನಿತ್ಯ ಗುಡೂರು ಎಸ್ಸಿ ಗ್ರಾಮದ ಕೋಳಿ ಫಾರ್ಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಇವತ್ತು ಸಹ ಕೆಲಸಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ: SC ST Reservation: ಬೋವಿ, ಲಂಬಾಣಿ, ಕೊರಮ, ಕೊರಚ ಜನಾಂಗದವರೂ ಎಸ್‌ಸಿ ಪಟ್ಟಿಯಲ್ಲೇ ಇರುತ್ತಾರೆ: ಸಿಎಂ ಬೊಮ್ಮಾಯಿ
ಬಡವರ ಮಕ್ಕಳು ದುಡಿದು ತಿನ್ನುವುದು ತಪ್ಪಾ, ಹೀಗೆ ರಸ್ತೆಯಲ್ಲಿ ಹೋಗುವಾಗ ಈ ರೀತಿಯ ಕೃತ್ಯ ನಡೆಸೋದು ಎಷ್ಟು ಸರಿ, ಸಂಬಂಧಿಸಿದ ಯುವಕನ ಮೇಲೆ ಕಾನೂನು ಕ್ರಮ ಆಗಬೇಕು ಎಂದು ನೇತ್ರಾ ಸೋದರ ಮಾವ ತಿಮ್ಮಣ್ಣ ವಡ್ಡರ್ ಆಗ್ರಹಿಸಿದ್ದಾರೆ. ನೇತ್ರಾ ಹಾಗೂ ಅಪ್ಜಲ್ ಸೋಲ್ಹಾಪುರಗೆ ಯಾವುದೇ ಪರಿಚಯ ಇರಲಿಲ್ಲ. 15 ದಿನಗಳಿಂದ ಈ ರೀತಿ ಪ್ರೀತಿಸುವಂತೆ ಪೀಡಿಸುತ್ತಿದ್ದ , ಅಲ್ಲದೇ ಜಾತಿ ನಿಂದನೆ ಸಹ ಮಾಡಿದ್ದಾನೆ ಎಂದು ನೇತ್ರಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಕ್ಷಣ ಸ್ಥಳದಲ್ಲೇ ಇದ್ದ ಜನರು ಬೆಂಕಿ ನಂದಿಸಿ, ನೇತ್ರಾಳನ್ನು ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿರೋ ನೇತ್ರಾಳಿಗೆ 30-40% ಸುಟ್ಟ ಗಾಯಗಳಾಗಿದ್ದು ಸದ್ಯಕ್ಕೆ ಯಾವುದೇ ಅಪಾಯ ಇಲ್ಲ ಎಂದು ಜಿಲ್ಲಾ ಸರ್ಜನ್ ಪ್ರಕಾಶ ಬಿರಾದರ್ ಹೇಳಿದ್ದಾರೆ. ನೇತ್ರಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಯುವಕ ಅಪ್ಜಲ್ ಸೋಲ್ಹಾಪುರನಿಗೂ ಬೆಂಕಿ ತಗುಲಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಸುಮಾರು 60-70% ರಷ್ಟು ಸುಟ್ಟಿದ್ದು ಅಪ್ಜಲ್ ಪರಿಸ್ಥಿತಿ ಗಂಭೀರ ಇದೆ ಎಂದು ಹೇಳಲಾಗ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ನೇತ್ರಾಳ ಕುಟುಂಬಸ್ಥರು ಅಮಿನಗಡ ಪೊಲೀಸ್ ಠಾಣೆಯಲ್ಲಿ ಅಪ್ಜಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: SC ST Reservation: ಬೋವಿ, ಲಂಬಾಣಿ, ಕೊರಮ, ಕೊರಚ ಜನಾಂಗದವರೂ ಎಸ್‌ಸಿ ಪಟ್ಟಿಯಲ್ಲೇ ಇರುತ್ತಾರೆ: ಸಿಎಂ ಬೊಮ್ಮಾಯಿ
ಕಿಡ್ನಾಪರ್ ಕೈಯಿಂದ ಚಾಣಾಕ್ಷತೆಯಿಂದ ಪಾರಾದ ಪೋರ!
ಚಿಕ್ಕಮಗಳೂರು: ಇದ್ದಕ್ಕಿದ್ದಂತೆ ಬಂದು ಎತ್ತಿಕೊಂಡು ಓಡಿದ ಕಿಡ್ನಾಪರ್‌ಗೆ ಅಷ್ಟೇ ಚಾಣಾಕ್ಷತನದಿಂದ ಒಬ್ಬ ಪೋರ ಚಳ್ಳೆಹಣ್ಣು ತಿನ್ನಿಸಿ ಪಾರಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇದು ಸಿಸಿಟಿವಿಯಲ್ಲಿ ದಾಖಲಾಗಿದೆ. ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಭಾನುವಾರ ಸಂಜೆ 6.38ರ ವೇಳೆಗೆ ಬಾಲಕನ ಅಪಹರಣಕ್ಕೆ ಈ ಯತ್ನ ನಡೆದಿದೆ. ಫುಟ್‌ಪಾತ್‌ನಲ್ಲಿ ಗೆಳೆಯರ ಜತೆಗೆ ಆಟವಾಡುತ್ತಿದ್ದ ಮಗುವನ್ನು ಅಪಹರಿಸಲು ಒಬ್ಬ ವ್ಯಕ್ತಿ ಯತ್ನಿಸಿದ್ದಾನೆ. ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ವ್ಯಕ್ತಿ ವೇಗವಾಗಿ ಮುನ್ನಡೆದಿದ್ದು, ಬಾಲಕ ನುಸುಳಿಕೊಂಡು ಹೆಗಲಿನಿಂದ ಕೆಳಗೆ ಹಾರಿ ಚಾಣಾಕ್ಷತೆಯಿಂದ ಎಸ್ಕೇಪ್ ಆಗಿದ್ದಾನೆ.
ಸಾಹಸ ಮೆರೆದು ಧೈರ್ಯ ಪ್ರದರ್ಶಿಸಿದ ಬಾಲಕ ಯುಕೆಜಿ ವಿದ್ಯಾರ್ಥಿಯಾಗಿದ್ದು, ಬಾಲಕನ ಸಮಯಸ್ಫೂರ್ತಿಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮೀಯ ರೀತಿಯಲ್ಲಿ ನಡೆದಿರುವ ಈ ಘಟನೆ ಜನನಿಬಿಡ ಪ್ರದೇಶದಲ್ಲೇ ನಡೆದಿದ್ದರೂ ತಕ್ಷಣ ಯಾರ ಗಮನಕ್ಕೂ ಬಂದಿಲ್ಲ. ಅಪಹರಣಕ್ಕೆ ಯತ್ನಿಸಿದ ವ್ಯಕ್ತಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಇದೀಗ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿದ್ದು, ಮಕ್ಕಳು ಮನೆಯ ಹೊರಗೆ ಆಡುತ್ತಿರುತ್ತಾರೆ. ಮಕ್ಕಳನ್ನು ಹೊರಗೆ ಬಿಡುವ ಮುನ್ನ ಪೋಷಕರು ಹುಷಾರಾಗಿರುವಂತೆ ಈ ಘಟನೆ ಎಚ್ಚರಿಸಿದೆ.