Site icon Vistara News

ಮೈಶುಗರ್‌ ಸಕ್ಕರೆ ಕಾರ್ಖಾನೆಯಿಂದ 40 ಕೋಟಿ ರೂ. ವಿದ್ಯುತ್‌ ಬಿಲ್ ಬಾಕಿ! ಕರೆಂಟ್ ಪೂರೈಕೆಗೆ ದಿನೇಶ್‌ ಗೂಳಿಗೌಡ ಮನವಿ

mysugar factory mandya Power dues and Dinesh Gooligowda requests to ‌KJ George

ಬೆಂಗಳೂರು: ಮೈಶುಗರ್‌ ಸಕ್ಕರೆ ಕಾರ್ಖಾನೆಯು (Mysugar Factory Mandya) ಮಂಡ್ಯ ಭಾಗದ ರೈತರ ಜೀವನಾಡಿಯಾಗಿದೆ. ಇಲ್ಲಾಗುವ ಕಬ್ಬಿನ ಕಟಾವನ್ನು ನಂಬಿಕೊಂಡು ಲಕ್ಷಾಂತರ ರೈತ ಕುಟುಂಬಗಳು ಇವೆ. ಅಲ್ಲದೆ, ಈ ಬಾರಿ ಸುಮಾರು 5 ಲಕ್ಷ ಟನ್‌ ಕಬ್ಬನ್ನು ನುರಿಸುವ ಗುರಿಯನ್ನು ಹಾಕಿಕೊಂಡಿದೆ. ಈಗ ಎದುರಾಗಿರುವ ಸಮಸ್ಯೆಯೆಂದರೆ ಈ ಹಿಂದಿನಿಂದಲೂ ನಷ್ಟದಲ್ಲಿದ್ದ ಕಂಪನಿಗೆ ವಿದ್ಯುತ್‌ ಬಿಲ್‌ ಅನ್ನು ಕಟ್ಟಲು ಸಾಧ್ಯವಾಗಿಲ್ಲ. 40.86 ಕೋಟಿ ರೂಪಾಯಿಗಳ ವಿದ್ಯುತ್ ಬಾಕಿ ಮೊತ್ತವಿದ್ದು, ಇದನ್ನು ಹಂತ ಹಂತವಾಗಿ ಪಾವತಿ ಮಾಡಲು ಹಾಗೂ ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸಲು ಅಗತ್ಯ ವಿದ್ಯುತ್ ಸರಬರಾಜು ಮಾಡಲು ಚೆಸ್ಕಾಂನವರಿಗೆ ಆದೇಶಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ (MLC Dinesh Gooligowda) ಅವರು ಇಂಧನ ಸಚಿವ ಕೆ.ಜೆ. ಜಾರ್ಜ್‌ (KJ George) ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ವಿಧಾನಸೌಧದಲ್ಲಿ ಬುಧವಾರ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರನ್ನು ಭೇಟಿ ಮಾಡಿದ ವಿಧಾನ ಪರಿಷತ್‌ ಸದಸ್ಯರಾದ ದಿನೇಶ್‌ ಗೂಳಿಗೌಡ ಅವರು, ಈ ಭಾಗದ ಪ್ರಮುಖ ಬೆಳೆಯಲ್ಲಿ ಕಬ್ಬು ಸಹ ಒಂದು. ಈ ಹಂತದಲ್ಲಿ ಕಬ್ಬು ನುರಿಸಲು ತೊಂದರೆಯಾದರೆ ಅದು ರೈತರ ಮೇಲೆ ಬಹಳವೇ ಪರಿಣಾಮವನ್ನು ಬೀರುತ್ತದೆ. ರೈತರ ಹಿತದೃಷ್ಟಿಯಿಂದ ತಾವು ಮಧ್ಯ ಪ್ರವೇಶ ಮಾಡಿ ಕಬ್ಬು ನುರಿಸಲು ವಿದ್ಯುತ್‌ ಸಮಸ್ಯೆ ಆಗದಂತೆ ಆದೇಶಿಸಲು ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಕೋರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ಅಧಿಕಾರಿಗಳ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಪತ್ರದಲ್ಲೇನಿದೆ?

ಮೈಸೂರು ಸಕ್ಕರೆ ಕಂಪನಿ ನಿಯಮಿತ, ಮಂಡ್ಯ ಕಂಪೆನಿಯು ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದು, ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 5 ಲಕ್ಷ ಟನ್ ಕಬ್ಬನ್ನು ಈ ಕಾರ್ಖಾನೆಗೆ ಸರಬರಾಜು ಮಾಡಲು ರೈತರು ಒಪ್ಪಂದ ಮಾಡಿಕೊಂಡಿರುತ್ತಾರೆ. ಪ್ರಸ್ತುತ ಸದರಿ ಕಂಪೆನಿಯವರು ಚೆಸ್ಕಾಂಗೆ ಸುಮಾರು ರೂ.40.86 ಕೋಟಿಗಳ ವಿದ್ಯುತ್ ಬಾಕಿ ಮೊತ್ತವನ್ನು ಪಾವತಿಸಬೇಕಾಗಿರುತ್ತದೆ. ಆದರೆ, ಕಂಪೆನಿಯ ಆರ್ಥಿಕ ಪರಿಸ್ಥಿತಿಯು ಇನ್ನು ಸುಧಾರಿಸದಿರುವುದರಿಂದ ವಿದ್ಯುತ್ ಬಾಕಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿರುವುದಿಲ್ಲ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಸವಾರರಿಗೆ ಮತ್ತೊಂದು ಶಾಕ್! ಜುಲೈ 1ರಿಂದ ಮಂಡ್ಯದಲ್ಲೂ ಟೋಲ್‌ ಬರೆ

ಆದ್ದರಿಂದ, ಪ್ರಸಕ್ತ ಹಂಗಾಮಿನಲ್ಲಿ ಕಬ್ಬನ್ನು ನುರಿಯಲು ವಿದ್ಯುತ್ ಅವಶ್ಯಕತೆಯಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡಲು ಹಾಗೂ ಬಾಕಿ ಮೊತ್ತವನ್ನು ಹಂತ-ಹಂತವಾಗಿ ಪಾವತಿಸಲು ಸಕ್ಕರೆ ಕಾರ್ಖಾನೆಗೆ ಅನುಮತಿ ನೀಡಲು ವ್ಯವಸ್ಥಾಪಕ ನಿರ್ದೇಶಕರು, ಚೆಸ್ಕಾಂ ಇವರಿಗೆ ಆದೇಶಿಸಬೇಕೆಂದು ಮಂಡ್ಯ ಜಿಲ್ಲೆಯ ರೈತರ ಪರವಾಗಿ ಶಾಸಕ ದಿನೇಶ್‌ ಗೂಳಿಗೌಡ ಕೋರಿದ್ದಾರೆ.

Exit mobile version