Site icon Vistara News

Bescom | 3 ತಿಂಗಳು ವಿದ್ಯುತ್‌ ಬಿಲ್‌ ಕಟ್ಟದಿದ್ದರೆ ಪರ್ಮನೆಂಟ್‌ ಪವರ್ ಕಟ್‌: ಬೆಸ್ಕಾಂನಿಂದ ಹೊಸ ಅಸ್ತ್ರ, ಗ್ರಾಹಕರಿಗೆ ಶಾಕ್‌

bescom

ಬೆಂಗಳೂರು: ವಿದ್ಯುತ್‌ ಬಿಲ್‌ ಕಟ್ಟದಿದ್ದರೆ ಫ್ಯೂಸ್‌ ತೆಗೆದುಕೊಂಡು ಹೋಗ್ತಾರೆ ಅನ್ನುವುದು ಎಲ್ಲರಿಗೂ ಗೊತ್ತಿರುವ ನಿಯಮ. ಬಿಲ್‌ ಕಟ್ಟಿದ ಕೂಡಲೇ ಅದನ್ನು ಮರಳಿಸುತ್ತಾರೆ. ಆದರೆ, ತಿಂಗಳಾನುಗಟ್ಟಲೆ ವಿದ್ಯುತ್‌ ಬಿಲ್‌ ಕಟ್ಟದ ಗ್ರಾಹಕರಿಗೆ ಬೆಸ್ಕಾಂ ಹೊಸ ಅಸ್ತ್ರವೊಂದನ್ನು ಪ್ರಯೋಗಿಸಲು ಮುಂದಾಗಿದೆ.

ಇನ್ನು ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಬಿಲ್‌ ಕಟ್ಟದೆ ಇರುವವರ ಫ್ಯೂಸ್‌ ತೆಗೆಯೋದಲ್ಲ, ಕನೆಕ್ಷನನ್ನು ಪರ್ಮನೆಂಟ್‌ ಆಗಿ ಕಟ್‌ ಮಾಡಲು ನಿರ್ಧರಿಸಲಾಗಿದೆ. ಅಂದರೆ, ಇನ್ನು ಮುಂದೆ ಫ್ಯೂಸ್‌ ತೆಗೆಯುವ ಬದಲು ಮನೆಯ ವಿದ್ಯುತ್‌ ಸಂಪರ್ಕದ ಲೈಸನ್ಸನ್ನೇ ರದ್ದು ಮಾಡಲು ಬೆಸ್ಕಾಂ ನಿರ್ಧರಿಸಿದೆ.

ಹೀಗಾದರೆ ಒಂದೊಮ್ಮೆ ಮೂರು ತಿಂಗಳ ನಂತರ ಕರೆಂಟ್‌ ಬಿಲ್‌ ಕಟ್ಟಿದರೂ ತಕ್ಷಣಕ್ಕೆ ವಿದ್ಯುತ್‌ ಸಂಪರ್ಕ ಸಿಗುವುದಿಲ್ಲ. ಮನೆಗೆ ಮತ್ತೆ ಹೊಸ ಕನೆಕ್ಷನ್‌ಗೆ ಅರ್ಜಿ ಸಲ್ಲಿಸಿ ಪಡೆಯಬೇಕಾಗುತ್ತದೆ. ಇದು ಸುದೀರ್ಘ ಪ್ರಕ್ರಿಯೆಯಾಗಿರುತ್ತದೆ ಮತ್ತು ಹಲವು ದಾಖಲೆಗಳನ್ನು ಕೊಡಬೇಕು, ಜತೆಗೆ ದೊಡ್ಡ ಮೊತ್ತದ ಡಿಪಾಸಿಟ್‌ ಕೂಡಾ ಇಡಬೇಕಾಗುತ್ತದೆ.

