ಬೆಂಗಳೂರು: ನವರಾತ್ರಿ ಸಮಯದಲ್ಲಿ ರಾಜ್ಯದ ಜನರಿಗೆ ಇಂಧನ ಇಲಾಖೆ ವಿದ್ಯುತ್ ಕಡಿತದ (Power Cuts) ಶಾಕ್ ನೀಡಿದೆ. ರಾಜ್ಯದಲ್ಲಿ ಒಂದು ಕಡೆ ಬರದ ಪೆಟ್ಟು, ಮಗದೊಂದು ಕಡೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆಯಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಲೋಡ್ ಶೆಡ್ಡಿಂಗ್ ಕಾಟದಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.
ರಾಜ್ಯದಲ್ಲಿ ಸದ್ಯ ತೀವ್ರ ವಿದ್ಯುತ್ ಕೊರತೆ ಬಗ್ಗೆ ಬಹಿರಂಗವಾಗಿ ಇಂಧನ ಇಲಾಖೆ ಒಪ್ಪಿಕೊಂಡಿದ್ದು, ಇದರಿಂದ ಕರುನಾಡು ಕಗ್ಗತ್ತಲಲ್ಲಿ ಮುಳಗಿದೆಯಾ ಎಂಬ ಆತಂಕ ಸೃಷ್ಟಿಯಾಗಿದೆ. ವಿಪಕ್ಷಗಳ ಟೀಕೆ ಬೆನ್ನಲ್ಲೇ ವಿಸ್ತ್ರತ ಅಂಕಿ ಅಂಶಗಳನ್ನು ಇಂಧನ ಇಲಾಖೆಯು ರಾಜ್ಯ ಸರ್ಕಾರಕ್ಕೆ ನೀಡಿದೆ.
ಇದನ್ನೂ ಓದಿ | Karnataka Politics : ಡಿಕೆಶಿ ಕಾಲಿಗೆ ಬಿದ್ದಿದ್ದೇನೆ; ಅನುದಾನ ಕೊಡದಿದ್ದರೆ ಉಗ್ರ ಪ್ರತಿಭಟನೆ ಎಂದ ಮುನಿರತ್ನ
ಮುಂಗಾರು ಮಳೆ ಅಭಾವದಿಂದ ಬೆಳೆಗಳಿಗೆ ನೀರಿಗಾಗಿ ಕೃಷಿ ಪಂಪ್‌ಸೆಟ್‌ಗಳಿಂದ ಅತಿ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತಿದೆ. ವಿದ್ಯುತ್ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಇಂಧನ ಇಲಾಖೆ ವಿದ್ಯುತ್ ಕಡಿತದ ಮೊರೆಹೋಗಿದೆ. ಈಗಾಗಲೇ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿದ್ಯುತ್ ಕಡಿತ ಶುರುವಾಗಿದ್ದು, ಇದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.
ಇನ್ನು ಹಲವು ಜಿಲ್ಲೆಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.
ಇಂಧನ ಇಲಾಖೆಯ ಅಂಕಿ ಅಂಶದಲ್ಲಿ ಏನಿದೆ?
- ರಾಜ್ಯದಲ್ಲಿ ಈ ಬಾರಿ ಮುಂಗಾರು ಕೊರತೆಯಿಂದಾಗಿ ತೀವ್ರ ವಿದ್ಯುತ್ ಸಮಸ್ಯೆ ಎದುರಾಗಿದೆ
- ಪವನ ವಿದ್ಯುತ್ ಹಾಗೂ ಸೋಲಾರ್ ವಿದ್ಯುತ್ ಉತ್ಪಾದನೆಯೂ ತೀವ್ರ ಕುಸಿತ ಕಂಡಿದೆ
- ಅಕ್ಟೋಬರ್ನಲ್ಲಿ ಈ ವರ್ಷ 15 ಸಾವಿರ ಮೆಗಾ ವ್ಯಾಟ್ ವಿದ್ಯುತ್ಗೆ ಬೇಡಿಕೆ ಇದೆ
- ಆದ್ರೇ ಕಳೆದ ವರ್ಷ ಇದೇ ಸಮಯದಲ್ಲಿ 9,032 ಮೆಗಾ ವ್ಯಾಟ್ ವಿದ್ಯುತ್ ನಿತ್ಯ ಬೇಡಿಕೆ ಇರುತ್ತಿತ್ತು
- 1500-2000 ಮೆಗಾವ್ಯಾಟ್ ವಿದ್ಯುತ್ ಕೊರತೆ ಸಮಸ್ಯೆಯನ್ನು ಇಲಾಖೆ ಎದುರಿಸುತ್ತಿದೆ
- ಸಕಾಲಕ್ಕೆ ಮಳೆಯಾಗದೇ ಇರವುದರಿಂದ ಆಗಸ್ಟ್ನಲ್ಲಿ ದಾಖಲೆ ಎಂಬಂತೆ 16,950 ಮೆಗಾ ವ್ಯಾಟ್ ವಿದ್ಯುತ್ಗೆ ಡಿಮ್ಯಾಂಡ್ ಎದುರಾಗಿತ್ತು. ಹೀಗಾಗಿ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ ಹರಸಾಹಸ ಪಡುತ್ತಿದೆ.
- ರೈತರು ಕೃಷಿ ಪಂಪ್ ಸೆಟ್ಗಳ ಬಳಕೆ ಹೆಚ್ಚಿಸಿದ್ದರಿಂದ ಅನಿವಾರ್ಯವಾಗಿ ವಿದ್ಯುತ್ ಡಿಮ್ಯಾಂಡ್ ಹೆಚ್ಚಿದೆ
- ಕಲ್ಲಿದ್ದಲಿನ ಗುಣಮಟ್ಟ ಕೂಡ ಸರಿಯಾಗಿರದೇ ಇರುವುದು ವಿದ್ಯುತ್ ಉತ್ಪಾದನೆ ಕುಸಿಯಲು ಕಾರಣ