ಗ್ರಾಹಕರಿಗೆ ಶಾಕ್‌
ಸಾಮಾನ್ಯ ಗ್ರಾಹಕರಿಗೆ ಈ ಸೂಚನೆಯಿಂದ ತುಂಬಾ ದೊಡ್ಡ ಸಮಸ್ಯೆ ಆಗದಿರಬಹುದು. ಆದರೆ, ಮೂರಕ್ಕಿಂತ ಹೆಚ್ಚು ತಿಂಗಳು ವಿದೇಶಕ್ಕೆ ಹೋಗುವ ಕಾರಣಕ್ಕಾಗಿ ವಿದ್ಯುತ್‌ ಬಿಲ್‌ ಉಳಿಸಿಕೊಂಡವರು, ಇರುವ ಮನೆ ಬಿಟ್ಟು ಬೇರೆ ಕಡೆ ಹೋದವರಿಗೆ ಆತಂಕ ಶುರುವಾಗಲಿದೆ. ಹಾಗಂತ, ಬಿಲ್‌ ಪಾವತಿಸುವುದೇನೂ ಸಮಸ್ಯೆ ಅಲ್ಲ. ಈಗ ಆನ್‌ಲೈನ್‌ ಮೂಲಕ ವಿದ್ಯುತ್‌ ಬಿಲ್‌ ಪಾವತಿಸಲು ಅವಕಾಶವಿದೆ. ಹೀಗಾಗಿ ಉದ್ದೇಶಪೂರ್ವಕವಾಗಿ ವಿದ್ಯುತ್‌ ಬಿಲ್‌ ಪಾವತಿ ಬಾಕಿ ಉಳಿಸಿಕೊಳ್ಳುವವರು, ವಿಳಂಬ ಮಾಡುವವರಿಗೆ ಇದು ಭಾರಿ ತೊಂದರೆ ಉಂಟು ಮಾಡಲಿದೆ.

ಯಾಕೆ ಈ ಕ್ರಮ? ಯಾರು ಕೊಟ್ಟರು ಎಚ್ಚರಿಕೆ?
ತಿಂಗಳುಗಟ್ಟಲೆ ಬಿಲ್ ಪಾವತಿಸದೆ ನಿರ್ಲಕ್ಷ್ಯ ತೋರುವರರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಬೆಸ್ಕಾಂ ಈ ನೂತನ ಶಿಕ್ಷೆ ಪ್ರಯೋಗ ಮಾಡಿದೆ. ಜತೆಗೆ ಬೆಸ್ಕಾಂನ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಈ ಕ್ರಮಕ್ಕೆ ಮುಂದಾಗಿದೆ.
ಬೆಸ್ಕಾಂ ಎಂ.ಡಿ ಮಹಾಂತೇಶ ಬೀಳಗಿ ಅವರೇ ಸ್ವತಃ ಟ್ವೀಟ್‌ ಮೂಲಕ ಗ್ರಾಹಕರಿಗೆ ಈ ಎಚ್ಚರಿಕೆ ನೀಡಿದ್ದಾರೆ.

ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸುವಂತಹ ತೊಂದರೆ ಬೇಡ ಅಂದರೆ ಸರಿಯಾದ ಟೈಮ್ ಗೆ ವಿದ್ಯುತ್ ಬಿಲ್ ಕಟ್ಟಿ ಎನ್ನುವುದು ಅವರು ನೀಡಿರುವ ಎಚ್ಚರಿಕೆಯ ಬಾಟಮ್‌ ಲೈನ್‌. ಹಾಗಂತ ಇದೇನೂ ಹೊಸ ನಿಯಮ ಅಲ್ಲ. ವಿದ್ಯುತ್‌ ಸಂಪರ್ಕ ಒಪ್ಪಂದದಲ್ಲೇ ಇದೆ ಎಂದು ಉಲ್ಲೇಖಿಸಿದ್ದಾರೆ.

ಕೆಲ ಅಪಾರ್ಟ್‌ಮೆಂಟ್ ನಿವಾಸಿಗಳು ತಿಂಗಳುಗಳು ಕಳೆದ್ರೂ ಬಿಲ್ ಪಾವತಿ ಮಾಡುತ್ತಿರಲಿಲ್ಲ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮೂರು ತಿಂಗಳು ಮೀರಿದರೆ ಈಗ ಹೇಳಿದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಸ್ಕಾಂನ ಜನರಲ್ ಮ್ಯಾನೇಜರ್ ನಾಗರಾಜು ಹೇಳಿದ್ದಾರೆ.

ಇದನ್ನೂ ಓದಿ | BESCOM Payment | ಈಗ ಎಲ್ಲ ಸರಿಯಾಗಿದೆ; ಆನ್‌ಲೈನ್‌ ಮೂಲಕವೂ ಕರೆಂಟ್‌ ಬಿಲ್‌ ಕಟ್ಟಿ ಎಂದ ಬೆಸ್ಕಾಂ

Exit mobile version